ಶಿವಮೊಗ್ಗ: ಸಿಎಂ ಬದಲಾವಣೆ ಬಗ್ಗೆ ಬಹಳ ದಿನದಿಂದ ಹೇಳಲಾಗುತ್ತಿದೆ. ಹಿರಿಯ ಮಂತ್ರಿಗಳನ್ನು ಬಿಡ್ತಾರೆ. ಹೊಸಬರನ್ನು ಸಂಪುಟಕ್ಕೆ ತಗೋತಾರೆ. ಇವತ್ತು, ನಾಳೆ, ನಾಡಿದ್ದು, ಬದಲಾವಣೆ ಆಗುತ್ತೆ. ಹೀಗೆ ಯುಗಾದಿ, ಸಂಕ್ರಾಂತಿ, ದಸರಾ ಎಲ್ಲವೂ ಬಂದು ಹೋಗಿದೆ. ಆದರೆ ಯಾವ ಮಂತ್ರಿಯೂ ಬದಲಾವಣೆ ಅಗಿಲ್ಲ, ಇವೆಲ್ಲಾ ಕೇವಲ ಊಹಾಪೋಹ. ಬರೀ ಸೃಷ್ಟಿ ಅಷ್ಟೇ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ಅನ್ನೋದು ಸಣ್ಣ ವಿಚಾರ ಅಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಸಾಕಷ್ಟು ಅಭಿವೃದ್ಧಿ ಅಗಿದೆ. ರಾಜ್ಯದ ಜನ ಮೆಚ್ಚುತ್ತಿದ್ದಾರೆ. ಇದನ್ನು ಸಹಿಸಲಾಗದ ಕಾಂಗ್ರೆಸ್ ನೂರಾರು ಗೊಂದಲ ಸೃಷ್ಟಿಸುತ್ತಿದೆ. ಸಿಎಂ ಬದಲಾವಣೆ ವಿಚಾರವೂ ಇವರದೇ ಸೃಷ್ಟಿ. ಕಾಂಗ್ರೆಸ್ ನವರು ಇಲ್ಲದೇ ಇರೋ ಗೊಂದಲ ಸೃಷ್ಟಿ ಮಾಡ್ತಾರೆ ಎಂದರು.
ಪಿಎಸ್‌ಐ ನೇಮಕಾತಿ ಅಕ್ರಮ ವಿಚಾರ ಕಾಂಗ್ರೆಸ್ ಸರ್ಕಾರ ಇದ್ದಿದ್ರೆ ಹೊರಗೇ ಬರ್ತಾ ಇರಲಿಲ್ಲ. ಮುಚ್ಚಿ ಹಾಕುತ್ತಿದ್ದರು. ಆದರೆ ಬಿಜೆಪಿ ಸರ್ಕಾರ ಹಾಗೆ ಮಾಡಿಲ್ಲ. ಇಡೀ ಅಕ್ರಮದ ಸಮಗ್ರ ತನಿಖೆ ನಡೆಸುತ್ತಿದೆ. ಇದು ಕಾಂಗ್ರೆಸ್‌ನವರಿಗೆ ಸಹ್ಯವಾಗುತ್ತಿಲ್ಲ. ಇವತ್ತು ಯಾವುದೇ ಇಲಾಖೆಯ ಅಭಿವೃದ್ಧಿ ಕಾರ್ಯಗಳು ಸಹ ನಿಂತಿಲ್ಲ. ಜನ ಸಹ ಸರ್ಕಾರದ ಕಾರ್ಯದ ಬಗ್ಗೆ ಸಂತೋಷದಿಂದ ಮಾತನಾಡುತ್ತಿದ್ದಾರೆ. ಇದನ್ನು ಅರಗಿಸಿಕೊಳ್ಳಲಾಗದೆ ಕಾಂಗ್ರೆಸ್‌ನವರು ಗೊಂದಲ ಸೃಷ್ಟಿಸುವ ಕಾರ್ಯ ಮಾಡುತ್ತಿದ್ದಾರೆ ಎಂದರು.
ಪಠ್ಯದಲ್ಲಿ ಹೆಡ್ಗೆವಾರ್ ಪಾಠ ಹಿಂದೆ ಸರಿಯೊಲ್ಲ
ಪಠ್ಯಪುಸ್ತಕದಲ್ಲಿ ಭಗತ್ ಸಿಂಗ್, ನಾರಾಯಣ್ ಗುರು ಹೆಸರು ತೆಗೆದರು ಎಂದು ಹೇಳಿದ್ರು. ಇವರು ನೋಡಿದ್ದಾರಾ? ಸುಮ್ ಸುಮ್ನೆ ಕ್ರೀಯೆಟ್ ಮಾಡ್ತಾರೆ. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಎಷ್ಟು ಸುಳ್ಳು ಹೇಳ್ತಾರೆ ಎಂದರೆ ಅದಕ್ಕೆ ಇತಿಮಿತಿಯೇ ಇಲ್ಲ. ಯಾವ ಕಾರಣಕ್ಕೂ ಕೂಡ ನಾರಾಯಣ ಗುರು ಮತ್ತು ಭಗತ್ ಸಿಂಗ್ ಹೆಸರು ತೆಗೆಯಲ್ಲ. ಡಾ| ಹೆಡ್ಗೆವಾರ್ ಅವರ ರಾಷ್ಟ್ರಭಕ್ತಿ ವಿಚಾರವನ್ನು ಕೂಡ ಪಠ್ಯದಲ್ಲಿ ಅಳವಡಿಸಲಾಗುತ್ತಿದೆ. ರಾಷ್ಟ್ರಭಕ್ತರು ಎಂಬ ವಿಚಾರವನ್ನು ಯಾರ ಮುಲಾಜಿಲ್ಲದೇ ಹೇಳುತ್ತಿದ್ದೇನೆ. 1925ರಲ್ಲಿ ಆರ್‌ಎಸ್‌ಎಸ್ ಸ್ಥಾಪನೆ ಆಗಿಲ್ಲದಿದ್ದರೆ ದೇಶ ಯಾವ ಸ್ಥಿತಿಯಲ್ಲಿ ಇರುತ್ತಿತ್ತು. ಕೆಲವು ಮುಸಲ್ಮಾನರು ದಂಗೆ ಎಬ್ಬಿಸುವ ಕೆಲಸ ಮಾಡ್ತಾ ಇದ್ದರು. ಹಿಂದೂ ಸಮಾಜವನ್ನು ರಕ್ಷಣೆ ಮಾಡುವ ಉದ್ದೇಶದಿಂದ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ಹೆಡ್ಗೆವಾರ್ ಆರ್‌ಎಸ್‌ಎಸ್ ಸ್ಥಾಪನೆ ಮಾಡದಿದ್ದರೆ ಹಿಂದೂಗಳು ಬಲಹೀನ ಸ್ಥಿತಿಯಲ್ಲಿ ಇರಬೇಕಿತ್ತು. ಹೆಡ್ಗೆವಾರ್ ಅವರ ರಾಷ್ಟ್ರಭಕ್ತಿಯ ವಿಚಾರ ಸೇರಿಸಿದ್ರೆ ಕಾಂಗ್ರೆಸ್‌ನವರಿಗೆ ಯಾಕೆ ಹೊಟ್ಟೆ ಉರಿ, ಅವರಿಗೆ ಏನು ತೊಂದರೆ? ಇವರ ತರ ವ್ಯಕ್ತಿ ಪೂಜೆ ಮಾಡ್ಕೊಂಡು ಇರಬೇಕಾ? ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ವಿರೋಧ ಮಾಡಿದರೆಂದು ಅದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಇವರ ಪೂರ್ವಜರಾದ ಇಂದಿರಾ ಗಾಂಧಿ ಆರ್‌ಎಸ್‌ಎಸ್ ಬ್ಯಾನ್ ಮಾಡಲು ಹೊರಟ್ಟಿದ್ದರು. ಅವರಿಂದಲೇ ಆಗಲಿಲ್ಲ. ಇನ್ನು ಇವರ ಕೈಯಲ್ಲಿ ಆಗುತ್ತಾ ಎಂದರು.
ಮಾತನಾಡೋವಾಗ ಪರಿಜ್ಞಾನ ಇರಲಿ
ಜಾಬ್, ಹಲಾಲ್ ಮತ್ತು ಆಜಾನ್ ಎಲ್ಲವೂ ಬಿಜೆಪಿ ಸೃಷ್ಟಿ ಎಂದು ಕೆಪಿಸಿಸಿ ಉಪಾಧ್ಯಕ್ಷ ಕೆ.ಎನ್. ರಾಜಣ್ಣ ಹೇಳಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, 6 ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿ ವಿವಾದ ಸೃಷ್ಟಿ ಮಾಡಿ ಎಂದು ನಾವು ಹೇಳಿದ್ದೇವಾ? ಮೆಕ್ಕಾ ಕಡೆ ಮುಖ ಮಾಡಿ ಹಲಾಲ್ ಮಾಡಿ ಎಂದು ನಾವು ಹೇಳಿದ್ದೆವಾ? ಅವರು ಬೇಕಾದರೆ ಮಾಡಲಿ, ನಾವ್ಯಾಕೆ ಮೆಕ್ಕಾ ಕಡೆ ಮುಖ ಮಾಡಬೇಕು? ನಮಗೇನು ಗ್ರಹಚಾರಾನಾ? ಅವರದೇ ಪಕ್ಷದ ಪ್ರಿಯಾಂಕ ಗಾಂಧಿ ಬಿಕಿನಿ ಬೇಕಾದರೂ ಹಾಕಿಕೊಳ್ಳಲಿ ಎಂದು ಹೇಳಿದ್ದರು. ಶಾಲಾ-ಕಾಲೇಜಿಗೆ ಯಾರಾದ್ರೂ ಹಾಗೆ ಹೋಗ್ತಾರಾ? ನಾವೇನು ಮಾತನಾಡುತ್ತೆವೆ ಎಂಬ ಪರಿಜ್ಞಾನ ಇರಬೇಕು. ಇವರಿಗೆಲ್ಲ ಎಲ್‌ಕೆಜಿ ಮಕ್ಕಳು ಹೋಗಿ ಪಾಠ ಮಾಡಿ ಕೊಡಬೇಕು ಅಷ್ಟೇ ಎಂದರು.
ಗೋರಿ ಕಟ್ಟಿದಾಕ್ಷಣ ದತ್ತಪೀಠ ಬದಲಾಗೊಲ್ಲ
ದತ್ತಪೀಠ ವಿವಾದ ವಿಚಾರವಾಗಿ ಕೋರ್ಟ್ ಆದೇಶ ಇದ್ದರೂ ಅಲ್ಲಿ ಮಾಂಸದ ಅಡುಗೆ ಮಾಡಿ ತಿನ್ನುತ್ತಾರೆ ಎಂದ್ರೆ ಎಷ್ಟು ಸೊಕ್ಕು ಇರಬೇಕು. ಯಾರಾದ್ರೂ ಒಬ್ಬ ಕಾಂಗ್ರೆಸ್ಸಿಗ ಇದನ್ನು ಖಂಡನೆ ಮಾಡಿದ್ರಾ? ಹಿಜಾಬ್‌ನಿಂದ ಹಿಡಿದು ಎಲ್ಲ ವಿಚಾರದ ಬಗ್ಗೆ ಇವರು ಮಾತನಾಡೋದಿಲ್ಲ. ಮುಸಲ್ಮಾನರು ಏನೇ ತಪ್ಪು ಮಾಡಿದ್ರೂ ಇವರಿಗೆ ಒಪ್ಪಿಗೆ. ಮಸ್ಲಿಂ ಪುಂಡರಿಗೆ ಕಾಂಗ್ರೆಸ್‌ನವರೇ ಕುಮ್ಮಕ್ಕು ಕೊಡುತ್ತಿದ್ದಾರೆ. ಕೋರ್ಟ್ ಆದೇಶಕ್ಕೆ ಬೆಲೆ ಕೊಡದವರಿಗೆ ಬೆಂಬಲವಾಗಿ ನಿಲ್ತಾರೆ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರೇ ರಾಜ್ಯದಲ್ಲಿ ರಾಷ್ಟ್ರದ್ರೋಹಿಗಳು. ನ್ಯಾಯಾಲಯದ ಆದೇಶಕ್ಕೆ ನಾವು ಬೆಲೆ ಕೊಡುತ್ತೆವೆ. ಗೋರಿ ನಿರ್ಮಾಣ ಮಾಡಿ, ಬಾಬಬುಡನಗಿರಿ ಎಂದು ಹೆಸರು ಹೇಳಿದರೆ ಆಗುತ್ತಾ? ಅದು ದತ್ತಪೀಠ ಹೆಸರಿನಿಂದಲೇ ಇದೆ. ನ್ಯಾಯಾಲಯದ ಆದೇಶದಂತೆ, ಅದು ದತ್ತಪೀಠವೇ ಆಗಿದೆ ಎಂದರು.