Advertisement

ನೂರಾರು ಎಕರೆ ಜಮೀನು ಇದ್ರೂ ಬಡವ

09:54 PM Jan 11, 2020 | Team Udayavani |

ಶ್ರೀನಿವಾಸಪುರ: ತಾನು ಬಡವ, ಏನೂ ಇಲ್ಲ, ಬಾಡಿಗೆ ಮನೆಯಲ್ಲಿ ವಾಸ ಎಂದು ಸತ್ಯಹರಿಶ್ಚಂದ್ರನಂತೆ ಮಾತನಾಡುವ ಮಾಜಿ ಸ್ಪೀಕರ್‌ ರಮೇಶ್‌ಕುಮಾರ್‌, ನೂರಾರು ಎಕರೆ ಜಮೀನು, ಮಗನ ಹೆಸರಲ್ಲಿ ಕೋಟ್ಯಂತರ ರೂ.ನ ಬಂಗಲೆ, ಕೊಲೆ ಪ್ರಕರಣ, ಸಚಿವರು, ಸ್ಪೀಕರು ಆಗಿದ್ದಾಗ ಕೋಟ್ಯಂತರ ರೂ. ಹಗರಣವೂ ಮಾಡಲಾಗಿದೆ ಎಂದು ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಗಂಭೀರ ಆರೋಪ ಮಾಡಿದರು.

Advertisement

ಪಟ್ಟಣದಲ್ಲಿನ ಜೆಡಿಎಸ್‌ ಕಚೇರಿಯಲ್ಲಿ ಶನಿವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸಹುಡ್ಯ ಗ್ರಾಮದ ಸರ್ವೆ ನಂ.1ರಲ್ಲಿ 9.10 ಎಕರೆ, 2ರಲ್ಲಿ 52.29 ಎಕರೆ, ಇವುಗಳಿಗೆ ಕಂದಾಯ ದಾಖಲೆ ಇಲ್ಲದೇ ಹಾಗೂ 120 ಎಕರೆ ಒತ್ತುವರಿ ಜಮೀನು ಹೊಂದಿದ್ದಾರೆ. ಬೆಂಗಳೂರಿನಲ್ಲಿ ಮಗನ ಹೆಸರಿನಲ್ಲಿ ಕೋಟ್ಯಂತರ ರೂ. ಮೌಲ್ಯದ ಬಂಗಲೆ, ಆರೋಗ್ಯ ಸಚಿವ, ಸ್ಪೀಕರ್‌ ಆಗಿದ್ದಾಗ ಕೋಟ್ಯಂತರ ರೂ. ಹಗರಣ, ಕೊಲೆ ಪ್ರಕರಣ ಇರುವ ಶಾಸಕ ಕೆ.ಆರ್‌.ರಮೇಶ್‌ಕುಮಾರ್‌ ಹೇಗೆ ಬಡವನೆಂದು ಹೇಳಬೇಕು ಎಂದು ಮಾಜಿ ಶಾಸಕ ಆರೋಪಿಸಿದರು.

ಮಾನನಷ್ಟ ಮೊಕದ್ದಮೆ: ಕಳೆದ ಎರಡು ದಿನಗಳ ಹಿಂದೆ ನನ್ನ ವಿರುದ್ಧ ಜೆಎಂಎಫ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿರುವ ಬಗ್ಗೆ ಪ್ರತಿಕ್ರಿಯಿಸಿ, ನಾನು ತಮಗೆ ನೀಡುತ್ತಿರುವ ರಮೇಶ್‌ ಕುಮಾರ್‌ ಅವರ ಹಗರಣಗಳ ಬಗ್ಗೆ ವಿಧಾನಸೌಧದ ಕಚೇರಿಯ ಕುಮಾರಸ್ವಾಮಿ ಅವರ ಜೆಡಿಎಸ್‌ ಕಚೇರಿಯಲ್ಲಿ ಸುದ್ದಿಗೋಷ್ಠಿ ಮಾಡಿದ್ದೆ. ಇದರಿಂದ ನನ್ನ ಮೇಲೆ ಮಾನನಷ್ಟ ಮೊಕದ್ದಮೆ ಹಾಕಿ ಜೈಲಿಗೆ ಹೋಗುವಂತೆ ಮಾಡುತ್ತೇನೆಂದು ಹೇಳಿದ್ದಾರೆ. 40 ವರ್ಷಗಳ ರಾಜಕಾರಣ ಮಾಡಿ ಬಡವರ ಹೆಸರನ್ನು ಹೇಳುತ್ತಾ, ನೂರಾರು ಎಕರೆ ಜಮೀನು ಮಾಡಿದ್ದಾರೆ. ಇಲ್ಲಿ ಬಡವ ಒಂದು ಎಕರೆ ಜಮೀನು ಮಾಡಲು ಸಾಧ್ಯವಾಗುತ್ತಿಲ್ಲ. ನನಗೆ ಮನೆ ಇಲ್ಲ ಎಂದು ಹೇಳುತ್ತಾರೆ. ಇವರಿಗೆ ಸ್ವಲ್ಪವಾದರೂ ಗೌರವವಿದೆಯೇ ಎಂದು ಪ್ರಶ್ನೆ ಮಾಡಿದರು.

ಏನೇ ಮಾಡಿದ್ರೂ ಸರಿ ಅನ್ನಬೇಕು: ಬಾಬಾ ಸಾಹೇಬ್‌ ಅಂಬೇಡ್ಕರ್‌ ಕೊಟ್ಟ ಸಂವಿಧಾನದ 19ನೇ ಕಲಂನಲ್ಲಿ ಪ್ರತಿಯೊಬ್ಬ ನಾಗರಿಕನಿಗೆ ಮಾತನಾಡುವ ಹಕ್ಕನ್ನು ಕೊಟ್ಟಿದ್ದಾರೆ. 40 ವರ್ಷಗಳಿಂದ ಅನ್ಯಾಯ, ದುರುಪಯೋಗ, ದ್ರೋಹ, ಲೋಪದೋಷಗಳನ್ನು ಕಂಡು ಕೂರಲು ಸಾಧ್ಯವಿಲ್ಲ. ಜನರ ಪರವಾಗಿ ನಾನು ಹೋರಾಟ ಮಾಡುತ್ತೇನೆ. ನನಗೆ ಭಯವಿಲ್ಲ, ಅವರು ಏನು ಮಾಡಿದರೂ ಸರಿ ಎನ್ನಬೇಕು ಅನ್ನುವ ಪರಿಸ್ಥಿತಿ ಇದೆ ಎಂದು ಹೇಳಿದರು.

ಅಧಿಕಾರ ದುರುಪಯೋಗ: ಹೊಸಹುಡ್ಯ ಗ್ರಾಮದ ಸರ್ವೇ ನಂಬರ್‌ 1 ಮತ್ತು 2 ರಲ್ಲಿ ಆಕ್ರಮವಾಗಿ ಜಮೀನು ಹೊಂದಿದ್ದಾರೆ. ಈ ಬಗ್ಗೆ ಆಕ್ರಮ ತೆರವುಗೊಳಿಸಲು ಆದೇಶವಾಗಿದೆ. ಜೊತೆಗೆ ಕಂದಾಯ ಮತ್ತು ಅರಣ್ಯ ಇಲಾಖೆಗಳಿಂದ ಜಂಟಿ ಸರ್ವೆ ಮಾಡಿಸಬೇಕೆಂದಿದ್ದರೂ ರಮೇಶ್‌ಕುಮಾರ್‌ ಅಧಿಕಾರ ದುರುಪಯೋಗಪಡಿಸಕೊಂಡು ತಡೆಹಿಡಿದಿದ್ದಾರೆ ಎಂದು ಅರೋಪಿಸಿದರು.

Advertisement

ಬೆಂಗಳೂರಿನ ಇಂದಿರಾನಗರದಲ್ಲಿ ತಮ್ಮ ಮಗನ ಹೆಸರಿನಲ್ಲಿ ಶಾಪಿಂಗ್‌ ಕಾಂಪ್ಲೆಕ್ಸ್‌, ಹೆಗ್ಗಡೆ ನಗರದಲ್ಲಿ 8 ಕೋಟಿ ರೂ. ನಿವೇಶನ, 16 ಕೋಟಿ ರೂ. ಮೌಲ್ಯದ ಮನೆ ಹೊಂದಿದ್ದಾರೆ. ತಮಗೆ ಆದಾಯ ಹೇಗೆ ಸ್ವಾಮಿ ಎಂದರು. ಗೋಷ್ಠಿಯಲ್ಲಿ ಜಿಪಂ ಸದಸ್ಯರಾದ ನಂಜುಡಪ್ಪ, ತೂಪಲ್ಲಿ ನಾರಾಯಣಸ್ವಾಮಿ, ಮಾಜಿ ಸದಸ್ಯರಾದ ಸೋಮಶೇಖರ್‌, ವಕೀಲ ಮಾರುತಿರೆಡ್ಡಿ, ಕೆ.ಶಿವಪ್ಪ, ಬಿ.ವಿ.ರೆಡ್ಡಿ, ಹೊಗಳಗೆರೆ ಆಂಜಿ, ಶಿವಪುರ ಗಣೇಶ್‌, ಪೂಲು ಶಿವಾರೆಡ್ಡಿ, ಹೋಳೂರು ಸಂತೋಷ್‌, ವೆಂಕಟರಾಮರೆಡ್ಡಿ ಇತರರು ಇದ್ದರು.

ಆರೋಗ್ಯ ಸಚಿವರಾಗಿದ್ದಾಗ 535 ಕೋಟಿ ರೂ. ಹಗರಣ?: ಸಿದ್ದರಾಮಯ್ಯ ಮಂತ್ರಿಮಂಡಲದಲ್ಲಿ ಆರೋಗ್ಯ ಸಚಿವರಾಗಿದ್ದಾಗ ಬಡವರಿಗೆ ಒದಗಿಸುವ ಔಷಧಿ, ಮಾತ್ರೆ, ಆ್ಯಂಬುಲೆನ್ಸ್‌ ಇತ್ಯಾದಿಗಳ ವ್ಯವಹಾರದಲ್ಲಿ 535 ಕೋಟಿ ರೂ. ಹಗರಣ ನಡೆದಿದೆ. ಈ ಬಗ್ಗೆ ಭಾರತದ ಮಹಾಲೆಕ್ಕಪರಿಶೋಧಕರು ವರದಿಯಲ್ಲಿ ತಿಳಿಸಲಾಗಿದೆ. ಅದೇ ರೀತಿ 2018 ಜು.6ರಂದು ಶಾಸನ ಸಭೆಯಲ್ಲಿ ಮಂಡನೆಯಾಗಿದೆ. ಈ ಬಗ್ಗೆ ಪಿಎಜಿ ಪರಿಶೀಲನೆ ಮಾಡಬೇಕು. ರಮೇಶ್‌ಕುಮಾರ್‌ ವಿರುದ್ಧವೇ ಇದ್ದರೂ ಶಾಸಕಾಂಗ ಮುಖ್ಯಸ್ಥರಾಗಿದ್ದ ಅವರೇ, ಸಮಿತಿ ಮುಂದೆ ಚರ್ಚೆಗೆ ಬರದಂತೆ ಸಭಾಧ್ಯಕ್ಷ ಪೀಠವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಅಪಾದಿಸಿದರು.

ಈ ಪ್ರಕರಣದ ಬಗ್ಗೆ ವಕೀಲ ಕೆ.ವಿ.ಶಿವಾರೆಡ್ಡಿ ರವರು, 2019 ಜುಲೈ 1ರಂದು ಲೋಕಾಯುಕ್ತ ಕಚೇರಿಯಲ್ಲಿ ದೂರು ದಾಖಲು ಮಾಡಿದ್ದರೂ ಶಾಸಕ ಪೀಠವನ್ನು ದುರುಪಯೋಗಪಡಿಸಿಕೊಂಡು, ಇದರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದರು. ರಾಜ್ಯದಲ್ಲಿ ಸರ್ಕಾರಿ ಯುನಾನಿ ವೈದ್ಯಕೀಯ ವಿದ್ಯಾಲಯದಲ್ಲಿ ಹೊರರಾಜ್ಯದ ವಿದ್ಯಾರ್ಥಿಗಳಿಗೆ ಆಕ್ರಮವಾಗಿ ವೈದ್ಯಕೀಯ ಕೋರ್ಸುಗಳಿಗೆ ಪ್ರವೇಶ ನೀಡಿದ್ದ ಪ್ರಕರಣವನ್ನು ಸಿಒಡಿ ತನಿಖೆಗೆ ಆದೇಶ ಮಾಡಿತ್ತು. ಇದು ಪ್ರಗತಿಯಲ್ಲಿರುವಂತೆ ಆರೋಗ್ಯ ಸಚಿವರಾಗುತ್ತಿದ್ದಂತೆ ಖಾಸಗಿ ವೈದ್ಯಕೀಯ ಕಾಲೇಜು ಮಾಲಿಕರ ದುಡ್ಡಿನ ಆಸೆಗೆ ಬಲಿಯಾಗಿ ಸಿಒಡಿ ತನಿಖೆಯನ್ನು ಗೃಹ ಇಲಾಖೆಗೆ ಲಿಖೀತ ಸೂಚನೆ ನೀಡಿ ರದ್ದುಪಡಿಸಿರುತ್ತಾರೆಂದು ಮಾಜಿ ಸ್ವೀಕರ್‌ ವಿರುದ್ಧ ಮಾಜಿ ಶಾಸಕ ಅಪಾದಿಸಿದರು.

ಈ ಹಗರಣ ವಿಧಾನಮಂಡಲದಲ್ಲಿ ಬಾರಿ ಸದ್ದು ಮಾಡಿತ್ತು. ಹೆಚ್ಚಿನ ತನಿಖೆಗೆ ಸರ್ಕಾರವನ್ನು ಒತ್ತಾಯಿಸಿತ್ತು. ಸರ್ಕಾರ ಸಿಒಡಿಗೆ ವಹಿಸಿತ್ತು ಎಂದರು. ಈ ಬಗ್ಗೆಯೂ ಸಹ ರಮೇಶ್‌ಕುಮಾರ್‌ ಸಿಒಡಿ ತನಿಖೆ ಕೈಬಿಡಲು ಆದೇಶಿಸಿದ್ದಾರೆಂದರು. ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಕೋರ್ಸುಗಳಿಗೆ ನಕಲಿ ಆಯ್ಕೆ, ನಕಲಿ ಅಂಕಪಟ್ಟಿ ಸೇರಿ 24 ಗುರುತರ ಅಪರಾಧಗಳು ನಡೆದಿವೆ ಎಂಬುದನ್ನು ಸಿಒಡಿ ತನಿಖೆಯಲ್ಲಿ ಪತ್ತೆ ಮಾಡಿತ್ತು. ಶೇ.50 ತನಿಖೆ ಪೂರ್ಣಗೊಳಿಸಿತ್ತು. ಆದರೂ ಯುನಾನಿ ವೈದ್ಯಕೀಯ ಮಹಾವಿದ್ಯಾಲಯದ ಅಧಿಕಾರಿಗಳೊಂದಿಗೆ ಶಾಮೀಲಾಗಿ ಈ ತನಿಖೆ ರದ್ದು ಮಾಡಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ವಂಚನೆ ಎಸಗಿರುತ್ತಾರೆಂದು ತಿಳಿಸಿದರು.

ಕೊಲೆ ಪ್ರಕರಣದಲ್ಲೂ ಭಾಗಿ?: ಸಂಸತ್‌ ಚುನಾವಣೆಯಲ್ಲಿ ತಾವೇ ಬಿಜೆಪಿ ಅಭ್ಯರ್ಥಿಯಂತೆ ಬಿಂಬಿಸಿಕೊಂಡಿದ್ದರು. ಮತ್ತೆ ಕೋಲಾರದಲ್ಲಿ ಬಿಜೆಪಿ ವಿರುದ್ಧ ಮಾತನಾಡುತ್ತಾರೆ. ಯಾವ ನೈತಿಕತೆ ಇದೆ ಇವರಿಗೆ ಎಂದ ಮಾಜಿ ಶಾಸಕ ವೆಂಕಟಶಿವಾರೆಡ್ಡಿ, ಅದೇ ರೀತಿ ತಾಲೂಕಿನ ಹೊಗಳಗೆರೆ ರಸ್ತೆಯಲ್ಲಿ 2013ರಲ್ಲಿ ವೇಣುಗೋಪಾಲ್‌ ಕೊಲೆ, 2003ರಲ್ಲಿ ಶ್ಯಾಮಶಂಕರೆಡ್ಡಿ ಕೊಲೆ ಪ್ರಕರಣಗಳು ಹಾಗೂ ಇನ್ನೂ 9 ಕೊಲೆ ಪ್ರಕರಣಗಳಲ್ಲಿ ರಮೇಶ್‌ಕುಮಾರ್‌ ಭಾಗಿಯಾಗಿದ್ದರೂ ತಮ್ಮ ಮೇಲಿನ ಪ್ರಕರಣದಲ್ಲಿ ಹೆಸರನ್ನು ಕೈಬಿಡುವಂತೆ ಮಾಡಿ ಆರೋಪಗಳಲ್ಲಿ ನಿರಾಪರಾಧಿಗಳನ್ನು ಸಿಲುಕಿಸಿದ್ದಾರೆಂದು ತಿಳಿಸಿದರು.

ಹೀಗೆ ಬಹುತೇಕ ಹಗರಣಗಳು ಇದ್ದರೂ ಸಹ ತಾನು ಸತ್ಯವಂತನೆಂದು ಹೇಳಿಕೊಳ್ಳೂತ್ತಾ ಏನು ತನಗೆ ಇಲ್ಲವೆಂದು ನಟನೆ ಮಾಡುತ್ತಿದ್ದಾರೆ. ಆದ್ದರಿಂದ ಈ ಎಲ್ಲಾ ಪ್ರಕರಗಳಿಗೆ ಸಂಬಂಧಿಸಿದಂತೆ ನಾನು ದಾಖಲೆಗಳನ್ನು ಸಂಗ್ರಹಿಸಿ ಮೇಲಿನ ಎಲ್ಲಾ ಕ್ರಮಗಳನ್ನು ಸಂಪೂರ್ಣ ತನಿಖೆ ನಡೆಸಲು ಕಾನೂನು ಕ್ರಮ ಜರುಗಿಸಲು ಸಿಬಿಐಗೆ ಒಪ್ಪಿಸಬೇಕೆಂದು ಈ ಮೂಲಕ ಸರ್ಕಾರವನ್ನು ಒತ್ತಾಯಿಸುತ್ತೇನೆ. ಸಂಬಂಧಿಸಿದ ಪ್ರತಿ ದೂರಿಗೂ ದಾಖಲೆಗಳನ್ನು ಒದಗಿಸಿ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next