ಹುಣಸೂರು : ಚಾಲಕನ ನಿಯಂತ್ರಣ ತಪ್ಪಿದ ಶಾಲಾ ಬಸ್ಸೊಂದು ರಸ್ತೆ ಬದಿಯಲ್ಲಿ ಕಟ್ಟಿದ್ದ ಎತ್ತುಗಳಿಗೆ ಢಿಕ್ಕಿ ಹೊಡೆದು ಬಳಿಕ ತಿಪ್ಪೆಗುಂಡಿಯಲ್ಲಿ ಚಕ್ರ ಹೂತು ಹೋದ ಪರಿಣಾಮ ಬಸ್ ನೊಳಗಿದ್ದ ಮಕ್ಕಳು ಅದೃಷ್ಟವಷಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆ ವಿವರ : ಹುಣಸೂರಿನ ನ್ಯೂ ಕೇಂಬ್ರಿಡ್ಜ್ ಪಬ್ಲಿಕ್ ಸ್ಕೂಲ್ ನ ಖಾಸಗಿ ಸಂಸ್ಥೆಯ ಶಾಲಾ ವಾಹನ ಅರಸು ಕಲ್ಲಹಳ್ಳಿ, ಕೊತ್ತೆಗಾಲ, ಸಣ್ಣೇನಹಳ್ಳಿ, ಮಾರ್ಗವಾಗಿ ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತಿದ್ದ ವೇಳೆ ಚಾಲಕನ ಬದಿಯ ಕಿಟಕಿಯಿಂದ ಬಂದ ಪಕ್ಷಿಯೊಂದು ರಭಸವಾಗಿ ಕಣ್ಣಿಗೆ ಬಡಿದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ರಸ್ತೆಬದಿಯಲ್ಲಿ ದ್ಯಾವಪ್ಪ ಎಂಬುವರಿಗೆ ಸೇರಿದ ಸುಮಾರು 70 ಸಾವಿರ ಬೆಲೆ ಬಾಳುವ ರಾಸುಗಳ ಮೇಲೆ ಹರಿದು ಬಳಿಕ ಮರಕ್ಕೆ ಗುದ್ದಿ, ಮರದ ಬುಡದಲ್ಲಿದ್ದ ತಿಪ್ಪೆ ಗುಂಡಿಯಲ್ಲಿ ಶಾಲಾ ಬಸ್ ಹೂತು ಹೋದ ಪರಿಣಾಮ ಬಸ್ಸಿನಲ್ಲಿದ್ದ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಾವು-ಬದುಕಿನ ಹೋರಾಟದಲ್ಲಿ ರಾಸುಗಳು: ದ್ಯಾವಪ್ಪ ಎಂಬ ರೈತ ಮನೆಯ ಮುಂದೆ ಎಂದಿನಂತೆ ರಾಸುಗಳನ್ನು ಕಟ್ಟಿ ಹಾಕಿದ್ದು ಏಕಾಏಕಿ ಬಂದ ಶಾಲಾ ಬಸ್ಸು ರಾಸುಗಳ ಮೇಲೆ ಹರಿದ ರಭಸಕ್ಕೆ 2 ಎತ್ತಿನ ಕಾಲುಗಳು ಹಾಗೂ ಮೂಳೆಗಳು ಮುರಿದುಹೋಗಿದೆ.
ಘಟನೆಯ ಬಳಿಕ ಮಕ್ಕಳನ್ನು ಬೇರೊಂದು ಶಾಲಾ ವಾಹನದಲ್ಲಿ ಶಾಲೆಗೆ ಕಳುಹಿಸಿಕೊಡಲಾಯಿತು, ಪಕ್ಷಿ ಬಡಿದ ರಭಸಕ್ಕೆ ಚಾಲಕನ ಮುಖಕ್ಕೆ ಏಟಾಗಿದ್ದು ಪರಿಣಾಮ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ : ಐಕ್ಯೂ ನಿಯೋ 6 ಬಿಡುಗಡೆ; 80ವ್ಯಾಟ್ ಫಾಸ್ಟ್ ಚಾರ್ಜಿಂಗ್