ಹುಣಸೂರು:ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಎಳನೀರು ವ್ಯಾಪಾರಿಯನ್ನು ಅಡ್ಡಗಟ್ಟಿ ನಗ-ನಾಣ್ಯ ದರೋಡೆ ನಡೆಸಿ ಪರಾರಿಯಾಗಿರುವ ಘಟನೆ ತಾಲೂಕಿನ ಹೊಸಕೋಟೆ ಬಳಿ ನಡೆದಿದೆ.
ಕೆ.ಆರ್.ಪೇಟೆ ತಾಲೂಕಿನ ಚಂದ್ರ ಎಂಬುವವರು ಹಣ ಹಾಗೂ ಒಡವೆ,ಮೊಬೈಲ್ ಕಳೆದುಕೊಂಡವರು.
ಘಟನೆ ವಿವರ: ಕೆ.ಆರ್.ಪೇಟೆ ತಾಲ್ಲೂಕಿನ ಮರುಕನಹಳ್ಳಿ ಗ್ರಾಮದ ರೈತ ಚಂದ್ರು ಹುಣಸೂರು ತಾಲ್ಲೂಕಿನ ರತ್ನಾಪುರಿ ಗ್ರಾಮದ ಎಳನೀರು ವ್ಯಾಪಾರಿಗೆ ಫಸಲು ಮಾರಾಟ ಮಾಡಿದ್ದರು. ಮಾರಾಟ ಮಾಡಿದ ಎಳನೀರಿನ ಹಣ ಪಡೆಯಲು ದ್ವಿಚಕ್ರ ವಾಹನದಲ್ಲಿ ರತ್ನಪುರಿಗೆ ಬಂದು ಹಣ ಪಡೆದು ಗುರುವಾರ ರಾತ್ರಿ ಸ್ವಗ್ರಾಮಕ್ಕೆ ಮರಳುತ್ತಿದ್ದಾಗ ಹುಣಸೂರು-ರತ್ನಪುರಿ ರಸ್ತೆಯ ಹೊಸಕೋಟೆ ಗ್ರಾಮದ ಬಳಿ ಮೂವರು ಅಪರಿಚಿತರು ದ್ವಿಚಕ್ರ ವಾಹನದಲ್ಲಿ ಬಂದು ಅಡ್ಡಗಟ್ಟಿ ಹಲ್ಲೆ ನಡೆಸಿ ತಮ್ಮ ಬಳಿ ಇದ್ದ 18 ಸಾವಿರ ರೂ. ನಗದು ಹಾಗೂ ಹತ್ತು ಸಾವಿರ ಬೆಲೆ ಬಾಳುವ ಚಿನ್ನದ ಉಂಗುರ ಮತ್ತು ಮೊಬೈಲ್ ಅಪಹರಿಸಿದ್ದಾರೆ. ಘಟನೆ ಬಳಿಕ ಚಂದ್ರುರವರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ:ನಾಳೆಯಿಂದಲೇ ಶಾಲೆಗಳ ಪುನಾರಂಭ; ಕೋವಿಡ್ ನಿಯಮದಡಿ ಶಾಲೆ ಶುರು
ರಾತ್ರಿ ಮಳೆ ಬರುತ್ತಿದ್ದ ಕಾರಣ ಅರೋಪಿಗಳಿಂದ ತಪ್ಪಿಸಿಕೊಳ್ಳುವ ಪ್ರಯತ್ನ ವಿಫಲವಾಯಿತು ಎಂದು ಚಂದ್ರು ಪೊಲೀಸರಿಗೆ ತಿಳಿಸಿದ್ದಾರೆ.
ಈ ಕುರಿತಾಗಿ ಹುಣಸೂರು ಗ್ರಾಮಾಂತರ ಪೊಲೀಸ್ ಸರ್ಕಲ್ ಇನ್ ಸ್ಪೆಕ್ಟರ್ ಚಿಕ್ಕಸ್ವಾಮಿ ಮತ್ತು ಕ್ರೈಂ ವಿಭಾದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಮಾಡಿ ಪ್ರಕರಣ ದಾಖಲಿಸಿದ್ದಾರೆ.