Advertisement

ಹುಣಸೂರು: ಕಾಡಿನಿಂದ ನಾಡಿಗೆ ಬಂದ ಆನೆಗಳು; ರೈತರಲ್ಲಿ ಆತಂಕ

05:19 PM Nov 18, 2021 | Team Udayavani |

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಮೇವನ್ನರಸಿ ನಾಡಿಗೆ ಬಂದಿದ್ದ ಆರು ಕಾಡಾನೆಗಳು  ಕಾಡಿಗೆ ಮರಳದೆ ಹುಣಸೇಕಟ್ಟೆ ಸಾಮಾಜಿಕ ಅರಣ್ಯದಲ್ಲಿ ಬೀಡು ಬಿಟ್ಟಿದ್ದು. ಸುತ್ತಮುತ್ತಲ ರೈತರನ್ನು ಆತಂಕಕ್ಕೀಡು ಮಾಡಿದ್ದರೆ, ಅರಣ್ಯ ಇಲಾಖೆ ಸಿಬ್ಬಂದಿಗಳ ನಿದ್ದೆ ಗೆಡಿಸಿದೆ.

Advertisement

ಹನಗೋಡು ಹೋಬಳಿಯ ಕಾಳೇನಹಳ್ಳಿಯ ಜಮೀನಿನಲ್ಲಿ ಗುರುವಾರ ಬೆಳ್ಳಂಬೆಳಗ್ಗೆ ಆರು ಕಾಡಾನೆಗಳು ಬೀಡು ಬಿಟ್ಟಿದ್ದನ್ನು ಕಂಡ ರೈತರು ಗ್ರಾಮಸ್ಥರಿಗೆ ವಿಷಯ ಮುಟ್ಟಿಸಿದ್ದಾರೆ.

ಕಾಡಾನೆಗಳ ಹಿಂಡು ಕಂಡ ಗ್ರಾಮಸ್ಥರು ಕಾಡಾನೆಗಳ ಸುತ್ತ-ಮುತ್ತ ಸುತ್ತುವರಿದು ಕೇಕೆ ಹಾಕುತ್ತಾ, ಶಿಳ್ಳೆ ಹಾಕಿ. ಕೂಗಾಡಿ.  ಕಾಡಿಗಟ್ಟಲು ಪ್ರಯತ್ನಿಸಿದರಾದರೂ ಬೆದರದ ಆನೆಗಳು ಠಿಕಾಣಿ ಹೂಡಿದ್ದ ಸ್ಥಳದಿಂದ ಕದಲಲಿಲ್ಲ.ಕಲ್ಲೇಟಿನಿಂದ   ಗಾಬರಿಗೊಂಡ ಆನೆಗಳು ಅಲ್ಲಿಯೇ ಸುತ್ತ ಮುತ್ತ ಗಿರಕಿ ಹೊಡೆಯುತ್ತ ಬೆಳಗ್ಗೆ  ಎಂಟು ಗಂಟೆಯವರೆಗೆ ಕಾಲ ಕಳೆದವು.

ವಿಷಯ ತಿಳಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾಳೇನಹಳ್ಳಿ ಜಮೀನು ಬಳಿಗೆ ದಾವಿಸಿ ಬೆಳಿಗ್ಗೆ ಹತ್ತು ಗಂಟೆವರೆವಿಗೂ ಕಾಡಿಗಟ್ಟಲು ಹರ ಸಾಹಸ ಪಟ್ಟರೂ ಪ್ರಯೋಜನವಾಗಲಿಲ್ಲ. ಕಾಡಾನೆ ಓಡಿಸಲು ಯತ್ನಿಸುತ್ತಿದ್ದಂತೆ ಅತ್ತಿಂದಿತ್ತ ಓಡಾಡುತ್ತಿದ್ದ ಆನೆಗಳ ಹಿಂದಿದಿಂದೆಯೇ ನೂರಾರು ಮಂದಿ ಸೇರಿ ಕೂಗಾಟ ನಡೆಸಿದರು. ಇದರಿಂದಾಗಿ ಕಾರ್ಯಚರಣೆಗೂ ಅಡಚಣೆಯಾಯಿತು. ಕೊನೆಗೆ ಪೋಲಿಸರು ಜನ ಸಮೂಹವನ್ನು ನಿಯಂತ್ರಿಸಿದರು.

ಇದನ್ನೂ ಓದಿ:ಸಯ್ಯದ್ ಮುಷ್ತಾಕ್ ಅಲಿ: ಬಂಗಾಳದ ಕೈಯಿಂದ ಜಯ ಕಸಿದ ಕರ್ನಾಟಕಕ್ಕೆ ‘ಸೂಪರ್’ ಜಯ

Advertisement

ಅರಣ್ಯ ಇಲಾಖೆಯವರು ಹತ್ತಾರು ಬಾರಿ ಗಾಳಿಯಲ್ಲಿ ಬೆದರು ಗುಂಡು ಹಾರಿಸಿ ಪಟಾಕಿ ಸಿಡಿಸಿ  2ಕಿ.ಮೀ.ದೂರದ  ಕಾಡಿನ ಕಡೆಗೆ ಆನೆಗಳು ಮುಖ ಮಾಡಿದರೂ  ಹೆಚ್ಚು ಜನಜಂಗುಳಿ ಕೂಡಿದರಿಂದ ಗಾಬರಿಗೊಂಡ ಕಾಡಾನೆಗಳು ಗುರುಪುರ ಬಳಿಯ  ಹುಣಸೇಕಟ್ಟೆ ಅರಣ್ಯ ಪ್ರದೇಶದೊಳಗೆ ಸೇರಿಕೊಂಡವು.

ಸಂಜೆ ಕಾರ್ಯಾಚರಣೆ

ಬೆಳಿಗ್ಗೆ ಜನಜಂಗುಳಿ ಹೆಚ್ಚಾದ ಕಾರಣ ಗಾಬರಿಗೊಂಡ ಕಾಡಾನೆಗಳು ಗುರುಪುರ ಅರಣ್ಯಪ್ರದೇಶದ ಹುಣಸೆಕಟ್ಟೆ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಸೇರಿಸಲಾಗಿದೆ. ಮುಖ್ಯ ರಸ್ತೆಯ ಸುತ್ತಲೂ ಅರಣ್ಯ ಇಲಾಖೆ ಸಿಬ್ಬಂದಿಗಳನ್ನು ಕಾವಲು ಹಾಕಿ ಸಾರ್ವಜನಿಕರಿಗೆ ಕಾಡಾನೆಗಳು‌ ಇರುವಿಕೆಯ ಮಾಹಿತಿ ನೀಡಲಾಗುತ್ತಿದೆ‌.   ಇಂದು ಸಂಜೆ ಹುಣಸೆಕಟ್ಟೆ ಅರಣ್ಯ ಪ್ರದೇಶದಿಂದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಆನೆಗಳ ಹಿಂಡನ್ನು ಕಾರ್ಯಾಚರಣೆ ನಡೆಸಿ ಕಾಡಿಗಟ್ಟಲಾಗುವುದೆಂದು   ವೀರನಹೊಸಳ್ಳಿ ಆರ್ ಎಫ್ ಓ ನಮನ ನಾರಾಯಣ ನಾಯಕ್ ಪತ್ರಿಕೆಗೆ ತಿಳಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next