Advertisement
ಜನ ಮೆಚ್ಚುಗೆಗಳಿಸಿದ “ಅಪ್ಪೆ ಟೀಚರ್’ ತುಳು ಸಿನಿಮಾದ ವಿರುದ್ಧ ಮಂಗಳೂರಿನ ಮಹಿಳಾ ಸಂಘಟನೆಗಳು ಒಟ್ಟಾಗಿ ಪ್ರತಿಭಟನೆ ಮಾಡಿದ್ದು ಮಾಧ್ಯಮ ರಂಗದಲ್ಲಿ ಸಣ್ಣ ಕಂಪನ ವನ್ನುಂಟು ಮಾಡಿದೆ. ಮೊತ್ತಮೊದಲ ಬಾರಿಗೆ ಮಂಗಳೂರಿನ ಮಹಿಳೆಯರು ದೃಶ್ಯ ಮಾಧ್ಯಮಗಳ ಧೋರಣೆಯನ್ನು ಖಂಡಿಸಿ ಒಂದು ಎಚ್ಚರಿಕೆಯ ಸಂದೇಶ ನೀಡಿದರು. ಪ್ರತಿ ಭಟಿಸಿದ ಮಹಿಳೆಯರ ಮೇಲೆ ಆರೋಪಗಳನ್ನು ಹೊರಿಸ ಲಾಯಿತು. ಹಲವಾರು ಸವಾಲುಗಳನ್ನೂ ಅವರೆದುರು ತಂದು ನಿಲ್ಲಿಸಿತು. ಮೊದಲನೆಯದು ಇಷ್ಟು ತಡವಾಗಿ ಏಕೆ ಪ್ರತಿಭಟನೆ ಮಾಡಲಾಗಿದೆ? ಎರಡನೆಯದಾಗಿ ಅದರಲ್ಲಿ ಅಶ್ಲೀಲವೆಂಬುದು ಇಲ್ಲ. ಮೂರನೆಯದಾಗಿ ಪ್ರತಿಭಟನೆಗಾಗಿ ಸಿನಿಮಾ ನಿರ್ಮಾಪಕರೊಂದಿಗೆ ಒಳ ಒಪ್ಪಂದ ಅಥವಾ ಲಂಚದ ಆಮಿಷ ಪಡೆಯಲಾಗಿದೆ. ನಾಲ್ಕನೆಯದಾಗಿ ಈ ಸಿನಿಮಾಕ್ಕಿಂತಲೂ ಅಶ್ಲೀಲವಾದ ದೃಶ್ಯಗಳಿರುವ ಸಿನಿಮಾಗಳ ವಿರುದ್ಧ ಮಹಿಳೆಯರಿಂದ ಪ್ರತಿಭಟನೆ ಏಕೆ ನಡೆದಿಲ್ಲ? ಹೀಗೆ ಹಲವು ರೀತಿಯಲ್ಲಿ ಮಹಿಳೆಯರ ಬಾಯಿ ಮುಚ್ಚಿಸುವ ಪ್ರಯತ್ನ ಮಾಡಲಾಯಿತು. ಎಲ್ಲವನ್ನೂ ಸಹಿಸಿ ಮೌನವಾಗುವ ಕಾಲ ಮುಗಿಯಿತು ಎಂದು ಮಹಿಳೆಯರು ಈಗ ಸ್ವರವೆತ್ತಿದ್ದಾರೆ. ಕ್ರೈಸ್ತ ಮಹಿಳಾ ಸಂಘ, ಮುಸ್ಲಿಂ ಮಹಿಳಾ ಸಂಘ, ಮಂಗಳೂರು ತಾಲೂಕು ಮಹಿಳಾ ಮಂಡಲದ ಎಲ್ಲಾ ಸದಸ್ಯರು, ಕರಾವಳಿ ಲೇಖಕಿಯರ – ವಾಚಕಿಯರ ಸಂಘ, ಸ್ವಯಂ ಸೇವಾ ಸಂಸ್ಥೆಗಳಾದ ಡೀಡ್ಸ್, ಪ್ರಜ್ಞಾ, ಸಮತಾ, ಸಹಕಾರ ಭಾರತಿ, ಜನವಾದಿ, ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ, ಬೆಳ್ತಂಗಡಿಯ ಮಹಿಳಾ ಸಂಘಟನೆ ಬಿಲ್ಲವ ಮಹಿಳಾ ಸಂಘಟನೆ ಹೀಗೆ ಹತ್ತು ಹಲವು ಸಂಘಗಳ ಮಹಿಳೆಯರು ಅಪ್ಪೆ ಟೀಚರ್ ಸಿನಿಮಾದ ಅಶ್ಲೀಲ ಸಂಭಾಷಣೆ ಯನ್ನು ಕತ್ತರಿಸಬೇಕು. ಇಂತಹ ಚಿತ್ರಗಳನ್ನು ನಿಷೇಧಿಸಬೇಕು ಎಂದು ಒಕ್ಕೊರಲಿನಿಂದ ಒತ್ತಾಯಿಸಿದರು. ಆದರೆ ಇದೇ ವೇಳೆ ಈ ಸದಭಿರುಚಿಯ ಚಿತ್ರವನ್ನು ಪ್ರೇಕ್ಷಕರು ಮೆಚ್ಚಿದ್ದರಿಂದ ಇನ್ನು ಮುಂದೆಯೂ ಇಂಥದ್ದೇ ಚಿತ್ರ ನಿರ್ಮಾಣಕ್ಕೆ ಸ್ಫೂರ್ತಿ ಸಿಕ್ಕಿದೆ ಎಂದು ನಿರ್ಮಾಪಕರು ಪತ್ರಿಕಾ ಹೇಳಿಕೆ ನೀಡಿದ್ದರಿಂದ ಮಹಿಳೆಯರು ಆತಂಕಕ್ಕೀಡಾಗಿದ್ದಾರೆ.
ಒಂದು ಕಡೆಯಲ್ಲಿ ಚಿತ್ರ ನಿರ್ಮಾಪಕರು ಇದು ದುರುದ್ದೇ ಶಪೂರಿತವಾದ ಪ್ರತಿಭಟನೆ ಎಂದು ಬೀಸು ಹೇಳಿಕೆ ನೀಡುತ್ತಾರೆ. ಮತ್ತೂಂದೆಡೆ ಮಾಧ್ಯಮದ ಮಂದಿ ಪ್ರತಿಭಟನೆಗೆ ಲಂಚದ ಆಮಿಷ ನೀಡಿದ್ದಾರೆ ಎಂಬ ಆರೋಪ ಹೊರಿಸುತ್ತಾರೆ. ಇಂತಹ ಆರೋಪಗಳು ಮಹಿಳೆಯರ ಆಕ್ರೋಶವನ್ನು ಹೆಚ್ಚಿಸಿದೆ. ಬೇಡಿಕೆಗಳನ್ನು ತಿರಸ್ಕರಿಸಿದರೆ ಮುಂದೆ ಪ್ರತಿಭಟ ನೆಯನ್ನು ತೀವ್ರಗೊಳಿಸಬೇಕಾಗುತ್ತದೆ ಎಂದು ಹೇಳುತ್ತಿದ್ದಾರೆ. ಮರ್ಯಾದೆಗೆ ಹೆದರಿ ಮುಸುಕಿನೊಳಗೆ ನುಸುಳುವ ಕಾಲ ಇದಲ್ಲ ಎಂದು ದೃಶ್ಯ ಮಾಧ್ಯಮಗಳ ಮಂದಿಗೆ ತಿಳಿಸುವ ಕಾಲ ಬಂದಿದೆ ಎಂದೇ ಮಹಿಳೆಯರು ಒಟ್ಟಾಗಿದ್ದಾರೆ. ಈ ಸಂಭಾಷಣೆಗಿಂತಲೂ ಅಶ್ಲೀಲವಾದ ದೃಶ್ಯಗಳಿರುವ ಸಿನಿಮಾ ಬೇರೆ ಭಾಷೆಗಳಲ್ಲಿ ಪ್ರದರ್ಶನಗೊಂಡಾಗ ಸುಮ್ಮನಿದ್ದ ವರು ಇದನ್ನು ಮಾತ್ರ ಪ್ರತಿಭಟಿಸುವುದೇಕೆ ಎಂಬ ಸವಾಲೆಸೆ ಯುತ್ತಾರೆ. ದೃಶ್ಯ ಮಾಧ್ಯಮಗಳಲ್ಲಿ ಸ್ತ್ರೀಯನ್ನು ಸರಕಾಗಿ ಬಳಸಿಕೊಳ್ಳುವುದನ್ನು ನೋಡಿ ನೋಡಿ ಕುದಿಗೊಂಡ ಮನಸ್ಸು ಸ್ಫೋಟಗೊಳ್ಳಲು ಕಾಯುತ್ತಿತ್ತು. ಪ್ರತಿದಿನ ಪ್ರತಿಭಟನೆ ಮಾಡ ಬೇಕಾದಂತಹ ಘಟನೆಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ವಿರೋಧಿಸಲು ಸಾಧ್ಯವಾಗದೆ ಅಸಹಾಯಕರಾಗಿ ನಿಟ್ಟುಸಿರು ಬಿಡುತ್ತಿದ್ದವರು ಇಂದು ಒಳಗುದಿಯನ್ನು ಹೊರ ಹಾಕಿದ್ದಾರೆ. ಇಷ್ಟರವರೆಗೆ ಪ್ರತಿಕ್ರಿಯೆ ನೀಡಿಲ್ಲ ಎಂದು ಆರೋ ಪಿಸುವವರು ಇಲ್ಲಿನ ಮಹಿಳಾ ಹೋರಾಟದ ಚರಿತ್ರೆಯನ್ನು ಅರಿತುಕೊಳ್ಳಬೇಕು. ತಡವಾಗಿ ಪ್ರತಿಭಟನೆ ಮಾಡಿದ್ದು ಅಪರಾಧವೂ ಅಲ್ಲ. ಸ್ತ್ರೀಯರನ್ನು ಮಾತೆ, ಗುರು ಎಂದು ಗೌರವಿಸಿದ ಸಮಾಜವನ್ನು ಅವಳು ಅತ್ಯಾಚಾರಕ್ಕೆ ಅರ್ಹಳು ಎಂದು ಚಿತ್ರಿಸುವ ಮನೋಭಾವವನ್ನು ತಿದ್ದಿಕೊಂಡು ಮುನ್ನಡೆಯ ಬೇಕೆಂಬುದೇ ಈ ಪ್ರತಿಭಟನೆಯ ಆಶಯ. ಇಡೀ ಫಿಲ್ಮ್ ಇಂಡಸ್ಟ್ರಿಯಲ್ಲಿರುವ ಅಶ್ಲೀಲ ದೃಶ್ಯಗಳನ್ನು ಚಿತ್ರಿಸುವ ಕೊಳಕು ಮನಸ್ಸುಗಳನ್ನು ರಿಪೇರಿ ಮಾಡುವ ಗುತ್ತಿಗೆಯನ್ನು ಮಹಿಳೆಯರು ವಹಿಸಿಕೊಂಡಿಲ್ಲ. ಬುದ್ಧಿವಂತರ ಜಿಲ್ಲೆಯೆಂದು ಬಿರುದು ಪಡೆದಿರುವ ಇಲ್ಲಿನ ಮಹಿಳೆಯರ ಮಾನ ಹರಾಜುಗೊಳಿಸುವ ಮನಸ್ಥಿತಿಯನ್ನು ಖಂಡಿಸುತ್ತೇವೆ. ಅತ್ಯಾಚಾರದ ಸಂಭಾಷಣೆ ಗಂಡಸರ ಯೋಚನಾ ಲಹರಿ ಇಷ್ಟು ಕೀಳುಮಟ್ಟದಲ್ಲಿದೆ ಎಂಬುದನ್ನು ಸಾರಿ ಹೇಳುತ್ತಿದೆ. ಪುರುಷ ರನ್ನು ವಿಕೃತ ಮನಸ್ಕರಾಗಿ ಚಿತ್ರಿಸಿದ್ದರ ವಿರುದ್ಧ ಪುರುಷರೂ ಸಿಡಿದೇಳಬೇಕಾಗಿದೆ. ಸ್ವಸ್ಥ ಸಮಾಜದ ನಿರ್ಮಾಣದಲ್ಲಿ ಸ್ತ್ರೀ ಪುರುಷರಿಬ್ಬರೂ ಜೊತೆಯಾಗಿ ಕೆಲಸ ಮಾಡಬೇಕೆಂಬ ಅರಿವು ಉಂಟಾಗಬೇಕು. ಆಗ ಸಮಾಜದ ಮಾನಸಿಕ ಆರೋಗ್ಯವನ್ನು ಕೆಡಿಸುವ ಚಲನಚಿತ್ರಗಳ ನಿರ್ಮಾಣವಾಗದಂತೆ ತಡೆಯಬಹುದು ಎಂಬುದು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ ಎಲ್ಲ ಮಹಿಳೆಯರ ಅಭಿಪ್ರಾಯವಾಗಿದೆ.
Related Articles
Advertisement