Advertisement

ಮನೆ ಬಾಗಿಲ ಮೇಲೆ “ಬಡವ’ಬರಹ! ರಾಜೇ ಸರ್ಕಾರದ ವಿವಾದ

03:45 AM Jun 23, 2017 | Team Udayavani |

ಜೈಪುರ: ಕೆಲ ವರ್ಷಗಳ ಹಿಂದೆ ಬೆಂಗಳೂರಿನ ಹಲವು ಪ್ರದೇಶಗಳ ಮನೆಗಳ ಮೇಲೆ ಅಜ್ಞಾತವಾಗಿ “ನಾಳೆ ಬಾ’ ಎಂಬ ಬರಹ ಪ್ರತ್ಯಕ್ಷವಾಗಿ ಹೆದರಿಕೆ ಹುಟ್ಟಿಸಿತ್ತು. ಇಂಥದ್ದೇ ಪ್ರಕರಣ ಇದೀಗ ರಾಜಸ್ಥಾನದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

Advertisement

ರಾಜಸ್ಥಾನದ ದೌಸಾ ಜಿಲ್ಲೆಯ ಸಿಕ್ರೈ ಮತ್ತು ಬಂದೀಕುಯಿ ತಾಲೂಕುಗಳಲ್ಲಿ, ವಿಶೇಷವಾಗಿ ದಲಿತ ವರ್ಗದವರೇ ನೆಲೆಸಿರುವ ಮನೆ ಬಾಗಿಲುಗಳ ಮೇಲೆ “ನಾನು ಬಡವ’ ಎಂಬ ಬರಹ ಮೂಡಿದ್ದು, ರಾಜಸ್ಥಾನದ ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿದೆ ಸಿಲುಕಿಸಿದೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಸ್‌ಎಫ್ಎ) ಅಡಿ ಬಡ ವರ್ಗದವರಿಗೆ ಕಡಿಮೆ ದರದಲ್ಲಿ ಆಹಾರ ಧಾನ್ಯ ವಿತರಿಸುವ ನಿಟ್ಟಿನಲ್ಲಿ ದೌಸಾ ಜಿಲ್ಲಾಡಳಿತ ಸಿಕ್ರೈ ಮತ್ತು ಬಂದೀಕುಯಿ ತಾಲೂಕಿನಲ್ಲಿರುವ ಮನೆಗಳ ಬಾಗಿಲಲ್ಲಿ “ನಾನು ಬಡವ’, “ನಾನು ಅತೀ ಬಡವ’ ಎಂದು ಬರೆದು ಎಡವಟ್ಟು ಮಾಡಿಕೊಂಡಿದೆ. ಇದರಿಂದಾಗಿ ಸ್ಥಳೀಯರು ತಮಗೆ ಅವಮಾನವಾಗಿದೆ ಎಂದು ಆರೋಪಿಸಿದ್ದಾರೆ. “ನಮ್ಮ ವಿರೋಧದ ಹೊರತಾಗಿಯೂ ಜಿಲ್ಲಾಡಳಿತ ಮನೆ ಬಾಗಿಲ ಮೇಲೆ ಈ ರೀತಿ ಬರೆದಿದೆ. ಈ ಮೂಲಕ ಸರ್ಕಾರ ನಮ್ಮನ್ನು ಅವಹೇಳನ ಮಾಡಿದೆ. ಹೀಗೆ ಬರೆಯಲು ಅವಕಾಶ ಮಾಡಿಕೊಟ್ಟರೆ 750 ರೂ. ನೀಡಲಾಗುತ್ತದೆ ಎಂದು ಅಧಿಕಾರಿಗಳು ಆಮಿಷ ಒಡ್ಡಿದ್ದಾರೆ’ ಎಂದು ಸ್ಥಳೀಯರು ದೂರಿದ್ದಾರೆ.

ಸ್ಥಳೀಯರು ಹೇಳುವ ಪ್ರಕಾರ ಎರಡೂ ತಾಲೂಕುಗಳಲ್ಲಿ ಸುಮಾರು 1.5 ಲಕ್ಷ ಮನೆಗಳ ಮುಂದೆ ಈ ರೀತಿ ಬರೆಯಲಾಗಿದೆ. ಆದರೆ ಸರ್ಕಾರದ ಮೂಲಗಳೇ ಹೇಳುವ ಪ್ರಕಾರ, ರಾಜಸ್ಥಾನದಾದ್ಯಂತ ಈ ರೀತಿ ಬರೆಯಲಾಗಿದೆ. ಆದರೆ ಎನ್‌ಎಸ್‌ಎಫ್ಎ ಜಾರಿ ಮಾಡಿರುವ ಅಧಿಕಾರಿಗಳು ಹೇಳುವ ಪ್ರಕಾರ, ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಹಲವರು ಈ ಕಾಯ್ದೆಯಡಿ ನೋಂದಣಿ ಮಾಡಿಕೊಂಡಿದ್ದಾರೆ. ಆದರೆ ಅವರಲ್ಲಿ ಹೆಚ್ಚಿನವರು ಅನರ್ಹರು. ಅರ್ಹರಿಗೇ ಯೋಜನೆ ಲಾಭ ನೀಡುವ ನಿಟ್ಟಿನಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಹೇಳಿದ್ದಾರೆ.

ರಾಜಸ್ಥಾನ ಬಿಜೆಪಿ ನಾಯಕ ದೀಪಕ್‌ ಜೋಶಿ ಪ್ರತಿಕ್ರಿಯೆ ನೀಡಿ, ಸಬ್ಸಿಡಿ ಆಹಾರದ ಪ್ರಯೋಜನ ಪಡೆಯುವವರು ತಪ್ಪಿ ಹೋಗದಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ. ಆದರೆ ಕಾಂಗ್ರೆಸ್‌ ವಕ್ತಾರ ಮನೀಷ್‌ ತಿವಾರಿ ಈ ಕ್ರಮವನ್ನು ಟೀಕಿಸಿದ್ದಾರೆ.

Advertisement

ಹಿಂದೆಯೂ ನಡೆದಿತ್ತು:
ಕಳೆದ ಅಕ್ಟೋಬರ್‌ನಲ್ಲಿ ಭಿಲ್ವಾರ ಪಟ್ಟಣದಲ್ಲಿ ಬಡತನ ರೇಖೆಗಿಂತ ಕೆಳಗಿನವರನ್ನು ಗುರುತಿಸಲು ಮನೆಗಳಿಗೆ ಹಳದಿ ಬಣ್ಣ ಬಳಿಯಲಾಗಿತ್ತು. ಮಧ್ಯಪ್ರದೇಶದಲ್ಲಿ 2012ರಲ್ಲಿ “ನಾನು ಬಡವ’ ಎಂದು ಗುರುತಿಸಲು ಮನೆಗಳಿಗೆ ಬಣ್ಣ ಬಳಿಯಲಾಗಿತ್ತು.

ಜಿಲ್ಲಾಡಳಿತ ವತಿಯಿಂದ ಬಡವರನ್ನು ಗುರುತಿಸಲು ಮನೆಯ ಬಾಗಿಲುಗಳ ಮೇಲೆ ಬರೆಯಲು ಯಾವುದೇ ಆದೇಶ ನೀಡಿಲ್ಲ. ಆಹಾರ ಭದ್ರತಾ ಕಾಯ್ದೆಯಡಿ ಅನರ್ಹರೂ ಲಾಭ ಪಡೆಯುತ್ತಿದ್ದಾರೆಂಬ ದೂರಿನ ಹಿನ್ನೆಲೆಯಲ್ಲಿ ಜಿ.ಪಂ.ಇಂಥ ಆದೇಶ ನೀಡಿರಬಹುದು.
– ಕೆ.ಸಿ.ಶರ್ಮಾ, ದೌಸಾದ ಹೆಚ್ಚುವರಿ ಜಿಲ್ಲಾಧಿಕಾರಿ

ವೈದ್ಯರ ಜಾತಿ ಕೇಳಿ ಸುತ್ತೋಲೆ
ಈ ನಡುವೆ ಮತ್ತೂಂದು ಎಡವಟ್ಟೂ ನಡೆದು ಹೋಗಿದೆ. ರಾಜಸ್ಥಾನದ 4 ಜಿಲ್ಲೆಗಳಲ್ಲಿ ಆರೋಗ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರ ಜಾತಿ ವಿವರ ನೀಡುವಂತೆ ಸುತ್ತೋಲೆ ಹೊರಡಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಜೂ.20ರಂದು ಈ ಬಗ್ಗೆ ಸುತ್ತೋಲೆ ಹೊರಡಿಸಲಾಗಿತ್ತು. ಮಾಧ್ಯಮಗಳಲ್ಲಿ ಈ ಬಗ್ಗೆ ಸುದ್ದಿ ಪ್ರಕಟವಾಗುತ್ತಲೇ ಮಧ್ಯಪ್ರವೇಶಿಸಿದ ಆರೋಗ್ಯ ಸಚಿವ ಕಾಳಿಚರಣ್‌ ಸರಾಫ್, ಇದು ಅಧಿಕಾರಿಗಳ ಎಡವಟ್ಟು ಎಂದು ಹೇಳಿ ಪ್ರಕರಣಕ್ಕೆ ತೆರೆ ಎಳೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next