ಉದಯಪುರ: ನೀವು ಈವರೆಗೆ ಇಂಗ್ಲಿಷ್ ಭಾಷೆಯನ್ನು ಅರ್ಥ ಮಾಡಿಕೊಳ್ಳುವ ರೋಬೋಟ್ ಬಗ್ಗೆ ಕೇಳಿರುತ್ತೀರಿ. ಇನ್ನು ಕೆಲವು ವರ್ಷಗಳಲ್ಲಿ ಕನ್ನಡವೂ ಸೇರಿದಂತೆ ಭಾರತದ ಹಲವು ಭಾಷೆಗಳನ್ನು ಅರ್ಥಮಾಡಿಕೊಳ್ಳೋ ರೋಬೋಟ್ ಬಂದರೂ ಅಚ್ಚರಿಯಿಲ್ಲ!
ಏಕೆಂದರೆ, ಇದರ ಮೊದಲ ಹೆಜ್ಜೆಯಾಗಿ ಹಿಂದಿ ಭಾಷೆ ಬರುವ ರೋಬೋಟ್‌ವೊಂದು ರಾಜಸ್ಥಾನದ ಉದಯ್‌ಪುರದಲ್ಲಿದೆ. ಇಲ್ಲಿನ ಟೆಕ್ನೋ ಇಂಡಿಯಾ ಎನ್‌ಜೆಆರ್ ಇನ್‌ಸ್ಟಿಟ್ಯೂಟ್ ಫ್ರಾನ್ಸ್‌ನ ಮಾನವನ ರೀತಿ ಕೆಲಸ ಮಾಡುವ ರೋಬೋಟ್ “ನಾವೋ’ವನ್ನು ಖರೀದಿಸಿದೆ.
ಈ ಯಂತ್ರಮಾನವನಿಗೆ ಹಿಂದಿ ಭಾಷೆ ಅರ್ಥವಾಗುವಂತೆ ಪ್ರೋಗ್ರಾಮಿಂಗ್ ಮಾಡಲಾಗಿದೆ. ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಧಿಗಳ ಸಂಶೋಧನೆಗೆ ಅನುಕೂಲವಾಗುವಂತೆ ಫ್ರಾನ್ಸ್‌ನ ಅಲೆxಬರಾನ್ ರೊಬೋಟಿಕ್ಸ್ ಕಂಪೆನಿಯಿಂದ ನಾವೋ ರೋಬೋಟ್ ಅನ್ನು ಖರೀದಿಸಿದ್ದೇವೆ ಎಂದು ಸಂಸ್ಥೆಯ ನಿರ್ದೇಶಕ ಆರ್.ಎಸ್. ವ್ಯಾಸ್ ಹೇಳಿದ್ದಾರೆ. ಈ ನಾವೋ ರೋಬೋಟ್ ಮನುಷ್ಯರೊಂದಿಗೆ ಸಂವಹನ ನಡೆಸುವುದು, ಆಕಾರಗಳು ಮತ್ತು ವಸ್ತುಗಳನ್ನು ಗುರುತಿಸುವುದು, ಇಂಟರ್ನೆಟ್ ಆಕ್ಸೆಸ್ ಮಾಡುವುದು ಸೇರಿದಂತೆ ಹಲವು ಕೆಲಸಗಳನ್ನು ಮಾಡುವ ಸಾಮರ್ಥ್ಯ ಹೊಂದಿದೆ.
18 ಭಾಷೆ ಬರುತ್ತೆ
ನಮ್ಮ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳಿಗಾಗಿ ರೋಬೋಟ್ ಅನ್ನು ಖರೀದಿಸಿದ್ದೇವೆ. ಇದಕ್ಕೆ ಈಗಾಗಲೇ 18 ಭಾಷೆಗಳು ಬರುತ್ತವೆ. ನಾವೀಗ ಇದರ ಭಾಷಾ ಪ್ರೋಗ್ರಾಮಿಂಗ್ ಅನ್ನು ಅಪ್‌ಡೇಟ್ ಮಾಡುತ್ತಿದ್ದೇವೆ. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ, ರೋಬೋಟ್ ಹಿಂದಿ ಭಾಷೆಯನ್ನೂ ಅರ್ಥಮಾಡಿಕೊಂಡು, ನಾವು ಹೇಳಿದಂತೆ ನಡೆದುಕೊಳ್ಳಲಿದೆ ಎಂದಿದ್ದಾರೆ ವ್ಯಾಸ್.