ಸೈದಾಪುರ: ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ಮಾನವೀಯ ಮೌಲ್ಯಗಳು ಮುಖ್ಯವಾಗಿವೆ. ಅವು ಉತ್ತಮ ನಾಗರಿಕರನ್ನಾಗಿ ಮಾಡುತ್ತವೆ ಎಂದು ವಿದ್ಯಾವರ್ಧಕ ಡಿ.ಎಲ್.ಇಡಿ ಕಾಲೇಜಿನ ಪ್ರಾಂಶುಪಾಲ ಕರಬಸಯ್ಯ ದಂಡಿಗಿಮಠ ಹೇಳಿದರು.
ಶೆಟ್ಟಕೇರಾ ಗ್ರಾಮದ ಸ್ನೇಹಿತರ ಬಳಗದಿಂದ ಹಮ್ಮಿಕೊಂಡ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾಗರಿಕತೆ ಸೊಗಡಿನಲ್ಲಿ ನಾವು ಸಂಬಂಧಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಇದು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಇದಕ್ಕಾಗಿ ನಾವು ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಲು ಪ್ರಯತ್ನ ಮಾಡಬೇಕಾಗಿದೆ ಎಂದು ಹೇಳಿದರು.
ಜವಾಹರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶರಣಪ್ಪ ಎಚ್. ರಾಹುಲ್ ಮಾತನಾಡಿ, ನಾವು ದೈಹಿಕ ಸದೃಢವಾಗಿದ್ದರೂ ನಮ್ಮಲ್ಲಿನ ಮಾನಸಿಕ ಅಂಗವಿಕಲತೆ ಸಾಧನೆ ಮೇಲೆ ಪರಿಣಾಮ ಬೀರುತ್ತಿದೆ. ಇದಕ್ಕಾಗಿ ಮಹಾನ್ ವ್ಯಕ್ತಿಗಳ ಸಾಧನೆಗಳನ್ನು ಆಧಾರವಾಗಿಟ್ಟುಕೊಂಡು ಪ್ರಯತ್ನ ಮಾಡಬೇಕು. ಶಿಕ್ಷಣಕ್ಕೆ ಮಹತ್ವದ ಸ್ಥಾನವಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಶರಣಪ್ಪ ದಳಪತಿ ಮಾತನಾಡಿ, ಉತ್ತಮ ಗುರಿಯೊಂದಿಗೆ ಸಾಧನೆ ಮಾಡಬೇಕು. ತಂದೆ-ತಾಯಿಗಳಿಗೆ ಗೌರವ ತರಬೇಕು ಎಂದರು.
ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ನಿರ್ಮಲಾ, ಪರಮೇಶ್ವರ, ಶರಣಪ್ಪ, ಪವನ ಬಿ., ಅನಿತಾ, ಆನಂದ, ವೆಂಕಟೇಶ ಡಿ.,ರವಿಕುಮಾರ, ಸುನಿತಾ ವೈ., ಸುಧಾ, ಆನಂದ, ತಾಯಪ್ಪ, ಮಲ್ಲಪ್ಪ ಅವರನ್ನು ಗೌರವಿಸಲಾಯಿತು. ಈ ವೇಳೆ ರಾಜ್ಯ ಉಪ್ಪಾರ ಸಂಘದ ಪ್ರಧಾನ ಕಾರ್ಯದರ್ಶಿ ಬನ್ನಪ್ಪ ಹುಲಿಬೆಟ್ಟ, ಮುಖ್ಯಗುರು ಪಾಪಣ್ಣ, ಶಿಕ್ಷಕ ಮುಂಜುನಾಥ ರೆಡ್ಡಿ, ಉಮೇಶ, ಸ್ನೇಹಿತರ ಬಳಗದ ಮಹಾದೇವಪ್ಪ, ಸುಭಾಸ,ಹಳ್ಳೆಪ್ಪ, ಮಾಳಪ್ಪ, ಬಂಗಾರೆಪ್ಪ ಇತರರು ಇದ್ದರು.