ಬೆಂಗಳೂರು: ರಾಜಕೀಯ ಧರ್ಮವು ಮಾನವೀಯತೆಯನ್ನು ನಿರ್ಧರಿಸುವ ಈ ಕಾಲಘಟ್ಟದಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಬರಹಗಳು ಲೇಖಕರಿಗೆ ಮುಖ್ಯವಾಗುತ್ತವೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಹಾಗೂ ಜ್ಞಾನಪೀಠ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಹೇಳಿದ್ದಾರೆ.
ಡಾ.ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್‌ನಿಂದ ಭಾನುವಾರ ಭಾರತೀಯ ವಿದ್ಯಾಭವನದಲ್ಲಿ ಹಮ್ಮಿಕೊಂಡಿದ್ದ ಮಾಸ್ತಿ ಪ್ರಶಸ್ತಿ ಹಾಗೂ ಮಾಸ್ತಿ ಕಥಾ-ಕಾದಂಬರಿ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಆಧುನಿಕ ಯುಗದಲ್ಲಿ ರಾಜಕೀಯ ಧರ್ಮವು ಮಾನವೀಯ ಮೌಲ್ಯಗಳನ್ನು ಅಳೆಯುತ್ತಿದೆ. ಬದುಕಿನ ಮೌಲ್ಯಗಳನ್ನು ರಾಜಕಾರಣ ನಿರ್ಧರಿಸುತ್ತಿರುವ ಸಂದರ್ಭದಲ್ಲಿ ಅಂತಃಕರಣ ಪ್ರೀತಿಸುವ ಮಾಸ್ತಿ ಅವರ ಕೃತಿಯಲ್ಲಿರುವ ಪಾತ್ರಗಳು ಬಹು ಮುಖ್ಯವಾಗುತ್ತವೆ. ಮಾಸ್ತಿ ಅವರಿಂದ ಹಾಗೂ ಅವರ ಬರಹಗಳಿಂದ ಇವತ್ತಿನ ಲೇಖಕರು ಕಲಿಯಬೇಕಾದ್ದು ಬಹಳಷ್ಟಿದೆ ಎಂದರು.
ಅನ್ಯ ಸಂಸ್ಕೃತಿಯ ಬಗ್ಗೆ ಪ್ರೀತಿ ಮೂಡಿಸಿಕೊಳ್ಳಿ: ಸಾಹಿತಿ ಡಾ.ಕೆ.ವಿ.ತಿರುಮಲೇಶ್ ಮಾತನಾಡಿ, ಬೇರೆ ಕಾಲಘಟ್ಟ ಹಾಗೂ ಸಂಸ್ಕೃತಿಗಳನ್ನು ತಿಳಿಯುವುದರಿಂದ ನಮ್ಮನ್ನು ನಾವು ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಅನ್ಯ ಸಂಸ್ಕೃತಿಗಳ ಬಗ್ಗೆ ನಮಗೆ ಪರಿಚಯವಿಲ್ಲದಿದ್ದರೆ ನಮ್ಮನ್ನು ನಾವು ಮುಖಾಮುಖೀಯಾಗಲು ಸಾಧ್ಯವಿಲ್ಲ. ವಿಚಾರಗಳನ್ನು ತಿಳಿಯುವ ಕುತೂಹಲ ಬೆಳೆಸಿಕೊಂಡರೆ ಹೊಸ ಪ್ರಪಂಚ ನಮ್ಮದೆರು ತೆರೆದುಕೊಳ್ಳುತ್ತದೆ. ಬೇರೆ ಸಂಸ್ಕೃತಿ, ಬೇರೆ ಕಾಲಘಟ್ಟದ ಬಗ್ಗೆ ತಿಳಿಯುವ ಕುತೂಹಲದಿಂದ ವಿದೇಶಿ ಪಾತ್ರಗಳನ್ನೇ ನನ್ನ ಬರಹಗಳಲ್ಲಿ ಹೆಚ್ಚಾಗಿ ತಂದಿದ್ದೇನೆ. ಇದರಿಂದ ಬೇರೆ ಭಾಷೆ, ಸಂಸ್ಕೃತಿಗಳ ಬಗ್ಗೆ ಅಭಿಮಾನವೂ ಬೆಳೆದಿದೆ ಎಂದು ತಿಳಿಸಿದರು
ಮಾಸ್ತಿ ಪ್ರಶಸ್ತಿಯಲ್ಲಿ ಅಪಸ್ವರವಿಲ್ಲ: ವಿಮರ್ಶಕ ಡಾ.ಸಿ.ಎನ್.ರಾಮಚಂದ್ರನ್ ಮಾತನಾಡಿ, ಕಳೆದ 25
ವರ್ಷದಿಂದ ನೀಡುತ್ತಿರುವ ಮಾಸ್ತಿ ಪ್ರಶಸ್ತಿ ಆಯ್ಕೆಯಲ್ಲಿ ಇದುವರೆಗೂ ಅಪಸ್ವರ ಎದ್ದಿಲ್ಲ. ಬಹುತೇಕ ದೊಡ್ಡ ಪ್ರಶಸ್ತಿಗಳ ಆಯ್ಕೆ ಹಾಗೂ ಪ್ರದಾನದ ಸಮಾರಂಭದಲ್ಲಿ ಒಡಕಿನ ಮಾತುಗಳು ಕೇಳಿಬರುತ್ತವೆ. ಆದರೆ, ಮಾಸ್ತಿ ಹೆಸರಿನ ಈ ಪ್ರಶಸ್ತಿಯ ಬಗ್ಗೆ ಎಂದಿಗೂ ಭಿನ್ನಾಭಿಪ್ರಾಯಗಳು ಕೇಳಿ ಬಂದಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಡಾ.ಕೆ.ವಿ.ತಿರುಮಲೇಶ್, ಡಾ.ಸಿದ್ದಲಿಂಗ ಪಟ್ಟಣ್ಣಶೆಟ್ಟಿ, ಡಾ.ಬಿ.ಎಲ್.ವೇಣು, ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಹಾಗೂ ಪ್ರೊ. ಎಂ.ಆರ್.ಕಮಲ ಅವರಿಗೆ ತಲಾ 25 ಸಾವಿರ ನಗದು ಒಳಗೊಂಡ ಮಾಸ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಸ್.ಎನ್.ಸೇತುರಾಂ ಅವರಿಗೆ ಮಾಸ್ತಿ ಕಥಾ ಪುರಸ್ಕಾರ, ತೇಜಸ್ವಿನಿ ಹೆಗಡೆ, ಚೀಮನಹಳ್ಳಿ ರಮೇಶಬಾಬು ಹಾಗೂ ನಿವೇದಿತ ಪ್ರಕಾಶನಕ್ಕೆ ಮಾಸ್ತಿ ಕಾದಂಬರಿ ಪುರಸ್ಕಾರ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್, ವಿಮರ್ಶಕರಾದ ಡಾ.ಎಂ.ಎಸ್.ಆಶಾದೇವಿ, ಎಸ್. ಆರ್.ವಿಜಯಶಂಕರ್, ಡಾ.ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್‌ನ ಮಾವಿನಕೆರೆ ರಂಗನಾಥನ್ ಮತ್ತಿತರರು ಉಪಸ್ಥಿತರಿದ್ದರು.