Advertisement

ಒಪ್ಪೊತ್ತಿನ ಊಟಕ್ಕೂ ಪರದಾಡುವವರಿಗೆ ತುತ್ತು ಅನ್ನ

10:27 AM Sep 23, 2018 | |

ಮಹಾನಗರ: ಸಂಪಾದನೆ, ತಿರುಗಾಟ, ಐಷಾರಾಮಿ ಬದುಕಿನ ಬಗ್ಗೆಯಷ್ಟೇ ಯೋಚನೆ ಮಾಡುವ ಈ ಕಾಲ ಘಟ್ಟದಲ್ಲಿಯೂ ಮಾನವೀಯ ಅಂತಃಕರಣ ಜೀವಂತವಾಗಿದೆ ಎಂಬುದಕ್ಕೆ ನಗರದ ಯುವಕರ ತಂಡವೊಂದು ಸಾಕ್ಷಿ. ರಸ್ತೆ ಬದಿ ಅನ್ನಾಹಾರವಿಲ್ಲದೆ ದಿನಕಳೆ ಯುವವರಿಗೆ ಪ್ರತಿದಿನ ಆಹಾರ ಒದಗಿಸುವ ಮೂಲಕ ಈ ತಂಡ ಸದ್ದಿಲ್ಲದೆ ಮಾದರಿಯಾಗಿದೆ.

Advertisement

ತಂಡದ ಹೆಸರು ಜಿ2ಸಿ. (ಜಿ2 ಕ್ರಿಯೇಶನ್ಸ್‌). ಇದರಲ್ಲಿರುವವರೆಲ್ಲರೂ ಮಾರ್ಕೆಟಿಂಗ್‌ ಕ್ಷೇತ್ರದಲ್ಲಿ ಕಾರ್ಯನಿರತರು. ಈವೆಂಟ್‌ ಮ್ಯಾನೇಜ್‌ಮೆಂಟ್‌, ಚಲನಚಿತ್ರ ಪ್ರೊಮೋಶನ್‌ ಮುಂತಾದ ಕೆಲಸಗಳಲ್ಲಿ ತೊಡಗಿರುವ ಸಂಸ್ಥೆಯ ಸದಸ್ಯರು ತಮ್ಮ ಸಂಸ್ಥೆಯ ಸಮಾರಂಭಗಳಲ್ಲಿ ಉಳಿದ ಆಹಾರವನ್ನು ಅವಶ್ಯವಿದ್ದವರಿಗೆ ಹಂಚುತ್ತಿದ್ದರು. ಆದರೆ ಜುಲೈ 15ರಂದು ತಂಡದ ಸದಸ್ಯೆಯ ಹುಟ್ಟುಹಬ್ಬದಂದು ಹೊಸ ಪ್ರಯತ್ನವೊಂದಕ್ಕೆ ನಾಂದಿ ಹಾಡಿದರು. ನಗರದಲ್ಲಿ ಆಯೋಜನೆಗೊಳ್ಳುವ ಯಾವುದೇ ಸಮಾರಂಭಗಳಲ್ಲಿ ಉಳಿದ ಆಹಾರವನ್ನು ಸಂಗ್ರಹಿಸಿ ಅವಶ್ಯವಿರುವವರಿಗೆ ಕೈಯಾರೆ ಹಂಚುವ ಮೂಲಕ ಹಸಿದವರ ಪಾಲಿಗೆ ಆಪದ್ಬಾಂ ಧವ ಎನಿಸಿಕೊಂಡಿದ್ದಾರೆ.

ಕರೆ ಮಾಡಿ ತಿಳಿಸುತ್ತಾರೆ
ಮೊದಲು ಹೆಚ್ಚು ಆಹಾರ ಸಂಗ್ರಹವಾಗುತ್ತಿರಲಿಲ್ಲ. ಆದರೆ ತಂಡದ ಉದ್ದೇಶ ಜನರಿಗೆ ತಿಳಿದ ಬಳಿಕ ಸಮಾರಂಭಗಳ ಆಯೋಜಕರು ಕರೆ ಮಾಡಿ ಆಹಾರ ಉಳಿದಿರುವ ಬಗ್ಗೆ ತಿಳಿಸುತ್ತಿದ್ದಾರೆ ಎನ್ನುತ್ತಾರೆ ತಂಡದ ಸದಸ್ಯರು.

ಅಣ್ಣಾ ಊಟ ಮಾಡದೆ ಎರಡು ದಿನ ಆಯ್ತು
ನಗರದಲ್ಲಿ ಕೆಲಸದ ಹಿನ್ನೆಲೆಯಲ್ಲಿ ಸುತ್ತಾಡುವ ವೇಳೆ ಅದೆಷ್ಟೋ ಮಂದಿ ಅನ್ನಾಹಾರ ಸೇವಿಸದೆ ರಸ್ತೆ ಬದಿಯಲ್ಲಿ ದಿನಗಳೆಯುವವರನ್ನು ನೋಡುವಾಗ ನೋವಾಗುತ್ತದೆ. ಕೆಲವರು ಎರಡು, ಮೂರು ದಿನಗಳಿಂದಲೂ ಆಹಾರ ಸೇವಿಸದೆ ಶರೀರ ಕೃಶಗೊಂಡಿರುವವರಿಗೆ ಹೊತ್ತಿನ ಊಟವನ್ನಾದರೂ ನೀಡಿದ ತೃಪ್ತಿ ಸಿಕ್ಕಿದಂತಾಗುತ್ತದೆ. ಅದಕ್ಕಾಗಿ ಎರಡು ತಿಂಗಳಿನಿಂದ ಈ ಪ್ರಯತ್ನ ಆರಂಭಿಸಿದೆವು. ಶುಕ್ರವಾರ (ಸೆ. 21) ಸ್ಟೇಟ್‌ ಬ್ಯಾಂಕ್‌ನಲ್ಲಿ ಆಹಾರ ವಿತರಣೆ ವೇಳೆ ಪುಟಾಣಿ ಹುಡುಗಿಯೋರ್ವಳು ಬಂದು ‘ಅಣ್ಣಾ… ಏನೂ ತಿನ್ನದೆ ಎರಡು ದಿನ ಆಯ್ತು, ನಮಗೂ ಕೊಡಿ’ ಎಂದಳು. ಇಂತಹ ಅದೆಷ್ಟೋ ಮಕ್ಕಳು ತಿನ್ನಲು ಸಿಗದೆ ಪರದಾಡುತ್ತಿದ್ದಾರೆ’ ಎನ್ನುತ್ತಾರೆ ತಂಡದ ಪ್ರಮುಖರಲ್ಲೋರ್ವ ಜಿತೇಶ್‌.

ವಿದ್ಯಾರ್ಥಿಗಳ ತೊಡಗಿಸಿಕೊಳ್ಳುವಿಕೆ
ವಿಶೇಷವೆಂದರೆ ಹಸಿದವರಿಗೆ ಅನ್ನ ನೀಡಲು ಜಿ2ಸಿ ತಂಡ ಹಾಕಿಕೊಂಡ ಯೋಜನೆಯಲ್ಲಿ ವಿದ್ಯಾರ್ಥಿಗಳೂ ತೊಡಗಿಸಿಕೊಳ್ಳುತ್ತಿದ್ದಾರೆ. ತಂಡದಲ್ಲಿ 40ಕ್ಕೂ ಹೆಚ್ಚು ಜನರಿದ್ದು, ನಗರದ ಕಾಲೇಜುಗಳ ಕೆಲವು ವಿದ್ಯಾರ್ಥಿಗಳು ಕಾಲೇಜು ಅವಧಿ ಮುಗಿದ ಬಳಿಕ ತಂಡದ ಸದಸ್ಯರೊಂದಿಗೆ ಸೇರಿಕೊಂಡು ಆಹಾರ ಹಂಚುತ್ತಾರೆ. 

Advertisement

ಜೋಸೆಫ್‌ ಕ್ರಾಸ್ತಾ ಸ್ಫೂರ್ತಿ
ಮದರ್‌ ಥೆರೇಸಾ ಅವರ ‘ನೂರು ಮಂದಿಗೆ ಉಣಿಸಲು ಸಾಧ್ಯವಾಗದಿದ್ದರೆ, ಓರ್ವನಿಗಾದರೂ ತುತ್ತು ಒದಗಿಸು’ ಎಂಬ ಘೋಷವಾಕ್ಯವನ್ನಿಟ್ಟುಕೊಂಡು ಸೇವೆ ಆರಂಭಿಸಿರುವ ಯುವಕರಿಗೆ ಸ್ಫೂರ್ತಿಯಾಗಿರುವುದು ಮಂಜೇಶ್ವರದ ಸ್ನೇಹಾಲಯದ ಜೋಸೆಫ್‌ ಕ್ರಾಸ್ತಾರ ಕೆಲಸ. ವೃದ್ಧರಿಗೆ ಹಾಗೂ ಮಾನಸಿಕ ಸ್ತಿಮಿತ ಕಳೆದುಕೊಂಡ ಮಂದಿಗೆ ಆಶ್ರಯ, ಆಹಾರ ಒದಗಿಸುತ್ತಿರುವ ಕ್ರಾಸ್ತಾ ಅವರಷ್ಟು ದೊಡ್ಡ ಮಟ್ಟದಲ್ಲಿ ಅಲ್ಲದಿದ್ದರೂ ಕೈಲಾದ ಸೇವೆ ನೀಡಲು ಮುಂದಾಗಿದ್ದೇವೆ ಎನ್ನುತ್ತಾರೆ ತಂಡದ ಸದಸ್ಯರು.

ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next