ಹುಮನಾಬಾದ: ಫಲಿತಾಂಶ ಹೆಚ್ಚಿಸಿರುವ ಕೀರ್ತಿ ತಾಲೂಕಿನ ಎಲ್ಲ ಪ್ರೌಢಶಾಲೆ ಮುಖ್ಯಶಿಕ್ಷಕರು ಹಾಗೂ ಸಿಬ್ಬಂದಿಗೆ ಸಲ್ಲುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಚಪ್ಪ ವಾಲಿ ಹೇಳಿದರು.
ತಾಲೂಕಿನ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರೌಢಶಾಲೆ ಮುಖ್ಯಶಿಕ್ಷಕರು ಪಟ್ಟಣದ ಬಿಆರ್‌ಸಿ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ತಾಲೂಕಿನ ಎಸ್‌ಎಸ್‌ಎಲ್ಸಿ ಫಲಿತಾಂಶ ಕಳೆದ ವರ್ಷಕ್ಕಿಂತ ಉತ್ತಮ ರೀತಿಯಲ್ಲಿ ಬಂದಿರುವುದು ಪ್ರಶಂಸನೀಯ. ಕ್ಷೇತ್ರದ ಶಾಸಕರೂ ಆದ ಸಚಿವ ರಾಜಶೇಖರ ಪಾಟೀಲ ಅವರ ಸಲಹೆಯನ್ನು ಗಂಭೀರ ಪರಿಗಣಿಸಿ ಸರ್ವರ ಸಹಕಾರದೊಂದಿಗೆ ವಿನೂತನ ಯೋಜನೆ ಅನುಷ್ಠಾನಗೊಳಿಸಿದ್ದಕ್ಕೆ ಸಾಧನೆ ಸಾಧ್ಯವಾಯಿತು ಎಂದು ಹೇಳಿದರು.
ಕೇವಲ ಫಲಿತಾಂಶ ಪ್ರಮಾಣ ಹೆಚ್ಚಳ ಒಂದಕ್ಕೆ ಆದ್ಯತೆ ನೀಡದೇ ಗುಣಮಟ್ಟ ಸುಧಾರಣೆ ಮಾಡುವುದನ್ನು ಎಲ್ಲ ಪ್ರೌಢಶಾಲೆ ಮುಖ್ಯಶಿಕ್ಷಕರು ಹಾಗೂ ಸಿಬ್ಬಂದಿ ಸವಾಲಾಗಿ ಸ್ವೀಕರಿಸಬೇಕು. ಮಾಧ್ಯಮ ಮತ್ತು ವಿಷಯ ವಾರು ಎಲ್ಲ ಶಿಕ್ಷಕರು ಸರ್ಕಾರದ ಸೌಲಭ್ಯ ಸದ್ಬಳಕೆ ಮಾಡಿಕೊಂಡು ಆದ್ಯತೆ ಆಧರಿಸಿ ತರಬೇತಿ ಶೈಕ್ಷಣಿಕ ಕಾರ್ಯಾಗಾರ ಆಯೋಜಿಸಬೇಕು. ಕಲಿಕಾ ಸಾಮರ್ಥ್ಯ ಕಡಿಮೆ ಉಳ್ಳವರಿಗಾಗಿ ಪ್ರತ್ಯೇಕ ವರ್ಗ ನಡೆಸಿ ಪರಿಹಾರ ಬೋಧನೆ ವ್ಯವಸ್ಥೆ ಮಾಡುವುದು ಇತ್ಯಾದಿ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಎಲ್ಲರೂ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.
ಬಿಆರ್‌ಸಿ ಶಿವಕುಮಾರ ಪಾರಶೆಟ್ಟಿ, ಎಸ್‌ಎಸ್‌ಎಲ್ಸಿ ಪರೀಕ್ಷೆ ತಾಲೂಕು ನೋಡಲ್ ಅಧಿಕಾರಿ ಲೋಕೇಶಕುಮಾರ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಸರ್ಕಾರಿ ಪದವಿ ಪೂರ್ವ ಕಾಲೇಜು ಉಪಪ್ರಾಚಾರ್ಯ ಕಾಶಿನಾಥ ಕೂಡ್ಲಿ, ಗಡವಂತಿ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಡಿ.ಬಿ. ಜಾಧವ, ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶೇಕ್ ಮೆಹೆಬೂಬ್ ಪಟೇಲ್ ಮಾತನಾಡಿದರು.
ಹಳ್ಳಿಖೇಡ(ಬಿ) ಸರ್ಕಾರಿ ಪ್ರೌyಶಾಲೆ ಮುಖ್ಯಶಿಕ್ಷಕ ಸಂಗಣ್ಣ ಬಿದರೆಡ್ಡಿ, ಜಲಸಂಗವಿ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಮಾಣಿಕಪ್ಪ ಬಕ್ಕನ್, ಅನುದಾನಿತ ಪ್ರೌಢಶಾಲೆ ಮುಖ್ಯಶಿಕ್ಷಕ ಶಾಂತವೀರ
ಯಲಾಲ, ರಾಜೇಂದ್ರ ಉಪ್ಪಲ್ಲಿ, ಕಿಶೋರ ಕುಲಕರ್ಣಿ, ಎಸ್.ವಿ. ಘಾಳೆ, ಸುರೇಶ ಕಟ್ಟಿಮನಿ, ಅನಂತರೆಡ್ಡಿ ಶಿವರಾಯ, ಅನುಜಾ ಬಿಇಒ, ಬಿಆರ್‌ಸಿ ಮತ್ತು ಎಸ್‌ಎಸ್‌ಎಲ್ಸಿ ಪರೀಕ್ಷಾ ನೋಡಲ್ ಅಧಿಕಾರಿ ಅವರನ್ನು ಸನ್ಮಾನಿಸಿ ಅಭಿನಂದಿಸಿದರು. 75ಕ್ಕೂ ಅಧಿಕ ಮುಖ್ಯಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.