ಹುಮನಾಬಾದ: ಚಿಟಗುಪ್ಪ ತಾಲೂಕಿನಲ್ಲಿ ಕೋವಿಡ್ ಹಾವಳಿ ಹೆಚ್ಚಾಗಿದ್ದು, ಈ ವರೆಗೆ ಮೂರು ಜನರ ಬಲಿ ಪಡೆದಿದೆ. ರವಿವಾರ ಒಂದೇ ದಿನ ಒಟ್ಟು 7 ಜನರಲ್ಲಿ ಕೋವಿಡ್ ಸೋಂಕಿರುವುದು ಪತ್ತೆಯಾಗಿದೆ. ಕಳೆದ ಎರಡು ದಿನಗಳ ಹಿಂದೆ ಮೃತಪಟ್ಟಿದ 75 ವರ್ಷದ ವ್ಯಕ್ತಿಗೂ ಹಾಗೂ ಆತನ ಕುಟುಂಬದ ನಾಲ್ಕು ಜನರಲ್ಲಿ ಸೋಂಕಿರುವುದು ದೃಢಪಟ್ಟಿದೆ.
ಚಿಟಗುಪ್ಪ ಪಟ್ಟಣದ ಇಬ್ಬರು ಹಾಗೂ ಪುರಸಭೆ ವ್ಯಾಪ್ತಿಯ ಫಾತ್ಮಾಪುರದ ಒಬ್ಬ ಮಹಿಳೆ ಸೋಂಕು ಕಾಣಿಸಿಕೊಂಡು ಮೃತಪಟ್ಟಿದ್ದಾರೆ. ಮೂವರು ಮೃತಪಟ್ಟ ನಂತರವೇ ಪಾಸಿಟಿವ್ ಪತ್ತೆಯಾಗಿರುವುದು ವಿಶೇಷ. ರವಿವಾರದ ವರದಿ ಪ್ರಕಾರ, ಚಿಟಗುಪ್ಪ ಪಟ್ಟಣದ ಕಂಟೇನ್ಮೆಂಟ್ ಝೋನ್‌ನಲ್ಲಿನ 75 ವರ್ಷದ ವ್ಯಕ್ತಿ ರಕ್ತದೊತ್ತಡ, ಜ್ವರ ಮತ್ತು ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೀದರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮೇ 29ರಂದು ಚಿಟಗುಪ್ಪ ಪಟ್ಟಣದ ಮನೆಯಲ್ಲಿ ಮೃತಪಟ್ಟಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಲಾಗಿದೆ. ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ ಮೃತ ವ್ಯಕ್ತಿ ಗಂಟಲು ದ್ರವ ಮಾದರಿ ಪಡೆದು ಪರೀಕ್ಷೆಗೆ ಕಳುಹಿಸಿದ್ದು, ರವಿವಾರ ಪಾಸಿಟಿವ್ (ಪಿ-2965) ಎಂದು ಗುರುತಿಸಲಾಗಿದೆ.
ಸದ್ಯ ಆರೋಗ್ಯ ಅಧಿಕಾರಿಗಳು ಮೃತ ವ್ಯಕ್ತಿಯ ಸಂಪರ್ಕದವರ ಪತ್ತೆಗೆ ಮುಂದಾಗಿದ್ದಾರೆ. ಮೃತ ವ್ಯಕ್ತಿ ಪತ್ನಿ, ಮಗ ಸೊಸೆ ಹಾಗೂ ಮೊಮ್ಮಗಳಿಗೆ ಸೋಂಕು ಇರುವುದು ಪತ್ತೆಯಾಗಿದೆ. ಅವರ ಮನೆ ಪಕ್ಕದಲ್ಲಿನ 60 ವರ್ಷದ ಮಹಿಳೆ ಹಾಗೂ ಪಟ್ಟಣದ ಬೇರೆ ಬಡಾವಣೆಯ 40 ವರ್ಷದ ಶಿಕ್ಷಣ ಇಲಾಖೆ ಸಿಬ್ಬಂದಿಗೂ ಪಾಸಿಟಿವ್ ಬಂದಿದೆ. ಆದರೆ, ಯಾರ ಸಂಪರ್ಕದಿಂದ ಬಂದಿದೆ ಎಂಬುವುದು ತಿಳಿದುಬಂದಿಲ್ಲ. ಈ ಎಲ್ಲ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆಯ ಡಾ| ವೀರನಾಥ ಕನಕ ನೇತೃತ್ವದಲ್ಲಿ ಪ್ರಾಥಮಿಕ ಹಾಗೂ ಎರಡನೇ ಹಂತದ ಸಂಪರ್ಕದ ವ್ಯಕ್ತಿಗಳ ಪತ್ತೆ ಹಚ್ಚುವ ಕಾರ್ಯ ನಡೆದಿದೆ. ಈ ವರೆಗೆ ತಹಶೀಲ್ದಾರ್ ಜೀಯಾವುದ್ದಿನ್ ನೇತೃತ್ವದಲ್ಲಿ 28 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಅಲ್ಲದೆ, ಬಡಾವಣೆಗಳನ್ನು ಸೀಲ್ ಡೌನ್ ಮಾಡಲಾಗಿದ್ದು, ಎಲ್ಲ ರಸ್ತೆಗಳನ್ನು ಬಂದ್ ಮಾಡಿ ಜನರ ಸಂಚಾರ ನಿಷೇಧಿಸಲಾಗಿದೆ.
ಪಾಸಿಟಿವ್ ಪತ್ತೆಯಾದ ಬಡಾವಣೆಗಳಿಗೆ ಚಿಟಗುಪ್ಪ ತಹಶೀಲ್ದಾರ್ ಮಹಮದ್ ಜೀಯಾವುದ್ದಿನ್, ಕೋವಿಡ್ ಉಸ್ತುವಾರಿ ಅಧಿಕಾರಿ ಡಾ| ಗೋವಿಂದ, ಪುರಸಭೆ ಮುಖ್ಯಾಧಿಕಾರಿ ಶ್ರೀಪಾದ ರಾಜಪುರೋಹಿತ, ತಾಲೂಕು ವೈದ್ಯಾಧಿಕಾರಿ ಅಶೋಕ ಮೈಲಾರೆ, ಡಾ| ವೀರನಾಥ ಕನಕ ಸೇರಿದಂತೆ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.