Advertisement

ಆಯೋಗದಲ್ಲೇ ಮಾನವ ಹಕ್ಕುಗಳ ಉಲ್ಲಂಘನೆ

12:12 PM Jul 09, 2018 | Team Udayavani |

ಬೆಂಗಳೂರು: “ಮಾನವ ಹಕ್ಕುಗಳ ಆಯೋಗದ ಕಚೇರಿಯಲ್ಲೇ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ’ ಎಂದು ಕರ್ನಾಟಕ ಕಾನೂನು ಆಯೋಗದ ಅಧ್ಯಕ್ಷ ಎಸ್‌.ಆರ್‌.ನಾಯಕ್‌ ಬೇಸರ ವ್ಯಕ್ತಪಡಿಸಿದ್ದಾರೆ.

Advertisement

ಕನ್ನಡ ಸಾಹಿತ್ಯ ಪರಿಷತ್‌ನ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ, ಮಾನವ ಹಕ್ಕುಗಳ ರಕ್ಷಣಾ ಸಮಿತಿ ಭಾನುವಾರ ಹಮ್ಮಿಕೊಂಡಿದ್ದ “ಮಾನವ ಹಕ್ಕುಗಳ ಇಂದಿನ ಸ್ಥಿತಿಗತಿ’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, “ಶಾಸಕಾಂಗ ರೂಪಿಸಿದ ಕಾನೂನುಗಳಿಂದ ಮಾನವ ಹಕ್ಕುಗಳ ರಕ್ಷಣೆ ಅಸಾಧ್ಯ.

ಮಾನವ ಹಕ್ಕುಗಳ ಆಯೋಗದ ಕಚೇರಿಯಲ್ಲೇ ಈ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ನಾನು, ಈ ಹಿಂದೆ ಆಯೋಗದ ಅಧ್ಯಕ್ಷನಾಗಿದ್ದ ವೇಳೆ ಇದು ಮನವರಿಕೆಯಾಗಿದೆ. ವೇತನ, ರಜೆ ಸೇರಿದಂತೆ ಹಲವು ವಿಚಾರಗಳಲ್ಲಿ ಅಲ್ಲಿ ಸಾಮಾಜಿಕ ಅಸಮಾನತೆ ಇದೆ’ ಎಂದು ಹೇಳಿದರು.

ಇತ್ತೀಚೆಗೆ ಹಲವು ವಿಚಾರಗಳಲ್ಲಿ ಮಾನವಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಈ ಬಗ್ಗೆ ಜನರಿಗೆ ಸರಿಯಾದ ತಿಳುವಳಿಕೆ ಇಲ್ಲ. ನಾನು ಆಯೋಗದ ಅಧ್ಯಕ್ಷನಾಗಿದ್ದ ವೇಳೆ, ಹಳ್ಳಿಯವರೆಗೂ ಮಾನವಹಕ್ಕುಗಳ ಬಗ್ಗೆ ತಿಳುವಳಿಕೆ ನೀಡುವ ಪ್ರಯತ್ನ ಮಾಡಿದ್ದೆ.

ಇಂದು ಹಲವರು ಬೀದಿಯಲ್ಲಿ ಬಿಸಾಡಿದ ಆಹಾರವನ್ನು ಸೇವಿಸುತ್ತಿದ್ದಾರೆ. ಇಂತವರ ರಕ್ಷಣೆಗೆ ಮಾನವ ಹಕ್ಕುಗಳ ರಕ್ಷಣೆ ವೇದಿಕೆಯ ಕಾರ್ಯಕರ್ತರು ಮುಂದಾಗಬೇಕು ಎಂದು ಮನವಿ ಮಾಡಿದರು.

Advertisement

ಸೈನಿಕರು ಕೂಡ ಮನುಷ್ಯರು: ನಿವೃತ್ತ ನ್ಯಾಯಮೂರ್ತಿ ಚಂದ್ರಶೇಖರಯ್ಯ ಮಾತನಾಡಿ, ಕಾಶ್ಮೀರದಲ್ಲಿ ಸೇನೆಯ ಮೇಲೆ ಕಲ್ಲು ತೂರಾಟ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸೇನೆ ಪ್ರತಿ ದಾಳಿ ನಡೆಸುತ್ತದೆ. ಹೀಗಾಗಿ, ಕೆಲವರು ಸೇನೆಯ ಮೇಲೆ ಮಾನವಹಕ್ಕುಗಳ ಉಲ್ಲಂಘನೆ ಬಗ್ಗೆ ಟೀಕೆ ಮಾಡುತ್ತಾರೆ.

ಈ ರೀತಿಯ ಟೀಕೆ ಮಾಡುವವರು ಸೈನಿಕರೂ ಕೂಡ ನಮ್ಮ ಹಾಗೆ ಮಾನವರು ಎಂಬುವುದನ್ನು ಮೊದಲು ಅರಿತುಕೊಳ್ಳಬೇಕು ಎಂದು ಹೇಳಿದರು. ಮಾನವ ಹಕ್ಕುಗಳ ರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷ ಲಕ್ಷಿನಾರಾಯಣ, ಸಾಹಿತಿ ಪುಸ್ತಕ ಮನೆ ಹರಿಪ್ರಿಯ, ಅರ್ಥಶಾಸ್ತ್ರಜ್ಞ ಸೂರ್ಯ ಮುಕುಂದರಾಜ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next