Advertisement

ಮುರುಕಲು ಗೂಡಿನಲ್ಲಿ ಏಕಾಂಗಿ ಸರಸಜ್ಜಿ

02:00 AM Jun 07, 2018 | Karthik A |

ಬ್ರಹ್ಮಾವರ: ಒಂದು ಕ್ಷಣ ಮೊಬೈಲ್‌, ವಿದ್ಯುತ್‌ ಇಲ್ಲದಿದ್ದರೆ ಚಡಪಡಿಸುವ ಇಂದಿನ ದಿನಗಳಲ್ಲಿ ಕಳೆದ 40 ವರ್ಷಗಳಿಂದ 85 ವಯಸ್ಸಿನ ಅಜ್ಜಿಯೊಬ್ಬರು ಯಾವುದೇ ಸೌಕರ್ಯ, ಅನುಕೂಲಗಳಿಲ್ಲದೆ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದಾರೆ. ಕರ್ಜೆ ಗ್ರಾ.ಪಂ. ವ್ಯಾಪ್ತಿಯ ಕಡಂಗೋಡು ಸಮೀಪ ಸರಸಜ್ಜಿ ಮಣ್ಣಿನ ಮುರುಕಲು ಗೂಡಿನಲ್ಲಿ ವಾಸಿಸುತ್ತಿದ್ದಾರೆ. ಸರಸಜ್ಜಿಯ ಪತಿ ತೀರಿಕೊಂಡು ಹಲವು ವರ್ಷಗಳೇ ಕಳೆದಿವೆ. ಮಗಳು ಮೃತಪಟ್ಟಿದ್ದಾಳೆ. ಇದ್ದ ಓರ್ವ ಮಗನ ಜತೆಯೂ ಅವರು ವಾಸವಿಲ್ಲ.

Advertisement

ಕೋಳಿ ಗೂಡಿನ ರೀತಿ ಗುಡಿಸಲು
ಸರಸಜ್ಜಿ ವಾಸವಿರುವುದು ರಾಜ್ಯದ ಏಕೈಕ ಮಣ್ಣಿನ ಅರಮನೆ ಖ್ಯಾತಿಯ ಸೂರಾಲು ಸನಿಹದ ಪುಟ್ಟ ಗುಡಿಸಲಿನಲ್ಲಿ. ಇದು ಅಕ್ಷರಶಃ ಕೋಳಿಗೂಡಿನಂತಿದೆ. ಅಜ್ಜಿ ಸ್ವತಃ ಕೈಯಾರೆ ಮಣ್ಣು ಕಲಸಿ ಇದನ್ನು ಕಟ್ಟಿದ್ದಾರೆ. ಮಾಡಿಗೆ ಮಡಲು, ಟಾರ್ಪಾಲಿನ್‌ ಹಾಕಿಕೊಂಡಿದ್ದಾರೆ. ಮಳೆಗಾಲದಲ್ಲಿ ಇದಕ್ಕೆ ನೀರು ನುಗ್ಗುತ್ತದೆ. ಇತ್ತೀಚೆಗೆ ಭಾರೀ ಮಳೆಗೆ ಇದ್ದ ಅಕ್ಕಿ ಚೀಲವೂ ಒದ್ದೆಯಾಗಿದೆ.

ಸ್ವಾಭಿಮಾನಿ ಅಜ್ಜಿ
ಇಷ್ಟಾದರೂ ಅಜ್ಜಿ ಇನ್ನೊಬ್ಬರನ್ನು ನಂಬಿಕೊಂಡಿಲ್ಲ. ಸ್ವಾಭಿಮಾನದಿಂದ ಬದುಕುತ್ತಿದ್ದಾರೆ. ಸುಮಾರು 85ರ ವಯಸ್ಸಿನಲ್ಲೂ ಸರಸರನೆ ನಡೆದಾಡುತ್ತಾರೆ. ಮನೆ-ಪರಿಸರ ಸ್ವಚ್ಚತೆಯಲ್ಲಿ ಜನಸಾಮಾನ್ಯರಿಗೆ ಮಾದರಿಯಾಗಿದ್ದಾರೆ.

ಸೌಲಭ್ಯಗಳಿಂದ ವಂಚಿತ..
ಅಜ್ಜಿಯ ಮನೆಗೆ ವಿದ್ಯುತ್‌ ಇಲ್ಲ. ಯಾವುದೇ ಆಧುನಿಕ ಸೌಲಭ್ಯಗಳಿಲ್ಲ. ಕನಿಷ್ಠ ಪಕ್ಷ ಸೀಮೆ ಎಣ್ಣೆ ಇಲ್ಲದೆ ದೀಪವೂ ಉರಿಯುತ್ತಿಲ್ಲ. ಅತೀ ಆವಶ್ಯಕ ಪಾತ್ರೆಗಳು, ದಿನಸಿ ಸಾಮಾಗ್ರಿಗಳು ಮಾತ್ರ. ಇನ್ನು ಪಡಿತರ ಚೀಟಿ, ಆಶ್ರಯ ಮನೆ, ಸಂಧ್ಯಾ ಸುರಕ್ಷಾ ಇತ್ಯಾದಿ ಸೌಲಭ್ಯಗಳ ಗೋಜಿಗೇ ಹೋಗಲಿಲ್ಲ. ಸರಸಜ್ಜಿ ನಿರ್ಗತಿಕಳಲ್ಲ. ಗುಡಿಸಲು ಹಾಗೂ ಸುತ್ತಲಿನ ಪರಿಸರ ಸೇರಿ 1 ಎಕ್ರೆ ಮಿಕ್ಕಿದ ಜಾಗ ಆಕೆಯ ಹೆಸರಿನಲ್ಲಿದೆ ಎನ್ನಲಾಗಿದೆ.

ಗೇರು ಜೀವನಾಧಾರ
ಅಜ್ಜಿಯು ಮನೆ ಸುತ್ತಮುತ್ತಲಿನ ಗೇರುಮರಗಳಿಂದ ಗೇರು ಬೀಜ ಸಂಗ್ರಹಿಸಿ ಜೀವನ ಸಾಗಿಸುತ್ತಿದ್ದಾರೆ. ಮನೆ ಖರ್ಚಿಗೆ ಒಂದಷ್ಟು ತರಕಾರಿಯನ್ನೂ ಬೆಳೆಯುತ್ತಾರೆ. ಆದರೆ ಜನರೊಂದಿಗೆ ಯಾವುದೇ ಒಡನಾಟವಿಲ್ಲದೆ ಏಕಾಂಗಿಯಾಗಿ ಬದುಕುತ್ತಿದ್ದಾರೆ.

Advertisement

ಮನೆ ನಿರ್ಮಿಸಿ ಕೊಡುತ್ತೇವೆ
ಸರಸಜ್ಜಿಯ ಗುಡಿಸಲಿಗೆ ಭೇಟಿ ನೀಡಿದ್ದೇನೆ. ಅವರು ಯಾವುದೇ ಕಚೇರಿಗೆ ಬರಲು ಒಪ್ಪದ ಕಾರಣ ಆಧಾರ್‌ ಕಾರ್ಡ್‌ ಹಾಗೂ ರೇಶನ್‌ ಕಾರ್ಡ್‌ಗಾಗಿ ಮನೆಗೆ ಹೋಗಿ ಸಹಿ ತೆಗೆದುಕೊಳ್ಳುವಂತೆ ತಹಶೀಲ್ದಾರ್‌ಗೆ ಸೂಚಿಸಿದ್ದೇನೆ. ಅಜ್ಜಿಯ ಒಪ್ಪಿಗೆಯಂತೆ ಸಮೀಪದಲ್ಲೇ ವೈಯಕ್ತಿಕ ಹಾಗೂ ಕಾರ್ಯಕರ್ತರ ಸಹಕಾರದಿಂದ ಮನೆ ನಿರ್ಮಿಸುತ್ತೇವೆ.
– ಕೆ.ರಘುಪತಿ ಭಟ್‌,  ಉಡುಪಿ ಶಾಸಕರು

ಅಜ್ಜಿ ಸ್ಪಂದಿಸಿದರೆ..
ಸರಸಜ್ಜಿಯು ಹೊರಪ್ರಪಂಚದಿಂದ ದೂರವಿದ್ದಾರೆ. ಅಜ್ಜಿಯು ಸ್ಪಂದಿಸಿದರೆ ಪಡಿತರ ಚೀಟಿ, ಬಸವ ವಸತಿ, ಸಂಧ್ಯಾ ಸುರಕ್ಷಾ ಸೌಲಭ್ಯಗಳನ್ನು ತತ್‌ಕ್ಷಣ ಮಾಡಿಸುತ್ತೇವೆ.
– ಅಶೋಕ್‌ ಶೆಟ್ಟಿ ಮೈರ್ಮಾಡಿ, ಗ್ರಾ.ಪಂ. ಸದಸ್ಯ

ಮನೆ ಪ್ರಾರಂಭಿಸಿದ್ದೆವು
ದಾನಿಗಳ ಸಹಕಾರದಿಂದ ಸರಸಜ್ಜಿಗೆ ಮನೆ ಕಟ್ಟಲು ಸುಮಾರು 6 ತಿಂಗಳ ಹಿಂದೆ ಕಲ್ಲು ಸಹ ತಂದು ಹಾಕಿದ್ದೆವು. ಪಂಚಾಂಗ ನಿರ್ಮಾಣ ಪ್ರಾರಂಭಿಸಿದ್ದೆವು. 
– ರಾಘವೇಂದ್ರ ಶೆಟ್ಟಿ ಕರ್ಜೆ

Advertisement

Udayavani is now on Telegram. Click here to join our channel and stay updated with the latest news.

Next