ಬೆಂಗಳೂರು: ಶಿಕ್ಷಣ ಸಂಸ್ಥೆಗಳು ಮಕ್ಕಳಲ್ಲಿ ಸಾಮಾಜಿಕ ನ್ಯಾಯ, ಸಮಾನತೆ, ಬ್ರಾತೃತ್ವ ಮನೋಭಾವ ಗಳನ್ನು ತುಂಬಿ ವಿಶ್ವಮಾನರನ್ನಾಗಿ ಬೆಳೆಸಬೇಕು ಎಂದು ನಿವೃತ್ತ ನ್ಯಾಯಮೂರ್ತಿ ಡಾ.ಎಸ್.ಆರ್‌ನಾಯಕ್ ಸಲಹೆ ನೀಡಿದ್ದಾರೆ.
ಬಾಗಲಗುಂಟೆಯ ಬ್ಲಾಸಂಸ್ ಶಾಲೆ ಮತ್ತು ಬ್ರೈನ್ ಸೆಂಟರ್‌ನ ಬೆಳ್ಳಿ ಹಬ್ಬದ ಸಂಭ್ರಮಾಚರಣೆ ಅಂಗವಾಗಿ ಬೆಂ. ಉತ್ತರ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ “ಬ್ಲಾಸಂಸ್ ಸುಗಮ ನೆನಪು-2017 ಬೆಳ್ಳಿ ಸಂಭ್ರಮಾಚರಣೆ, ಸಿ. ಅಶ್ವಥ್ ಅವರ ಸಂಗೀತ ನೆನಪಿನಂಗಳ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಾಲೆಗಳು ಮಕ್ಕಳಿಗೆ ಪಠ್ಯಪುಸ್ತಕದಲ್ಲಿನ ವಿಚಾರಗಳನ್ನು ತಿಳಿಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವಂತೆ ಸಿದ್ಧಪಡಿಸುವುದಷ್ಟೇ ಅಲ್ಲ, ಸದ್ಗುಣ, ಸಚ್ಚಾರಿತ್ರ್ಯ, ಸಮಾನತೆ, ಭಾತೃತ್ವ, ಸಾಮಾಜಿಕ ನ್ಯಾಯದಂತಹ ವಿಚಾರಗಳನ್ನು ತಿಳಿಸುವ ಮೂಲಕ ಅವರನ್ನು ಒಬ್ಬ ಪರಿಪೂರ್ಣ ವ್ಯಕ್ತಿಯನ್ನಾಗಿ ರೂಪಿಸುವ ಕೆಲಸ ಮಾಡಬೇಕು. ಇದರಿಂದ ಸಮಾಜದಲ್ಲಿ ನಡೆಯುವ ಅಪರಾಧ, ಅನ್ಯಾಯದಂತಹ ಘಟನೆಗಳು ಕ್ರಮೇಣ ಇಳಿಮುಖವಾಗಲು ಸಹಕಾರಿಯಾಗುತ್ತದೆ ಎಂದರು.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಮಾತನಾಡಿ, ಶಿಕ್ಷಣ ವ್ಯವಸ್ಥೆಯಲ್ಲಿನ ಅಸಮಾನತೆ ಹೋಗಲಾಡಿಸಬೇಕಿದೆ. ಬಡವನಿಗೆ ಒಂದು ಶಾಲೆ, ಬಲ್ಲಿದನಿಗೆ ಒಂದು ಶಾಲೆ ಎಂಬ ಅಸಮಾನತೆ ಸಮಾಜಕ್ಕೆ ಒಳಿತಲ್ಲ. ಎಲ್ಲರಿಗೂ ಒಂದೇ ಶಾಲೆ ಹಾಗೂ ಸಮಾನ ಶಿಕ್ಷಣ ವ್ಯವಸ್ಥೆ ಜಾರಿಯ ಪ್ರಯತ್ನವಾಗಬೇಕು ಎಂದರು.
ಇದೇ ವೇಳೆ ನ್ಯೂ ಬ್ಲಾಸಂಸ್ ಎಜುಕೇಷನ್ ಸೊಸೈಟಿ ವತಿಯಿಂದ ನಿವೃತ್ತ ನ್ಯಾಯಮೂರ್ತಿ ಎಸ್.ಆರ್. ನಾಯಕ್ ಅವರಿಗೆ “ನ್ಯಾಯದೀವಿಗೆ’ ಮತ್ತು ಸಚಿವ ತನ್ವೀರ್ ಅವರಿಗೆ “ಶಿಕ್ಷಣಾಭಿವೃದ್ಧಿ ಶ್ರೇಷ್ಠ’ ಬಿರುದುಗಳನ್ನು ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶಾಸಕರಾದ ಅಶ್ವಥ್‌ನಾರಾಯಣ್, ಮುನಿರಾಜು, ಮಾಜಿ ಉಪಸಭಾಪತಿ ಪುಟ್ಟಣ್ಣ, ಸಿ.ಅಶ್ವಥ್ ಅವರ ಪತ್ನಿ ಚಂದ್ರಾ, ಬ್ಲಾಸಂಸ್ ಶಿಕ್ಷಣ ಸಂಸ್ಥೆ ನಿರ್ದೇಶಕ ಡಿ.ಶಶಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.