ಮೈಸೂರು: ಮತದಾನದ ಬಗ್ಗೆ ಸಂದೇಶ ಸಾರಲು ಇಂಗ್ಲಿಷ್ ಭಾಷೆಯಲ್ಲಿ “ಕಾಸ್ಟ್ ಯುವರ್ ವೋಟ್ ಏಪ್ರಿಲ್ 18′ ಎಂಬ ಸಾಲನ್ನು ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಂದ ಮಾನವ ಸರಪಳಿ ನಿರ್ಮಿಸಿ ಮತದಾನ ಬಗ್ಗೆ ವಿನೂತನವಾಗಿ ಜಾಗೃತಿ ಮೂಡಿಸಲಾಯಿತು.
ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಮೈಸೂರಿನ ಗೋಕುಲಂನಲ್ಲಿರುವ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನ ಸಹಯೋಗದಲ್ಲಿ ವಿದ್ಯಾರ್ಥಿಗಳಿಂದ ಮಾನವ ಸರಪಳಿ ನಿರ್ಮಿಸುವ ಮತದಾನ ಜಾಗೃತಿ ಕಾರ್ಯಕ್ರಮವನ್ನು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕಾಧಿಕಾರಿ ಕೆ.ಜ್ಯೋತಿ ಉದ್ಘಾಟಿಸಿ ಚುನಾವಣಾ ಪ್ರತಿಜ್ಞಾವಿಧಿ ಬೋಧಿಸಿದರು.
ನಂತರ ಮಾತನಾಡಿದ ಅವರು, ಹೊಸದಾಗಿ ಮತದಾನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿ, ಶ್ರದ್ಧೆ, ಆಸಕ್ತಿ ಹಾಗೂ ಉತ್ಸಾಹದಿಂದ ಸ್ವಯಂ ಪ್ರೇರಿತರಾಗಿ ಮತದಾನದಲ್ಲಿ ಪಾಲ್ಗೊಳ್ಳಬೇಕು. ಯೋಚಿಸಿ ಎಚ್ಚರಿಕೆಯಿಂದ ನೈತಿಕ ಮತದಾನ ಮಾಡಿ ಎಂದು ಮನವಿ ಮಾಡಿದರು.
ಶೇಕಡ ಮತದಾನ ಪ್ರಮಾಣ ಹೆಚ್ಚಿಸಲು ಹಾಗೂ ಸಾರ್ವಜನಿಕರ ಹಿತಾಸಕ್ತಿಗಾಗಿ ಹಿರಿಯರು, ಅಕ್ಕ ಪಕ್ಕದ ಮನೆಯವರು ಹಾಗೂ ತಮ್ಮ ನೆರೆಹೊರೆಯವರಿಗೆ ಮತದಾನ ಮಾಡುವಂತೆ ಪ್ರೇರೇಪಿಸಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾಲೇಜಿನಲ್ಲಿ ವಿದ್ಯಾರ್ಥಿಗಳು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸಲು ಮೂರು ಸೆಲ್ಫಿ ಬೂತ್ ತೆರೆದು ಮತದಾನ ಬಗ್ಗೆ ಜಾಗೃತಿ ಮೂಡಿಸಲಾಯಿತು. ಒಂದು ಸೆಲ್ಫಿ ಬೂತ್ನಲ್ಲಿ ಓತ್ಲಾ ಹೊಡೆಯದೆ ವೋಟ್ ಒತ್ಲಾ ಎಂಬ ಸಂದೇಶ ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಸ್ವೀಪ್ ಕಾರ್ಯದರ್ಶಿ ಕೃಷ್ಣ, ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಸದಾಶಿವೇಗೌಡ, ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ ವಿಭಾಗದ ಮುಖ್ಯಸ್ಥರಾದ ಡಾ.ಸಿ.ಎಂ.ಪಾಟೀಲ್, ಸಾಂಖ್ಯೀಕ ಇಲಾಖೆಯ ಸಹಾಯಕ ನಿರ್ದೇಶಕ ಪ್ರಕಾಶ್, ಸಾಂಖ್ಯೀಕ ಅಧಿಕಾರಿ ಪ್ರವೀಣ್ ಹಾಗೂ ಕಾಲೇಜಿನ ಸಿಬ್ಬಂದಿ ಉಪಸ್ಥಿತರಿದ್ದರು.