Advertisement

30ರಂದು ಸೌಹಾರ್ದ ಕರ್ನಾಟಕಕ್ಕಾಗಿ ಮಾನವ ಸರಪಳಿ

04:17 PM Jan 22, 2018 | |

ಸಿಂಧನೂರು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಪುಣ್ಯತಿಥಿ ಪ್ರಯುಕ್ತ ಜ.30ರಂದು ನಗರದಲ್ಲಿ ಸೌಹಾರ್ದ ಕರ್ನಾಟಕಕ್ಕಾಗಿ ಮಾನವ ಸರಪಳಿ ನಿರ್ಮಿಸಿ ಸೌಹಾರ್ದ ಸಂದೇಶ ಸಾರಲು ದಲಿತ ಮತ್ತು ಪ್ರಗತಿಪರ ಸಂಘಟನೆಗಳ
ಒಕ್ಕೂಟದ ಮುಖಂಡರು ನಿರ್ಣಯಿಸಿದ್ದಾರೆ.

Advertisement

ನಗರದ ತಾಪಂ ಸಭಾಂಗಣದಲ್ಲಿ ರವಿವಾರ ಪೂರ್ವಭಾವಿ ಸಭೆ ನಡೆಸಿದ ಮುಖಂಡರು ಈ ಕುರಿತು ನಿರ್ಣಯ ಕೈಗೊಂಡರು. ಮನುಜಮತ ಬಳಗದ ಅಧ್ಯಕ್ಷ ಡಿ.ಎಚ್‌. ಕಂಬಳಿ ಮಾತನಾಡಿ, ನಮ್ಮದು ಸೌಹಾರ್ದ ಕರ್ನಾಟಕ. ಇಲ್ಲಿ ಜಾತ್ಯತೀತತೆ ಆಳವಾಗಿ ಬೇರುಬಿಟ್ಟಿದೆ. ಇದನ್ನು ಬಸವಣ್ಣನವರಿಂದ ಹಿಡಿದು ಅನೇಕ ಶರಣರು, ಸಾಧು, ಸಂತರು, ಸೂಫಿಗಳು ವೈಚಾರಿಕ ನೆಲೆಗಟ್ಟಿನಿಂದ ಬಲಗೊಳಿಸಿದ್ದಾರೆ. ಆದರೆ ಇತ್ತೀಚೆಗೆ ಸಂಘ ಪರಿವಾರ ಹಾಗೂ ಮೂಲಭೂತವಾದಿಗಳು ಜಾತಿ, ಧರ್ಮ, ದೇವರು, ಗೋರಕ್ಷಣೆ ಮತ್ತಿತರ ಭಾವನಾತ್ಮಕ ವಿಚಾರಗಳನ್ನು ಕೆದಕಿ
ಕೋಮು ದ್ವೇಷದ ಜ್ವಾಲೆ ಹರಡಿಸಿ ರಾಜ್ಯದಲ್ಲಿ ಅಶಾಂತಿಯ ವಾತವರಣ ಸೃಷ್ಟಿಸುತ್ತಿದ್ದಾರೆ.

ಅಲ್ಲದೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಸಂವಿಧಾನ ಬದಲಿಸುತ್ತೇವೆ, ಜಾತ್ಯತೀತರು ತಂದೆ-ತಾಯಿಗೆ ಹುಟ್ಟಿಲ್ಲ ಹೀಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇದರ ವಿರುದ್ಧ ಬಹುಸಂಖ್ಯಾತರೆಲ್ಲರೂ ಒಗ್ಗೂಡಿ ಸಂಘಟಿತ ಹೋರಾಟ ನಡೆಸುವ ಮೂಲಕ ಬಿಸಿ ಮುಟ್ಟಿಸಬೇಕಾದ ಅನಿವಾರ್ಯತೆಯಿದೆ ಎಂದು ಹೇಳಿದರು.

ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಶೇಕ್ಷಾ ಖಾದ್ರಿ ಮಾತನಾಡಿ, ಜ.30ರಂದು ಮಧ್ಯಾಹ್ನ 3 ಗಂಟೆಗೆ ಗಾಂಧಿ ವೃತ್ತದಿಂದ
ರ್ಯಾಲಿ ಆರಂಭಿಸಿ, ಬಸವೇಶ್ವರ ವೃತ್ತ, ಟಿಪ್ಪು ಸುಲ್ತಾನ್‌ ವೃತ್ತ, ಹಳೆಬಜಾರ್‌ ರಸ್ತೆ, ರಾಣಿ ಚನ್ನಮ್ಮ ವೃತ್ತ, ಕನಕದಾಸ ವೃತ್ತ ಮಾರ್ಗವಾಗಿ ಪುನಃ ಗಾಂಧಿ ವೃತ್ತಕ್ಕೆ ತಲುಪಿ ಮಾನವ ಸರಳಿ ನಿರ್ಮಿಸಬೇಕು. ಇಲ್ಲವೇ ಮಿನಿವಿಧಾನಸೌಧ
ಆವರಣದಲ್ಲಿ ಮಾನವ ಸರಪ ನಿರ್ಮಿಸಬೇಕು.  ವಿದ್ಯಾರ್ಥಿ, ಯುವಜನರು, ವಿವಿಧ ಕೂಲಿ ಕಾರ್ಮಿಕರು, ದಲಿತಪರ, ಕನ್ನಡಪರ, ಪ್ರಗತಿಪರ ಸಂಘಟನೆಗಳ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಕೋರಿದರು. 

ಜಾತಿ ನಿರ್ಮೂಲನಾ ಚಳವಳಿ ರಾಜ್ಯ ಸಂಚಾಲಕ ಎಚ್‌.ಎನ್‌.ಬಡಿಗೇರ, ಸಾಹಿತಿ ನರಸಿಂಹಪ್ಪ ಜನತಾಕಾಲೋನಿ, ದಲಿತ ಮುಖಂಡ ಆರ್‌.ಬೋನ್‌ವೆಂಚರ್‌, ಉಪನ್ಯಾಸಕ ಚಂದ್ರಶೇಖರ ಗೊರೇಬಾಳ, ಮುಸ್ಲಿಂ ಮುಖಂಡ ಬಾಬರಪಾಷಾ ವಕೀಲ, ಎಸ್‌.ಎಂ.ಖಾದ್ರಿ ಸಾಲಗುಂದಾ, ಅಶೋಕ ನಂಜಲದಿನ್ನಿ ಮಾತನಾಡಿದರು. ಮುಖಂಡರಾದ ವೆಂಕನಗೌಡ ಗದ್ರಟಗಿ, ಹಾಸೀಮ್‌ಅಲಿ ಜಾಗೀರದಾರ, ಬಸವರಾಜ ಬಾದರ್ಲಿ, ಶಂಕರ ಗುರಿಕಾರ ಇತರರಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next