Advertisement

ಹುಲಿಕಲ್‌ ಘಾಟಿ ಪ್ರಯಾಣಕ್ಕೆ ಹುಲಿ ಗುಂಡಿಗೆಯೇ ಬೇಕು!

10:30 AM Dec 22, 2019 | mahesh |

ಸಿದ್ದಾಪುರ: ಶಿವಮೊಗ್ಗ ಜಿಲ್ಲೆಯನ್ನು ಕರಾವಳಿಯ ಜತೆಗೆ ಬೆಸೆಯುವ ಪ್ರಮುಖ ಹುಲಿಕಲ್‌ ಘಾಟಿ ರಸ್ತೆಯ ಅಲ್ಲಲ್ಲಿ ತಡೆಬೇಲಿಗಳು ಮುರಿದಿದ್ದು, ವಾಹನ ಸವಾರರಿಗೆ ಅಪಾಯ ಕಾದಿದೆ. ರಸ್ತೆಯ ಸ್ಥಿತಿ ಗತಿಯೂ ಹದಗೆಟ್ಟಿದೆ. ಎರಡು ಜಿಲ್ಲೆಗಳ ಸಂಪರ್ಕ ಕೊಂಡಿ ಯಾಗಿರುವುದರಿಂದ ಶಾಶ್ವತ
ತಡೆಬೇಲಿ ನಿರ್ಮಾಣ, ದುರಸ್ತಿಗಾಗಿ ಆಗ್ರಹ ಕೇಳಿಬರುತ್ತಿವೆ.
ನಿತ್ಯ ಸಾವಿರಾರು ವಾಹನಗಳ ಸಂಚಾರ ಇದ್ದರೂ ಕನಿಷ್ಠ ತಡೆ ಬೇಲಿ ದುರಸ್ತಿ ಕಾರ್ಯವೂ ನಡೆದಿಲ್ಲ. ಘಾಟಿ ರಸ್ತೆಯನ್ನು ಅಲ್ಲಲ್ಲಿ ಅಗಲಗೊಳಿಸಲಾಗಿದೆ, ಕಾಂಕ್ರೀಟ್‌ ಹಾಸಲಾಗಿದೆ. ಆದರೆ ದೇವ ಸ್ಥಾನದ ತಿರುವು ಮಾತ್ರ ಹಾಗೆಯೇ ಇದೆ. ಇಲ್ಲಿ ಎರಡು ವಾಹನಗಳು ಚಲಿಸುವಷ್ಟು ವಿಶಾಲವಾದ ರಸ್ತೆಯಿಲ್ಲ. ಬಾಳೆಬರೆ ಶ್ರೀ ಚಂಡಿಕಾಂಬಾ ದೇವಸ್ಥಾನದ ಬಳಿಯ “ಯು’ ತಿರುವಿನಲ್ಲಿ ತಡೆಬೇಲಿಗಳು ಸಂಪೂರ್ಣ ಜಖಂಗೊಂಡಿರುವುದರಿಂದ ಅಪಾಯ ಕಾದಿದೆ.

Advertisement

ಜತೆಗೆ ಸಮರ್ಪಕವಾದ ಚರಂಡಿ ವ್ಯವಸ್ಥೆಯಿಲ್ಲ. ಒಂದೆಡೆ ಬಂಡೆ ಕಲ್ಲಿನಿಂದಾವೃತವಾದ ಗುಡ್ಡವಾದರೆ ಇನ್ನೊಂದೆಡೆ ಸಾವಿರ ಅಡಿಗೂ ಮಿಕ್ಕಿದ ಕಂದಕವಿದೆ. ರಸ್ತೆಯ ಇಕ್ಕೆಲಗಳಲ್ಲಿ ಬೆಳೆದು ನಿಂತ ಬೃಹದಾಕಾರದ ಮರಗಳು ಮತ್ತು ಪೊದೆ- ಗಿಡಗಂಟಿಗಳಿಂದ ತಿರುವಿನಲ್ಲಿ ಎದುರಿನಿಂದ ಬರುವ ವಾಹನಗಳು ಕಾಣಿಸದೆ ಅಪಘಾತ ಗಳು ಸಂಭವಿಸುತ್ತವೆ.

ರಾಜ್ಯ ರಸ್ತೆಯಾದರೂ ಗುಣಮಟ್ಟವಿಲ್ಲ
ಇದು ರಾಜ್ಯ ಹೆದ್ದಾರಿಯಾಗಿದ್ದರೂ ಗುಣಮಟ್ಟದ ರಸ್ತೆಯಾಗಿಲ್ಲ. ಇದು ಬಯಲು ಸೀಮೆಯಿಂದ ಕರಾವಳಿಗೆ ಸನಿಹ ಸಂಪರ್ಕವಾಗಿರುವ ಕಾರಣ ಘನ ವಾಹನಗಳು ಮಿತಿಮೀರಿ ಸರಕು ಹೇರಿಕೊಂಡು ಸಂಚರಿಸುತ್ತವೆ. ಇದರಿಂದ ಹೊಂಡ ಗುಂಡಿಗಳಾಗಿವೆ. ಅಲ್ಲದೆ ಕುಸಿಯುವ ಭೀತಿ ಎದುರಾಗಿದೆ. ತಿರುವುಗಳಲ್ಲಿ ಓವರ್‌ಲೋಡ್‌ ಹೊಂದಿರುವ ಘನ ವಾಹನಗಳು ತಿರುಗುವಾಗ ಭೂಮಿಯೇ ಕಂಪಿಸುತ್ತದೆ.

ಸೂಚನ ಫ‌ಲಕಗಳಿಲ್ಲ
ದಿನಕ್ಕೆ 1,500ಕ್ಕೂ ಹೆಚ್ಚು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ. ವಾಹನ ದಟ್ಟಣೆ ಇರುವ ಈ ರಸ್ತೆಯ ತಿರುವುಗಳಲ್ಲಿ ಸೂಚನ ಫಲಕಗಳು ಮತ್ತು ಅಲ್ಲಲ್ಲಿ ನಿರ್ಮಿಸಿದ ತಡೆಗೋಡೆ ಮಾಯವಾಗಿವೆ. ವಾಹನ ದಟ್ಟಣೆ ತೀವ್ರಗೊಂಡರೂ ಓಬಿರಾಯನ ಕಾಲದ ರಸ್ತೆ ಅದೇ ಸ್ವರೂಪವನ್ನು ಈಗಲೂ ಉಳಿಸಿಕೊಂಡಿದೆ. ರಾಷ್ಟ್ರೀಯ ಹೆದ್ದಾರಿಯ ಪ್ರಮುಖ ಘಾಟಿಗಳಲ್ಲಿ ಸಂಚಾರ ಸ್ಥಗಿತಗೊಂಡಾಗಲೂ ಈ ರಸ್ತೆಯ ಮೇಲೆ ಅಧಿಕ ಹೊರೆ ಬೀಳುತ್ತದೆ. ಇದೆಲ್ಲದರ ಪರಿಣಾಮವಾಗಿ ಘಾಟಿ ರಸ್ತೆ ಹದಗೆಡುತ್ತಿದೆ.

ಕುಂದಾಪುರ ವಡೇರಹೋಬಳಿಯಿಂದ ಉಡುಪಿ ಜಿಲ್ಲೆಯ ಗಡಿ ಭಾಗದವರೆಗೆ 45 ಕಿ.ಮೀ. ಉದ್ದದ ರಸ್ತೆಯ ಕಾಮಗಾರಿಗೆ ಸಿಆರ್‌ಎಫ್‌ ಫಂಡ್‌ನ‌ಲ್ಲಿ 10 ಕೋ.ರೂ. ಮಂಜೂರಾಗಿದೆ. ಕಾಮಗಾರಿ ಪೂರ್ಣಗೊಂಡಿದೆ. ಇನ್ನೂ ಒಂದು ವರ್ಷದ ನಿರ್ವಹಣೆ ಬಾಕಿ ಇದ್ದು, ಅದು ಮುಗಿದ ಮೇಲೆ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸುತ್ತಾರೆ. ದೊಡ್ಡ ಮಟ್ಟದ ಸಮಸ್ಯೆ ಇದ್ದರೆ ಪರಿಶೀಲನೆ ನಡೆಸಿ, ಶಾಶ್ವತ ತಡೆಬೇಲಿ ನಿರ್ಮಾಣಕ್ಕಾಗಿ ಸರಕಾರಕ್ಕೆ ಪತ್ರ ಬರೆಯುತ್ತೇವೆ. ಘನ ವಾಹನಗಳ ಓವರ್‌ ಲೋಡ್‌ ಸಂಚಾರದ ಬಗ್ಗೆ ಆರ್‌ಟಿಒ ಕ್ರಮ ತೆಗೆದುಕೊಳ್ಳಬೇಕು.
– ದುರ್ಗಾದಾಸ್‌, ಎಇಇ ಲೋಕೋಪಯೋಗಿ ಇಲಾಖೆ, ಉಡುಪಿ ಜಿಲ್ಲಾ ಉಪ ವಿಭಾಗ

Advertisement

ನಾವು ದಿನ ನಿತ್ಯ ಈ ರಸ್ತೆಯ ಮೂಲಕ ಓಡಾಡುತ್ತೇವೆ. ನಮಗೆ ರಸ್ತೆಯ ತಿರುವು ಮತ್ತು ಅಗಲದ ಬಗ್ಗೆ ಮಾಹಿತಿ ಇದೆ. ರಸ್ತೆಯ ಕೆಲವು ಕಡೆಗಳಲ್ಲಿ ತಡೆಬೇಲಿಗಳು ಮುರಿದು ಬಿದ್ದಿದ್ದರಿಂದ ನಮಗೂ ವಾಹನ ಓಡಿಸಲು ಭಯವಾಗುತ್ತದೆ. ಹೊಸಬರಿಗೆ ರಸ್ತೆ ಮತ್ತು ತಿರುವುಗಳ ಬಗ್ಗೆ ಮಾಹಿತಿ ಇಲ್ಲದಿರುವುದರಿಂದ ಅಪಘಾತವಾಗಿ ವಾಹನಗಳು ಪ್ರಪಾತಕ್ಕೆ ಬೀಳುತ್ತವೆ. ಅಪಘಾತ ತಪ್ಪಿಸಲು ಶಾಶ್ವತ ತಡೆಗೋಡೆ ಮತ್ತು ಸೂಚನ ಫಲಕಗಳು ಬೇಕು.
– ದಿನಕರ ಗ್ಯಾಸ್‌ ಲಾರಿ ಚಾಲಕ

ಹುಲಿಕಲ್‌ ಘಾಟಿಯ ಬಾಳೆಬರೆ ಶ್ರೀ ಚಂಡಿಕಾಂಬಾ ದೇವಸ್ಥಾನದ ಬಳಿ ಅಪಾಯಕಾರಿ ತಿರುವು ಇದೆ. ರಸ್ತೆ ಅಗಲಗೊಳಿಸಲು ಮತ್ತು ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ ಅರಣ್ಯ ಇಲಾಖೆಯಿಂದ ಅಡ್ಡಿ ಇದೆ. ಒಪ್ಪಿಗೆಗಾಗಿ ಹಿಂದೆ ಪತ್ರ ಬರೆದಿದ್ದರೂ ಇಂದಿಗೂ ಉತ್ತರ ಬಂದಿಲ್ಲ. ಓವರ್‌ ಲೋಡ್‌ನಿಂದಾಗಿ ರಸ್ತೆ ಹಾಳಾಗಿದೆ. ಕಬ್ಬಿಣದ ಪಟ್ಟಿನಿಂದ ನಿರ್ಮಿಸಿದ ತಡೆಗೋಡೆ ಕೂಡ ಜಖಂಗೊಂಡಿದೆ. ಈ ಬಗ್ಗೆ ಇಲಾಖೆಗೆ ದೂರುಗಳು ಬಂದಿವೆ. ಕೂಡಲೇ ರಸ್ತೆಯ ಹೊಂಡ ಮುಚ್ಚುವುದರೊಂದಿಗೆ ಡಾಮರೀಕರಣ ಮತ್ತು ಕಬ್ಬಿಣದ ಪಟ್ಟಿಯಿಂದ ತಡೆಗೋಡೆ ನಿರ್ಮಿಸುತ್ತೇವೆ.
– ಶೇಷಪ್ಪ, ಎಇಇ, ಲೋಕೋಪಯೋಗಿ ಇಲಾಖೆ, ಹೊಸನಗರ ಉಪ ವಿಭಾಗ

– ಸತೀಶ್‌ ಆಚಾರ್‌ ಉಳ್ಳೂರು

Advertisement

Udayavani is now on Telegram. Click here to join our channel and stay updated with the latest news.

Next