ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿನ ನಿವಾಸಿಗಳು ಪಾಕ್ ಸರ್ಕಾರದ ವಿರುದ್ಧ ಭಾರೀ ಪ್ರತಿಭಟನೆಯಲ್ಲಿ ತೊಡಗಿದ್ದು, ಪ್ರತಿಭಟನಾಕಾರರನ್ನು ಪೊಲೀಸರು ಬಲವಂತವಾಗಿ ಹತ್ತಿಕ್ಕುತ್ತಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:Char Dham ಯಾತ್ರೆ…ಯಮುನೋತ್ರಿ ಸಮೀಪ ಭಕ್ತರ ನೂಕುನುಗ್ಗಲು-ವಿಡಿಯೋ ವೈರಲ್
ವರದಿಯ ಪ್ರಕಾರ, ಭಾರೀ ತೆರಿಗೆ, ಹಣದುಬ್ಬರ ಹಾಗೂ ವಿದ್ಯುತ್ ಕೊರತೆ ವಿರುದ್ಧ ಜನರು ದಂಗೆ ಎದ್ದಿದ್ದು, ಪಾಕ್ ಅಧಿಕಾರಿಗಳು ಜನರ ಮೇಲೆ ದಾಳಿ ನಡೆಸುತ್ತಿರುವುದಾಗಿ ವಿವರಿಸಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪ್ರತಿಭಟನೆ ನಿರಂತರವಾಗಿ ನಡೆಯುತ್ತಿದ್ದು, ಸ್ಥಳೀಯ ಪೊಲೀಸರು ಅಶ್ರುವಾಯು ದಾಳಿ, ಗಾಳಿಯಲ್ಲಿ ಗುಂಡು ಹಾರಿಸಿ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿರುವುದಾಗಿ ವರದಿ ಹೇಳಿದೆ.
ಅರೆಸೇನಾಪಡೆ ಮತ್ತು ಪೊಲೀಸರ ದಾಳಿಯಲ್ಲಿ ಇಬ್ಬರು ಪ್ರತಿಭಟನಾಕಾರರು ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ. ಪ್ರತಿಭಟನಾ ಮೆರವಣಿಗೆ ಶಾಂತಿಯುತವಾಗಿ ನಡೆಯುತ್ತಿದ್ದ ವೇಳೆ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ ಪರಿಣಾಮ ಘರ್ಷಣೆಗೆ ಕಾರಣವಾಗಿತ್ತು.
ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿನ ವಿದ್ಯುತ್ ಅನ್ನು ಪಾಕಿಸ್ತಾನದ ನಗರಗಳಿಗೆ ನೀಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಆರ್ಥಿಕವಾಗಿ ದಿವಾಳಿಯಾಗಿರುವ ಪಾಕಿಸ್ತಾನ ವಿಶ್ವಬ್ಯಾಂಕ್ ನೆರವಿಗಾಗಿ ಅಂಗಲಾಚುತ್ತಿದೆ ಎಂದು ವರದಿ ತಿಳಿಸಿದೆ.