ಮೈಸೂರು: ಮೈಸೂರು ನಗರ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ರಾಜಿ ಸಂದಾನದ ಮೂಲಕ ಬಗೆಹರಿಸಲು ನ.12ರಂದು ವರ್ಷದ ಕೊನೆಯ ಹಾಗೂ ಬೃಹತ್ ಲೋಕ ಅದಾಲತ್ ಆಯೋಜಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಎಂ.ಎಲ್.ರಘುನಾಥ್ ಹೇಳಿದರು.
ನಗರದ ಮಳಲವಾಡಿಯಲ್ಲಿರುವ ನ್ಯಾಯಾಲಯದ ಸಭಾಂಗಣದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ ಒಟ್ಟು 1,12,443 ಪ್ರಕರಣಗಳು ವಿಚಾರಣೆಗೆ ಬಾಕಿಯಿದ್ದು, ಈ ಪೈಕಿ 59,555 ಸಿವಿಲ್ ಪ್ರಕರಣಗಳು ಹಾಗೂ 52,888 ಕ್ರಿಮಿನಲ್ ಪ್ರಕರಣಗಳಾಗಿವೆ. ಇವುಗಳಲ್ಲಿ 38,752 ಪ್ರಕರಣಗಳು ಇತ್ಯರ್ಥವಾಗುವ ಸಾಧ್ಯತೆಯಿದೆ. ಹಾಗೆಯೇ 15,852 ಪ್ರಕರಣಗಳು ರಾಜಿ ಆಗುವ ಸಾಧ್ಯತೆ ಇದೆ ಎಂದು ಗುರುತಿಸಲಾಗಿದೆ ಎಂದರು.
ರಾಜಿಯಾಗಬಲ್ಲ ಪ್ರಕರಣಗಳು: ಮೋಟಾರು ವಾಹನ ಅಪಘಾತಕ್ಕೆ ಸಂಬಂಧಿಸಿದ 3954 ಪ್ರಕರಣಗಳು, ರಾಜಿಯಾಗಬಹುದಾದ 2533 ಕ್ರಿಮಿನಲ್ ಪ್ರಕರಣಗಳು, 22,649 ಚೆಕ್ ಬೌನ್ಸ್ ಪ್ರಕರಣಗಳಿದ್ದು, ಇದರಲ್ಲಿ 4418 ಪ್ರಕರಣಗಳು ಹಾಗೂ 742 ನ್ಯಾಯಾಲಯಗಳಲ್ಲಿ ದಾಖಲಾಗದೇ ಇರುವ ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿದಂತೆ ಒಟ್ಟು 11,647 ಪ್ರಕರಣಗಳನ್ನು ರಾಜಿಯಾಗಬಲ್ಲ ಪ್ರಕರಣಗಳೆಂದು ಗುರುತಿಸಲಾಗಿದೆ. ಮುಡಾ ಭೂ ಸ್ವಾದೀನಕ್ಕೆ ಸಂಬಂಧಿಸಿದ 250 ಪ್ರಕರಣಗಳಿದ್ದು, ಮುಡಾ ಆಯುಕ್ತರು ಪರಿಹಾರ ನೀಡಲು ಸಿದ್ಧರಿದ್ದಾರೆ. 20 ಲಕ್ಷದೊಳಗೆ ಭೂ ಪರಿಹಾರ ನೀಡಬಹುದಾದ ಪ್ರಕರಣ ಗಳನ್ನು ಇತ್ಯರ್ಥಪಡಿಸಲು ಸರ್ಕಾರ ಸೂಚಿಸಿದ್ದು, ಅಂತಹ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗುವುದು ಎಂದು ವಿವರಿಸಿದರು.
ಕಳೆದ ಮೂರು ಅದಾಲತ್‌ಗಳಲ್ಲಿ ಹೆಚ್ಚಿನ ಪ್ರಕರಣ ಗಳನ್ನು ಇತ್ಯರ್ಥಗೊಳಿಸಲಾಗಿದೆ. ಮಾರ್ಚ್‌ನಲ್ಲಿ 54,893, ಜೂನ್‌ನಲ್ಲಿ 75562, ಅಗಸ್ಟ್ ನಲ್ಲಿ 57548 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದ್ದು, ಈ ಬಾರಿ 50 ಸಾವಿರಕ್ಕೂ ಹೆಚ್ಚು ಪ್ರಕರಣ ಇತ್ಯರ್ಥಗೊಳಿಸುವ ಗುರಿ ಇದೆ. ವಿವಿಧ ಇಲಾಖೆಗಳ ಅಧಿಕಾರಿ ಗಳು ಅದಾಲತ್‌ಗೆ ಕೈಜೋಡಿಸಿದ್ದಾರೆ ಎಂದರು.
ಶೇ.100ರಷ್ಟು ಶುಲ್ಕ ವಾಪಸ್: ಲೋಕ ಅದಾಲತ್ ನಿಂದ ವ್ಯಾಜ್ಯವನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ, ಶೀಘ್ರವಾಗಿ ಪರಿಹರಿಸಿಕೊಳ್ಳಬಹುದು. ಇಲ್ಲಿ ರಾಜಿಯಾದ ಪ್ರಕರಣಗಳಲ್ಲಿ ಮಾಡಿದ ಆದೇಶಕ್ಕೆ ನ್ಯಾಯಾಲಯದಲ್ಲಿ ಇತ್ಯರ್ಥ ಪಡಿಸುವ ಪ್ರಕರಣದಲ್ಲಿ ನೀಡಿದ ಆದೇಶದಷ್ಟೇ ಮಹತ್ವ ಇರುತ್ತದೆ. ಸಮಯ ಉಳಿಯುವ ಜತೆಗೆ ಕಕ್ಷಿದಾರರ ಮಧ್ಯದ ಸಂಬಂಧ ಚೆನ್ನಾಗಿ ಉಳಿಯುತ್ತದೆ. ಯಾವುದೇ ಕೋರ್ಟ್ ಫಿಸ್ ಕಟ್ಟಬೇಕಿಲ್ಲ. ಪಕ್ಷಗಾರರು ನೇರವಾಗಿ ಭಾಗವಹಿಸ ಬಹುದು. ಪ್ರಕರಣ ರಾಜಿಯಾದಲ್ಲಿ ಶೇ.100ರಷ್ಟು ನ್ಯಾಯಾಲಯ ಶುಲ್ಕ ಹಿಂದಿರುಗಿಸ ಲಾಗುವುದು. ಲೋಕ ಅದಾಲತ್ ಆವಾರ್ಡ್ (ಆದೇಶ) ವಿರುದ್ಧ ಮೇಲ್ಮನವಿಗೆ ಅವಕಾಶವಿರುವುದಿಲ್ಲ ಎಂದು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದೇವರಾಜ ಭೂತೆ, ವಕೀಲರ ಸಂಘದ ಕಾರ್ಯದರ್ಶಿ ಎಸ್.ಉಮೇಶ್ ಇತರರು ಇದ್ದರು.
ಲೋಕ ಅದಾಲತ್‌ಗೆ ವಕೀಲರ ಸಂಘದ ಸಂಪೂರ್ಣ ಬೆಂಬಲವಿದೆ. ಹೊಸ ಪ್ರಕರಣಗಳೊಂದಿಗೆ ಹಳೆಯ ಪ್ರಕರಣಗಳನ್ನೂ ಇತ್ಯರ್ಥಗೊಳಿಸುವಂತೆ ಮನವಿ ಮಾಡಲಾಗಿದೆ. ಅದಾಲತ್‌ನಲ್ಲಿ
ಹೆಚ್ಚು ಪ್ರಕರಣಗಳನ್ನು ಇತ್ಯರ್ಥಗೊಳಿಸುವುದರಿಂದ ಹೊಸ ನ್ಯಾಯಾಲಯ ಗಳ ಸ್ಥಾಪನೆಯಾಗುವುದಿಲ್ಲ. ಜತೆಗೆ ಸಾರ್ವಜನಿಕರು ಕೋರ್ಟ್‌ಗೆ ಅಲೆಯುವುದು ತಪ್ಪುತ್ತದೆ. ಹೀಗಾಗಿ ಸಾರ್ವಜನಿಕರು ಅದಾಲತ್
ಸದುಪಯೋಗ ಪಡೆದುಕೊಳ್ಳಬೇಕು.
– ಎಂ. ಮಹದೇವಸ್ವಾಮಿ, ವಕೀಲರ ಸಂಘದ ಅಧ್ಯಕ್ಷ