ಸವದತ್ತಿ: ತಾಲೂಕು ಆಡಳಿತ, ತಾಲೂಕು ಪಂಚಾಯತ್, ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಆಸ್ಪತ್ರೆ, ಇಂಚಲದ ಶಿವಯೋಗೇಶ್ವರ ಆಯುರ್ವೇದ ಮೆಡಿಕಲ್ ಕಾಲೇಜು, ಧಾರವಾಡ ಎಸ್.ಡಿ.ಎಮ್ ನಾರಾಯಣ ಹಾರ್ಟ ಸೆಂಟರ್ ಆಶ್ರಯದಲ್ಲಿ ತಾಲೂಕಾಸ್ಪತ್ರೆಯಲ್ಲಿ ಏ.30 ರಂದು ಜರುಗಲಿರುವ ಬೃಹತ್ ಉಚಿತ ಆರೋಗ್ಯ ತಪಾಸಣಾ ಮೇಳ ಕುರಿತು ಮಂಗಳವಾರ ಪೂರ್ವಭಾವಿ ಸಭೆ ನಡೆಯಿತು.
ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಮಾತನಾಡಿ, ಎಲ್ಲ ಇಲಾಖೆಗಳ ಸಹಕಾರದೊಂದಿಗೆ ತಾಲೂಕಾ ಮಟ್ಟದ ಬೃಹತ್ ಉಚಿತ ಆರೋಗ್ಯ ತಪಾಸಣಾ ಮೇಳ ಜರುಗಲಿದೆ.
ಇದರಲ್ಲಿ ಹೃದಯ, ಕ್ಯಾನ್ಸರ್, ನೇತ್ರ, ಮನೋರೋಗ ಸೇರಿ ಎಲ್ಲ ರೋಗಗಳ ತಪಾಸಣೆಗಳನ್ನು ನುರಿತ ತಜ್ಞರಿಂದ ನಡೆಸಲಾಗುವದು. ಆಯುಷ್ಮಾನ್ ಭಾರತ, ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಆರೋಗ್ಯ ಕಾರ್ಡ ವಿತರಿಸುತ್ತಿದ್ದು, ಬಿಪಿಎಲ್‌ಗೆ 5 ಲಕ್ಷ ರೂ.ವರೆಗೂ ಉಚಿತ ಚಿಕಿತ್ಸೆ ದೊರೆಯಲಿದೆ. ಜೊತೆಗೆ ಎಪಿಎಲ್ ಕುಟುಂಬಗಳಿಗೆ ಸರಕಾರಿ ಪ್ಯಾಕೇಜ ದರದ ಶೇ. 30 ರಷ್ಟು ವೆಚ್ಚ ಲಭ್ಯವಿದೆ. ಇ-ಸಂಜೀವಿನಿ ಮೂಲಕ ವೈದ್ಯರ ಜೊತೆ ಸಂಪರ್ಕಿಸುವ ಸೌಲಭ್ಯವಿರಲಿದೆ. ಕ್ಷೇತ್ರದ ಜನತೆ ಆರೋಗ್ಯ ಮೇಳದ ಸದುಪಯೋಗ ಪಡೆದು ಉತ್ತಮ ಆರೋಗ್ಯದಿಂದಿರಲು ತಿಳಿಸಿದರು.
ಈ ವೇಳೆ ಇಓ ಯಶವಂತಕುಮಾರ, ತಹಶೀಲ್ದಾರ್ ಪ್ರಶಾಂತ ಪಾಟೀಲ, ವೈದ್ಯಾಧಿಕಾರಿ ಮಹೇಶ ಚಿತ್ತರಗಿ, ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ| ಮಲ್ಲನಗೌಡರ, ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು, ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಇದ್ದರು.