ಒಂದೂರಲ್ಲಿ ಸುರೇಶ ಮತ್ತು ರಮೇಶ ಎಂಬ ಇಬ್ಬರು ಗೆಳೆಯರಿದ್ದರು. ದೋಣಿಯಲ್ಲಿ ಸಮುದ್ರಕ್ಕಿಳಿದು ಮೀನು ಹಿಡಿಯುವ ಕಾಯಕ ಅವರದಾಗಿತ್ತು. ಒಂದು ರಾತ್ರಿ ಮೀನು ಹಿಡಿಯಲೆಂದು ಕಡಲಿಗಿಳಿದರು. ದೋಣಿ, ಸಮುದ್ರದಲ್ಲಿ ತುಂಬಾ ದೂರ ಬಂದಾಗ ಸಮುದ್ರದ ಮಧ್ಯೆ ಇದ್ದಕ್ಕಿದ್ದಂತೆ ಜೋರಾಗಿ ಗಾಳಿ ಬೀಸಲು ಶುರುವಾಯಿತು. ಅವರಿಗೆ ಅದೇನು ಹೊಸತಾಗಿರಲಿಲ್ಲ. ಇದಕ್ಕೆ ಮುಂಚೆಯೂ ಅನೇಕ ಸಲ ಗಾಳಿಯ ಮಧ್ಯೆಯೂ ಮೀನು ಹಿಡಿದಿದ್ದರು. ಅದೇ ರೀತಿ ಈ ಬಾರಿಯೂ ಗಾಳಿ ತಗ್ಗುತ್ತದೆ ಎಂದುಕೊಂಡು ಹುಟ್ಟು ಹಾಕುತ್ತಾ ಮುಂದಕ್ಕೆ ಸಾಗಿದರು. ಆದರೆ ಈ ಬಾರಿ ಅವರ ಅದೃಷ್ಟ ಕೈ ಕೊಟ್ಟಿತ್ತು. ಗಾಳಿಯ ವೇಗ ತಗ್ಗಲೇ ಇಲ್ಲ.
ಗಾಳಿಯ ವೇಗ ರಭಸವಾಗುತ್ತಾ ಹೋದಂತೆ ಸಮುದ್ರದಲ್ಲಿ ಅಲೆಗಳ ರುದ್ರನರ್ತನವೂ ಹೆಚ್ಚತೊಡಗಿತು. ಅಲೆಗಳ ಹೊಯ್ದಾಟಕ್ಕೆ ದೋಣಿ ಓಲಾಡತೊಡಗಿತು. ಆಗ ಭಯ ಅವರನ್ನು ಆವರಿಸಿತು. ಇನ್ನೂ ಮುಂದಕ್ಕೆ ಹೋದರೆ ಪ್ರಾಣ ಅಪಾಯದಲ್ಲಿ ಸಿಲುಕುವುದು ಖಚಿತವೆನ್ನುವುದನ್ನು ಮನಗಂಡ ಅವರು ಜಾಗೃತಗೊಂಡರು. ತಮ್ಮ ಜೀವ ಉಳಿಯಬೇಕಾದರೆ ಮರಳಿ ಹಿಂದಕ್ಕೆ ಹೋಗುವುದೊಂದೇ ದಾರಿ ಎಂದು ಗೊತ್ತಾಯ್ತು. ಇದ್ದ ಬದ್ದ ಶಕ್ತಿಯನ್ನು ಉಪಯೋಗಿಸಿಕೊಂಡು ಬೇಗನೆ ತೀರ ತಲುಪಲು ಜೋರಾಗಿ ಹುಟ್ಟು ಹಾಕಿದರು. ಆದರೆ ಅಷ್ಟೊತ್ತಿಗೆ ಪರಿಸ್ಥಿತಿ ಕೈ ಮೀರಿ ಹೋಗಿತ್ತು.
ಸಮುದ್ರದಲ್ಲಿ ಎದ್ದ ರಕ್ಕಸ ಅಲೆಗಳಿಗೆ ಸಿಲುಕಿ ಅವರಿದ್ದ ದೋಣಿ ಮಗುಚಿ ಬಿತ್ತು. ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಅವರು ಸಮುದ್ರದ ಮಧ್ಯೆ ಭೀಕರ ಪ್ರವಾಹದಲ್ಲಿ ಸಿಕ್ಕಿಕೊಂಡರು. ಈಜು ಚೆನ್ನಾಗಿ ಬಲ್ಲವರಿಗೂ ಪ್ರವಾಹದ ವಿರುದ್ದ ಹೋರಾಡಿ ಗೆಲ್ಲುವುದು ಅಸಾಧ್ಯವೆಂದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಆದರೂ ಶಕ್ತಿ ಮೀರಿ ಪ್ರವಾಹದ ವಿರುದ್ದ ಈಜಲು ಪ್ರಯತ್ನಿಸತೊಡಗಿದರು. ಎಷ್ಟೇ ಪ್ರಯತ್ನಪಟ್ಟರೂ ಪ್ರವಾಹದಿಂದ ಪಾರಾಗುವ ದಾರಿ ಅವರಿಗೆ ತೋಚಲಿಲ್ಲ. ಈಜಿ ಈಜಿ ಅವರ ಕೈ ಕಾಲುಗಳು ಸೋಲತೊಡಗಿದವು.
ಅದೃಷ್ಟವಶಾತ್ ಅದೇ ಸಮಯಕ್ಕೆ ಸ್ವಲ್ಪ ದೂರದಲ್ಲಿ ಬೃಹದಾಕಾರದ ಮರದ ದಿನ್ನೆಯೊಂದು ತೇಲಿ ಬರುವುದು ಕಂಡಿತು. ಅದರ ಆಸರೆ ಪಡೆಯಲು ಅವರಿಬ್ಬರೂ ಮುಂದಾದರು. ಅವರು ದಿನ್ನೆಯ ಬಳಿ ಹೋಗುತ್ತಿದ್ದಂತೆ ಅದು ಅಲೆಗಳ ಹೊಡೆತಕ್ಕೆ ಸಿಕ್ಕಿ ಇನ್ನಷ್ಟು ದೂರ ಹೋಗಿಬಿಡುತ್ತಿತ್ತು. ಆದರೆ ಇಬ್ಬರೂ ಧೃತಿಗೆಡದೆ ಪ್ರಯತ್ನ ಮುಂದುವರಿಸಿದರು. ಅಂತೂ ಇಂತೂ ಅವರು ಮರದ ಆಸರೆ ಪಡೆದುಕೊಳ್ಳುವಲ್ಲಿ ಸಫಲರಾದರು. ಇಬ್ಬರೂ ಅದರ ಮೇಲೆ ಹತ್ತಿ ಬಿಗಿಯಾಗಿ ಕುಳಿತರು.
ಬಿರುಗಾಳಿಯಲ್ಲಿ ರಾತ್ರಿ ಪೂರ್ತಿ ಮರದ ದಿನ್ನೆ ಮೇಲೆಯೇ ಕಳೆದರು. ಮರುದಿನ ಬಿರುಗಾಳಿ ಮಾಯವಾಗಿ ಸಮುದ್ರ ಪ್ರಶಾಂತವಾಯಿತು. ಅಷ್ಟರಲ್ಲಿ ಇತರ ಮೀನುಗಾರರು ಸುರೇಶ ಮತ್ತು ರಮೇಶ ಅವರನ್ನು ಹುಡುಕುತ್ತಾ ಅವರಿದ್ದಲ್ಲಿಗೇ ಬಂದಿದ್ದರು. ಇಬ್ಬರನ್ನೂ ರಕ್ಷಿಸಿ ತೀರಕ್ಕೆ ಕರೆತಂದರು. ಇಬ್ಬರೂ ಉಳಿಯುವುದೇ ಇಲ್ಲ ಎಂದುಕೊಂಡಿದ್ದ ಇತರೆ ಮೀನುಗಾರರು ಇಬ್ಬರೂ ಸುರಕ್ಷಿತವಾಗಿರುವುದನ್ನು ಕಂಡು ಅವರ ಧೈರ್ಯಕ್ಕೆ ಮೆಚ್ಚುಗೆ ಸೂಚಿಸಿದರು.
ಷಣ್ಮುಖ ತಾಂಡೇಲ್ ಹೊನ್ನಾವರ