Advertisement

ಇಂದಿರಾ ಕ್ಯಾಂಟೀನ್‌ ಆಹಾರಕ್ಕೆ ಭಾರಿ ಬೇಡಿಕೆ

10:24 AM Feb 06, 2019 | Team Udayavani |

ಹಾವೇರಿ: ಬಹುವಿಳಂಬವಾಗಿ ಜಿಲ್ಲಾ ಕೇಂದ್ರ ಹಾವೇರಿ ನಗರದಲ್ಲಿ ಆರಂಭವಾಗಿರುವ ಇಂದಿರಾ ಕ್ಯಾಂಟೀನ್‌ಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು ಊಟ, ಉಪಹಾರಕ್ಕಾಗಿ ಕ್ಯಾಂಟೀನ್‌ ಎದುರು ಜನ ಸರದಿ ಸಾಲಿನಲ್ಲಿ ನಿಲ್ಲುವಂತಾಗಿದೆ.

Advertisement

ನಗರದ ಮಧ್ಯವರ್ತಿ ಸ್ಥಳದಲ್ಲಿ ಕ್ಯಾಂಟೀನ್‌ ಸ್ಥಾಪಿಸಿರುವುದೇ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಲು ಪ್ರಮುಖ ಕಾರಣವಾಗಿದೆ. ಇಂದಿರಾ ಕ್ಯಾಂಟೀನ್‌ ಪಶು ಆಸ್ಪತ್ರೆಯ ಆವರಣದಲ್ಲಿದ್ದು, ಬಸ್‌ನಿಲ್ದಾಣ, ಮಾರುಕಟ್ಟೆ, ಜಿಲ್ಲಾಸ್ಪತ್ರೆ, ಕೃಷಿ ಉತ್ಪನ್ನ ಮಾರುಕಟ್ಟೆ, ಶಿವಲಿಂಗೇಶ್ವರ ಕಾಲೇಜು ಹೀಗೆ ಜನನಿಬೀಡು ಪ್ರದೇಶಗಳಿಗೆ ಹತ್ತಿರವಾಗಿದೆ. ಈ ಕಾರಣಕ್ಕಾಗಿ ಸುತ್ತಲಿನ ಜನರು ಊಟ, ಉಪಹಾರಕ್ಕಾಗಿ ಇಂದಿರಾ ಕ್ಯಾಂಟೀನ್‌ನತ್ತ ಧಾವಿಸುತ್ತಿದ್ದಾರೆ.

ಜಿಲ್ಲಾಸ್ಪತ್ರೆಗೆ ಬರುವವರು, ಕೃಷಿ ಉತ್ಪನ್ನ ಮಾರುಕಟ್ಟೆಯ ಕೂಲಿ ಕಾರ್ಮಿಕರು, ಕಾಲೇಜು ವಿದ್ಯಾರ್ಥಿಗಳು, ಹಳ್ಳಿಗಳಿಂದ ನಗರಕ್ಕೆ ಬಂದ ಜನರು ಸೇರಿದಂತೆ ತರಕಾರಿ ವ್ಯಾಪಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇಂದಿರಾ ಕ್ಯಾಂಟೀನ್‌ಗೆ ಬಂದು ರಿಯಾಯಿತಿ ದರದ ಊಟ, ಉಪಹಾರ ಸೇವನೆ ಮಾಡುತ್ತಿದ್ದಾರೆ.

ಕ್ಯಾಂಟಿನ್‌ನಲ್ಲಿ ಪ್ರತಿದಿನ ಬೆಳಗ್ಗೆ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟ ನೀಡಲಾಗುತ್ತಿದೆ. ಆದರೆ, ನಿತ್ಯ 500ಕ್ಕಿಂತ ಹೆಚ್ಚು ಜನರು ಕ್ಯಾಂಟೀನ್‌ಗೆ ಬರುತ್ತಿದ್ದು ಇನ್ನೂ ಅನೇಕರಿಗೆ ಊಟ ಸಿಗದೆ ಮರಳುವ ಸ್ಥಿತಿಯೂ ಏರ್ಪಟ್ಟಿದೆ. ಹೀಗಾಗಿ ಊಟ, ಉಪಹಾರದ ಮಿತಿ ಹೆಚ್ಚಿಸಬೇಕು ಎಂಬ ಬೇಡಿಕೆ ಜನರಿಂದ ವ್ಯಕ್ತವಾಗಿದೆ.

ಭಾರಿ ರಿಯಾಯಿತಿ ದರದಲ್ಲಿ ಅಂದರೆ ಬೆಳಗಿನ ಉಪಹಾರ 5 ರೂ., ಮಧ್ಯಾಹ್ನ ಹಾಗೂ ರಾತ್ರಿಯ ಊಟ (ಅನ್ನ-ಸಾಂಬಾರ) 10ರೂ. ದರದಲ್ಲಿ ಸಿಗುತ್ತಿರುವುದರಿಂದ ಸಹಜವಾಗಿ ಬಡಜನರಿಗೆ ಕ್ಯಾಂಟೀನ್‌ ಹೆಚ್ಚು ಆಪ್ತವಾಗುತ್ತಿದೆ.

Advertisement

ಆಹಾರದ ಮೆನು: ಇಂದಿರಾ ಕ್ಯಾಂಟಿನ್‌ನಲ್ಲಿ ವಾರದ ಏಳು ದಿನವೂ ಉಪಹಾರ, ಊಟದಲ್ಲಿ ಬದಲಾವಣೆ ಇದೆ. ಉಪಹಾರದಲ್ಲಿ ಇಡ್ಲಿ ಪ್ರತಿ ದಿನವೂ ಸಿಗಲಿದ್ದು, ಇದರ ಜೊತೆಗೆ ಪುಳಿಯೊಗರೆ, ಖಾರಾಬಾತ್‌, ರವಾ ಕಿಚಡಿ, ಚಿತ್ರಾನ್ನ, ವಾಂಗಿಬಾತ್‌ ಇರಲಿದೆ. ಇನ್ನು ಮಧ್ಯಾಹ್ನ, ರಾತ್ರಿ ಊಟ ಅನ್ನ-ಸಾಂಬಾರ್‌ ಇರಲಿದ್ದು, ಸಾರು ಪ್ರತಿದಿನ ಬದಲಾವಣೆ ಮಾಡಲಾಗುತ್ತಿದೆ. ಒಟ್ಟಾರೆ ಇಂದಿರಾ ಕ್ಯಾಂಟೀನ್‌ ಬಡವರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ.

ಕಾರ್ಮಿಕರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಸದ್ಯ ಸರ್ಕಾರದಿಂದ 500ಜನರಿಗೆ ಊಟ, ಉಪಹಾರ ನೀಡಲು ಆದೇಶವಿದೆ. ಹೀಗಾಗಿ ನಾವು ಅಷ್ಟೆ ಜನರಿಗೆ ವಿತರಿಸುತ್ತಿದ್ದೇವೆ. ಬೆಳಗಿನ ಉಪಹಾರ ಹಾಗೂ ಮಧ್ಯಾಹ್ನದ ಊಟಕ್ಕೆ ನಮಗೆ ಹೆಚ್ಚು ಬೇಡಿಕೆಯಿದೆ. ಹೀಗಾಗಿ ಸರದಿಯಲ್ಲಿ ನಿಲ್ಲಿಸಿ 500 ಜನರಿಗೆ ಕೂಪನ್‌ಗಳನ್ನು ವಿತರಿಸುವ ವ್ಯವಸ್ಥೆ ಮಾಡಿಕೊಂಡಿದ್ದೇವೆ.
•ಶೊಯಬ್‌, ಕ್ಯಾಂಟಿನ್‌ ನಿವಾರ್ಹಕ

ಇಂದಿರಾ ಕ್ಯಾಂಟೀನ್‌ ಬಂದಿದ್ದು ಬಡವರಿಗೆ ಬಹಳ ಅನುಕೂಲವಾಗಿದೆ. ಇಷ್ಟು ಕಡಿಮೆ ದರಕ್ಕೆ ಊಟ, ಉಪಹಾರ ಎಲ್ಲಿಯೂ ಸಿಗುವುದಿಲ್ಲ. ಕಾರ್ಮಿಕರಿಗೆ, ವಿದ್ಯಾರ್ಥಿಗಳು ಹಾಗೂ ಜಿಲ್ಲಾಸ್ಪತ್ರೆಗೆ ಬರುವವರಿಗೆ ಅನುಕೂಲವಾಗಿದ್ದು, ಊಟ ಹಾಗೂ ಉಪಹಾರದಲ್ಲಿ ರೊಟ್ಟಿ ಇದ್ದಿದ್ದರೆ ಚೆನ್ನಾಗಿರುತ್ತಿತ್ತು. ಈ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕು.
•ಮಂಜಪ್ಪ ಕಲ್ಲಜ್ಜನವರ, ರೈತ

ಇಂದಿರಾ ಕ್ಯಾಂಟಿನ್‌ಗೆ ಉತ್ತಮ ಸ್ಪಂದನೆ ದೊರೆತಿದೆ. ಊಟ, ಉಪಹಾರಕ್ಕೆ 500ಕ್ಕಿಂತ ಹೆಚ್ಚಿನ ಬೇಡಿಕೆಯಿದ್ದು ಬೇಡಿಕೆಗೆ ತಕ್ಕಂತೆ ಊಟ, ಉಪಹಾರದ ಸಂಖ್ಯೆ ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.
•ಡಾ| ಎಂ.ವಿ. ವೆಂಕಟೇಶ,ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next