Advertisement

ಬಳ್ಳಾರಿ ನಗರ ಕ್ಷೇತ್ರಕ್ಕೆ ಭಾರಿ ಡಿಮ್ಯಾಂಡ್‌

02:29 PM Apr 26, 2022 | Team Udayavani |

ಬಳ್ಳಾರಿ: ರಾಜ್ಯ ವಿಧಾನಸಭೆ 2023ರಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಗೆ ಇನ್ನೂ ವರ್ಷವಿದೆ. ಈಗಾಗಲೇ ಚುನಾವಣಾ ಸಿದ್ಧತೆಗೆ ಸಜ್ಜಾಗುತ್ತಿರುವ ಕಾಂಗ್ರೆಸ್‌ ಪಕ್ಷದಲ್ಲಿ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ಆಕಾಂಕ್ಷಿಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿದ್ದು, ಅದೃಷ್ಟ ಯಾರಿಗೆ ಒಲಿಯಲಿದೆ ಎಂಬುದು ಕುತೂಹಲ ಮೂಡಿಸುತ್ತಿದೆ.

Advertisement

ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ಈ ಬಾರಿ ಭಾರಿ ಬೇಡಿಕೆ ಸೃಷ್ಟಿಯಾಗುವ ಸಾಧ್ಯತೆಗಳು ಗೋಚರಿಸುತ್ತಿವೆ. ಅದರಲ್ಲೂ ಕಾಂಗ್ರೆಸ್‌ ಟಿಕೆಟ್‌ಗೆ ಮತ್ತಷ್ಟು ಡಿಮ್ಯಾಂಡ್‌ ಸೃಷ್ಟಿಯಾದರೂ ಅಚ್ಚರಿ ಪಡುವಂತಿಲ್ಲ. 2008ರಲ್ಲಿ ಹೊಸದಾಗಿ ರಚನೆಯಾಗಿದ್ದ ಬಳ್ಳಾರಿ ನಗರ ಕ್ಷೇತ್ರದಲ್ಲಿ ಕ್ಷೇತ್ರದ ಜನರು ಒಮ್ಮೆ ಬಿಜೆಪಿ, ಒಮ್ಮೆ ಕಾಂಗ್ರೆಸ್‌ಗೆ ಅವಕಾಶ ನೀಡಿದ್ದಾರೆ. ಅದರಂತೆ ಕಳೆದ 2018ರಲ್ಲಿ ಬಿಜೆಪಿಯನ್ನು ಗೆಲ್ಲಿಸಿರುವ ಕ್ಷೇತ್ರದ ಮತದಾರರು, 2023ರ ಚುನಾವಣೆಯಲ್ಲಿ ನಗರ ಕ್ಷೇತ್ರ ಸೇರಿ ಎಲ್ಲೆಡೆ ಕಾಂಗ್ರೆಸ್‌ ಅಲೆಯಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಶಾಸಕ ಜಿ.ಸೋಮಶೇಖರ ರೆಡ್ಡಿಯವರು, ಕಳೆದ ಎರಡು ವರ್ಷಗಳ ಹಿಂದೆ ಮುಸಲ್ಮಾನರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದು, ಅದರ ಪರಿಣಾಮ ಕಳೆದ ವರ್ಷ ನಡೆದ ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಂಡುಬಂದಿದೆ. ಕಾಂಗ್ರೆಸ್‌ ಸತತ ಎರಡನೇ ಬಾರಿಗೆ ಅಧಿಕಾರ ಹಿಡಿಯಲು ಕಾರಣವಾಗಿದೆ. ಹೀಗಾಗಿ ಬಳ್ಳಾರಿ ನಗರ ವಿಧಾನಸಭೆ ಕ್ಷೇತ್ರಕ್ಕೆ ಕಾಂಗ್ರೆಸ್‌ ನಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದು, ಕುತೂಹಲ ಮೂಡಿಸಿದೆ.

ಆಕಾಂಕ್ಷಿಗಳಿವರು

ಕಾಂಗ್ರೆಸ್‌ ಪಕ್ಷದಲ್ಲಿ ಕ್ಷೇತ್ರದ ಮಾಜಿ ಶಾಸಕ, ಕಳೆದ ಚುನಾವಣೆಯ ಪರಾಜಿತ ಅಭ್ಯರ್ಥಿ ಅನಿಲ್‌ಲಾಡ್‌, ರಾಜ್ಯಸಭೆ ಸದಸ್ಯ ಡಾ| ಸೈಯದ್‌ ನಾಸೀರ್‌ ಹುಸೇನ್‌, ಮಾಜಿ ಸಚಿವ ಎಂ. ದಿವಾಕರ ಬಾಬು ಪುತ್ರ ಎಂ.ಹನುಮ ಕಿಶೋರ್‌, ಯುವಮುಖಂಡರು, ಜಿಪಂ ಮಾಜಿ ಸದಸ್ಯರಾದ ನಾರಾ ಭರತ್‌ರೆಡ್ಡಿ, ಅಲ್ಲಂ ಪ್ರಶಾಂತ್‌, ಕೆಪಿಸಿಸಿ ಕಾರ್ಯದರ್ಶಿ ಜೆ.ಎಸ್‌. ಆಂಜನೇಯಲು, ಸುನೀಲ್‌ ರಾವೋರ ಅವರು ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ.

ಮಾಜಿ ಶಾಸಕ ಅನೀಲ್‌ ಲಾಡ್‌ ಕ್ಷೇತ್ರದಿಂದ ಈಗಾಗಲೇ ಮೂರು ಬಾರಿ ಸ್ಪರ್ಧಿಸಿ ಒಮ್ಮೆ ಜಯಗಳಿಸುವ ಮೂಲಕ ಕ್ಷೇತ್ರದ ಜನರಿಗೆ ಚಿರಪರಿಚಿತರಾಗಿದ್ದಾರೆ. ರಾಜ್ಯಸಭೆ ಸದಸ್ಯ ಡಾ| ಸೈಯದ್‌ ನಾಸೀರ್‌ ಹುಸೇನ್‌ ಅವರು ಕಳೆದ ಕೋವಿಡ್‌ ಸಂದರ್ಭದಲ್ಲಿ ಕ್ಷೇತ್ರ ವ್ಯಾಪ್ತಿಯ ಎಲ್ಲ ಸ್ಲಂ, ಬಡಜನರು ವಾಸಿಸುವ ಪ್ರದೇಶಗಳಲ್ಲಿ ಪ್ರತಿ ಮನೆಗೆ ಮೂರ್‍ನಾಲ್ಕು ದಿನಕ್ಕಾಗುವಷ್ಟು ತರಕಾರಿ ಕಿಟ್‌ಗಳನ್ನು ವಿತರಿಸುವುದರ ಜತೆಗೆ ಸರ್ಕಾರಿ, ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಯುವಮುಖಂಡರಾದ ನಾರಾ ಭರತ್‌ರೆಡ್ಡಿ, ಹನುಮ ಕಿಶೋರ್‌ ಅವರು ಸ್ಥಳೀಯರಾಗಿದ್ದರಿಂದ ಸದಾ ಒಂದಲ್ಲ ಒಂದು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿ ಜನರ ಬಳಿಗೆ ಹೋಗುತ್ತಿದ್ದಾರೆ. ಸುನೀಲ್‌ ರಾವೋರ ಅವರು ಇತ್ತೀಚೆಗೆ ಕೆಲವೆಡೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗೆ ಮುಂಬರುವ 2023ರ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ತಮ್ಮದೇ ಆದ ಕಸರತ್ತಿನಲ್ಲಿ ತೊಡಗಿರುವುದು ನಗರ ಕ್ಷೇತ್ರಕ್ಕೆ ಬೇಡಿಕೆ ಹೆಚ್ಚಲು ಪ್ರಮುಖ ಕಾರಣವೆನ್ನಲಾಗುತ್ತಿದೆ. ಆದರೆ ಚುನಾವಣೆಗೆ ಇನ್ನು ಒಂದು ವರ್ಷವಿದ್ದು, ರಾಜಕೀಯವಾಗಿ ಏನೇನು ಬದಲಾವಣೆಯಾಗಲಿವೆ, ಪಕ್ಷದ ವರಿಷ್ಠರ ಮನ್ನಣೆ ಯಾರಿಗೆ ಒಲಿಯಲಿದೆ. ಟಿಕೆಟ್‌ ದೊರೆಯದವರು ಪಕ್ಷ ತೊರೆದು ಪಕ್ಷಾಂತರ ಮಾಡುವರೇ ಅಥವಾ ಪಕ್ಷೇತರರಾಗಿ ಸ್ಪರ್ಧಿಸುವರೇ ಎಂಬುದನ್ನು ಕಾದು ನೋಡಬೇಕಾಗಿದೆ.

Advertisement

-ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next