Advertisement

ಅದ್ಧೂರಿ ಅರಸು ಜನ್ಮದಿನಾಚರಣೆ

10:07 AM Aug 14, 2018 | Team Udayavani |

ಕಲಬುರಗಿ: ಮಾಜಿ ಮುಖ್ಯಮಂತ್ರಿ ಹಾಗೂ ಹಿಂದುಳಿದ ವರ್ಗದ ಅಭಿವೃದ್ಧಿ ಹರಿಕಾರ ದಿ. ಡಿ. ದೇವರಾಜ ಅರಸು ಅವರ 103ನೇ ಜನ್ಮದಿನವನ್ನು ಆ. 20 ರಂದು ಜಿಲ್ಲೆಯಾದ್ಯಂತ ಅದ್ದೂರಿಯಾಗಿ ಆಚರಿಸಲು ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ಅಧ್ಯಕ್ಷತೆಯಲ್ಲಿ ನಡೆದ ಡಿ. ದೇವರಾಜ ಅರಸು ಜಯಂತ್ಯುತ್ಸವ ಸಮಿತಿಯು ಸರ್ವಾನುಮತದ ತೀರ್ಮಾನ ಕೈಗೊಂಡಿತು.

Advertisement

ಅಂದು ದೇವರಾಜ ಅರಸು ಭಾವಚಿತ್ರದ ಬೃಹತ್‌ ಮೆರವಣಿಗೆಯನ್ನು ಅಲಂಕೃತ ವಾಹನದಲ್ಲಿ ಬೆಳಗ್ಗೆ 9ಕ್ಕೆ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದಿಂದ ಪ್ರಾರಂಭಿಸಲು ಹಾಗೂ ಡಾ| ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ ಕೊನೆಗೊಳಿಸಲು ಮತ್ತು ಮೆರವಣಿಗೆಯಲ್ಲಿ ಕಲಾ ತಂಡಗಳ ವ್ಯವಸ್ಥೆ ಮಾಡಲು ಸಭೆ ನಿರ್ಣಯ ಕೈಗೊಂಡಿತು.

ದಿನಾಚರಣೆ ದಿನದಂದು ಮಧ್ಯಾಹ್ನ 11ಕ್ಕೆ ಡಾ| ಎಸ್‌.ಎಂ. ಪಂಡಿತ ರಂಗ ಮಂದಿರದಲ್ಲಿ ನಡೆಯುವ ಸಮಾರಂಭಕ್ಕೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಹಾಗೂ ಎಲ್ಲ ಚುನಾಯಿತ ಪ್ರತಿನಿಧಿಗಳನ್ನು ಮುಂಚಿತವಾಗಿ ಆಹ್ವಾನಿಸಲು ತಿಳಿಸಲಾಯಿತು. ವಸತಿ ನಿಲಯ, ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಎಸ್‌. ಎಸ್‌.ಎಲ್‌.ಸಿ., ಪಿ.ಯು.ಸಿ. ಮತ್ತು ಸ್ನಾತಕೋತ್ತರ ಪದವಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲು ತೀರ್ಮಾನಿಸಲಾಯಿತು. ವಸತಿ ನಿಲಯದಲ್ಲಿ ಪ್ರಬಂಧ, ಭಾಷಣ ಮತ್ತು ರಸಪ್ನಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲು ತಿಳಿಸಿದ ಹೆಚ್ಚುವರಿ ಜಿಲ್ಲಾ ಧಿಕಾರಿಗಳು ಸಮಾಜಕ್ಕೆ ದುಡಿದ ಮಡಿವಾಳ, ಘಿಸಾಡಿ, ಉಪ್ಪಾರ ಹಾಗೂ ಹೆಳವ ಸಮಾಜದ ಮುಖಂಡರನ್ನು ಸನ್ಮಾನಿಸಲು ತಿಳಿಸಿದರು.

ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿ ಈ ಬಾರಿ ನಗರ-ಸ್ಥಳೀಯ ಸಂಸ್ಥೆಗಳ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ. ಕಾರ್ಯಕ್ರಮವನ್ನು ಚುನಾವಣಾ ನೀತಿ ಸಂಹಿತೆಗೆ ಧಕ್ಕೆ ಬಾರದಂತೆ ಆಚರಿಸಬೇಕು. ಎಲ್ಲ ಶಾಲಾ ಕಾಲೇಜುಗಳಲ್ಲಿ ಡಿ. ದೇವರಾಜ ಅರಸು ಜಯಂತಿ ಆಚರಿಸುವಂತೆ ಸುತ್ತೋಲೆ ಹೊರಡಿಸಲಾಗುವುದು ಎಂದು ಹೇಳಿದರು.

ಅಫಜಲಪುರ: ಹಿಂದುಳಿದ ವರ್ಗಗಳ ನೇತಾರ, ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಜಯಂತಿ ನಿಮಿತ್ತ
ತಹಶೀಲ್ದಾರ್‌ ಕಚೇರಿಯಲ್ಲಿ ನಡೆದ ಸಭೆಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಬಾರದ ಹಿನ್ನೆಲೆಯಲ್ಲಿ ತಹಶೀಲ್ದಾರ್‌ ಇಸ್ಮಾಯಿಲ್‌ ಮುಲ್ಕಿಸಿಪಾಯಿ ಮೇಲಾಧಿಕಾರಿಗಳಿಗೆ ಪತ್ರ ಬರೆಯುವುದಾಗಿ ಹೇಳಿದರು.

Advertisement

ಪಟ್ಟಣದ ತಹಶೀಲ್ದಾರ್‌ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ಬಾರಿಯೂ ಎಲ್ಲ ಇಲಾಖೆಗಳ ಅಧಿಕಾರಿಗಳಿಗೆ ನೋಟಿಸ್‌ ಕಳುಹಿಸಿ ಸಭೆಗೆ ಬರುವಂತೆ ಕಡಕ್‌ ಆದೇಶ ಮಾಡಿದರೂಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಈ ಬಾರಿಯಿಂದ ಸಾರ್ವಜನಿಕ ಸಭೆಗಳು, ರಾಷ್ಟ್ರೀಯ ಹಬ್ಬದ ಸಭೆಗಳಿಗೆ
ನೋಟಿಸ್‌ ನೀಡದೇ ಸಭೆಗೆ ಬಾರದ ಅಧಿಕಾರಿಗಳ ವಿರುದ್ಧ ಮೇಲಾಕಾರಿಗಳಿಗೆ ನೋಟಿಸ್‌ ನೀಡಲಾಗುತ್ತದೆ ಎಂದು ಎಚ್ಚರಿಸಿದರು.

ಪುರಸಭೆ ಚುನಾವಣೆ ಇರುವುದರಿಂದ ಆ.20ರಂದು ಬೆಳಗ್ಗೆ 9:45ಕ್ಕೆ ಡಿ. ದೇವರಾಜ ಅರಸು ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಗುವುದಿಲ್ಲ. ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಭಾವಚಿತ್ರ ಪೂಜೆ ಮಾತ್ರ ಮಾಡಲಾಗುವುದು. ಉಳಿದಂತೆ ಎಲ್ಲ ಗ್ರಾ.ಪಂ ಕಚೇರಿಗಳು, ಶಾಲಾ ಕಾಲೇಜುಗಳಲ್ಲಿಯೂ ಭಾವಚಿತ್ರ ಪೂಜೆ ಸಲ್ಲಿಸಬೇಕು ಎಂದು
ಹೇಳಿದರು. ಕರವೇ ತಾಲೂಕು ಅಧ್ಯಕ್ಷ ರಾಜು ಉಕ್ಕಲಿ, ಜೈಕರವೇ ತಾಲೂಕು ಅಧ್ಯಕ್ಷ ಸುರೇಶ ಅವಟೆ, ಬಸವರಾಜ ಚಾಂದಕವಟೆ, ಚನ್ನಬಸು ಹಡಪದ ಹಾಗೂ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next