Advertisement

ಹುಡುಗೋಡು ಚಂದ್ರಹಾಸ ರಂಗದಲ್ಲಿ ಲೀನ

01:00 AM Mar 12, 2019 | Harsha Rao |

ಕುಂದಾಪುರ/ಬೈಂದೂರು: ಬಡಗುತಿಟ್ಟಿನ ಪ್ರಸಿದ್ಧ ಕಲಾವಿದ ಹೊನ್ನಾವರದ ಹಡಿನ ಬಾಳದ ಹುಡುಗೋಡು ಚಂದ್ರಹಾಸ ನಾಯ್ಕ (51) ರವಿವಾರ ರಾತ್ರಿ ರಂಗಸ್ಥಳದಲ್ಲೇ ಕುಸಿದು ಮೃತಪಟ್ಟಿದ್ದಾರೆ. ಅವರು
ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.

Advertisement

ಬೈಂದೂರಿನ ಎಳಜಿತ್‌ ಗ್ರಾಮದ ಜೋಗಿಜೆಡ್ಡುವಿನಲ್ಲಿ ಕಲಾಧರ ಬಳಗ ಜಲವಳ್ಳಿ ಮೇಳದ ಪ್ರದರ್ಶನದಲ್ಲಿ “ಭೀಷ್ಮ
ವಿಜಯ’ದ ಸಾಲ್ವನ ಪಾತ್ರದಲ್ಲಿ ಅತಿಥಿ ಕಲಾವಿದರಾಗಿ ಅವರು ಭಾಗವಹಿಸಿದ್ದರು. ಪ್ರಸಂಗದ ಸಂಭಾಷಣೆ ನಡೆಯುತ್ತಿರುವಾಗ ಏಕಾಏಕಿ ಕುಸಿದು ಬಿದ್ದರು. ಸಹಕಲಾವಿದರು ಅವರನ್ನು ತತ್‌ಕ್ಷಣ ಆಸ್ಪತ್ರೆ ಸಾಗಿಸಿದರೂ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. “ಅಭಿನವ ಸಾಲ್ವ’ ಎಂದೇ ಖ್ಯಾತರಾಗಿದ್ದ ಅವರು ಅದೇ ಪಾತ್ರದಲ್ಲಿ, ಇದಿರು ಪಾತ್ರ ಭೀಷ್ಮನೆದುರು ಸಂಭಾಷಿಸುತ್ತಲೇ ಅಂತ್ಯ ಕಂಡಿದ್ದಾರೆ.

ಚಂದ್ರಹಾಸ ಅವರು ಬಚ್ಚಗಾರು, ಸಾಲಿಗ್ರಾಮ, ಪೆರ್ಡೂರು ಮೇಳಗಳಲ್ಲಿ ಕಲಾವಿದರಾಗಿ ಸ್ವರ ಗಾಂಭೀರ್ಯ ವೇಷ ಹಾಗೂ ಮಾತುಗಾರಿಕೆಯಿಂದ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ನಾಯಕ ಹಾಗೂ ಪ್ರತಿನಾಯಕ ಪಾತ್ರಗಳಲ್ಲಿ ಮಿಂಚುತ್ತ ತಮ್ಮದೇ ಛಾಪು ಮೂಡಿಸಿದ್ದರು. 1986ರಿಂದ ಯಕ್ಷತಿರುಗಾಟ ಆರಂಭಿಸಿ, ಈಚೆಗೆ 4 ವರ್ಷಗಳಿಂದ ತಿರುಗಾಟ ಬಿಟ್ಟು ಅತಿಥಿ ಕಲಾವಿದರಾಗಿ ತೆರಳುವ ಜತೆಗೆ ತಮ್ಮದೇ ಆದ ತಂಡ ಕಟ್ಟಿ ಪ್ರದರ್ಶನ ನೀಡುತ್ತಿದ್ದರು. ಹಡಿನಬಾಳು ಗ್ರಾ.ಪಂ. ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದರು.

ಫೇಸ್‌ಬುಕ್‌ ಲೈವ್‌
ಎಳಜಿತ್‌ ಯಕ್ಷಗಾನಕ್ಕೆ ತಮ್ಮ ಪುತ್ರನ ಜತೆ ಬಂದಿದ್ದರು. ಚಂದ್ರಹಾಸ ಅವರ ಫೇಸ್‌ಬುಕ್‌ ಖಾತೆಯ ಮೂಲಕ ಪ್ರದರ್ಶನದ ನೇರಪ್ರಸಾರ ನೀಡಲಾಗುತ್ತಿತ್ತು. ಅದರಲ್ಲಿ ಅವರ ಜೀವನದ ಅಂತಿಮ ದೃಶ್ಯವೂ ಪ್ರಸಾರವಾಗಿದೆ.

ಕಲಾವಿದರ ದುರಂತ ಅಂತ್ಯ
ಈ ವರ್ಷ ಯಕ್ಷಗಾನ ಕಲೆಯ ಪಾಲಿಗೆ ದುಃಖಕರ. ಬಳ್ಕೂರಿನಲ್ಲಿ ನಡೆದ ದ್ವಿಚಕ್ರವಾಹನ ಅಪಘಾತದಲ್ಲಿ ಭಾಗವತ ರವಿರಾಜ ಜನ್ಸಾಲೆ, ಗುಣವಂತೆಯಲ್ಲಿ ನಡೆದ ಅಪಘಾತದಲ್ಲಿ ಕಲಾವಿದರಾದ ಹೆನ್ನಾಬೈಲು ದಿನೇಶ್‌ ಮಡಿವಾಳ, ಪ್ರಸನ್ನಆಚಾರ್‌ ಮೃತಪಟ್ಟಿದ್ದರು. ಅಸೌಖ್ಯದಿಂದ ತೆಂಕಿನ ಚೆಂಡೆವಾದಕ ಅಡೂರು ಗಣೇಶ್‌ ರಾವ್‌, ವಯೋಸಹಜವಾಗಿ ಅಗರಿ ರಘುರಾಮ ಭಾಗವತ, ಜಲವಳ್ಳಿ ವೆಂಕಟೇಶ ರಾವ್‌, ಚೆಂಡೆವಾದಕ ಶಾಂತಾರಾಮ ಭಂಡಾರಿ ನಿಧನರಾಗಿದ್ದರು.

Advertisement

ಅಂತ್ಯಕ್ರಿಯೆ
ಹೊನ್ನಾವರ:
ಚಂದ್ರಹಾಸ ನಾಯ್ಕ ಅವರ ಅಂತ್ಯಕ್ರಿಯೆ ಸೋಮವಾರ ಹೊನ್ನಾವರ ತಾಲೂಕು ಹಡಿನಬಾಳ ಪಂಚಾಯತ್‌ ವ್ಯಾಪ್ತಿಯ ಹುಡುಗೋಡಿನಲ್ಲಿ ನಡೆಯಿತು. ಅವರ ನಿವಾಸದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.  ಗಣ್ಯರು ಚಂದ್ರಹಾಸರ ಕಲಾ ಪ್ರತಿಭೆಯ ಕುರಿತು ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next