Advertisement

ಕಡೆಗೂ ಅವನನ್ನು ಸೋಲಿಸಿಬಿಟ್ಟೆ ಮಾತು ಸೋತ ಹುಡ್ಗಿಯ ಕತೆ

03:45 AM Jan 03, 2017 | |

ಪರಿಪರಿಯಾಗಿ ಕಣ್ಣ ಮುಂದೆ ನಿಂತು ಬೇಡಿಕೊಳ್ಳುತ್ತಿದ್ದ. ಬಿಡಿಸಿ ಅರ್ಥಮಾಡಿಸುವ ನೂರೊಂದು ಪ್ರಯತ್ನವ ಮಾಡಿದ್ದ. ಉಮ್ಮಳಿಸಿ ಬರುತ್ತಿದ್ದ ಕಣ್ಣೀರಿನ ನಡುವೆಯೂ ಸಮಾಧಾನದಿ ಪರಿಸ್ಥಿತಿಯ ಅವನ ಹಿಡಿತಕ್ಕೆ ತೆಗೆದುಕೊಳ್ಳಲು ಯತ್ನಿಸಿ ಸೋತಿದ್ದಅವನು ಎಂದುಕೊಂಡಿರಾ? 

Advertisement

ಇಲ್ಲ, ನಾನೇ ಅವನನ್ನು ಸೋಲಿಸಿ ಬಿಟ್ಟಿದ್ದೆ. ಕರುಣೆ ಇರಲಿ ಭಾವನೆಗಳನ್ನೂ ತುಳಿದು ಹಿಂತಿರುಗಿಯೂ ನೋಡದೆ ನಡೆದು ಬಿಟ್ಟಿದ್ದೆ. ಸತ್ತು ದಿನಗಳ ತಳ್ಳುವ ಪ್ರಯತ್ನ ನನ್ನದಾಗಿತ್ತು. ಅದು ಅವನಿಗೆ ಗೊತ್ತಿಲ್ಲ. 

ಬದುಕಿನ ಪುಟಗಳ ನಡುವೆ ಅಡಗಿರುವ ಪ್ರತಿಯೊಂದು ಪದಗಳೂ ನಮ್ಮನ್ನು ಮೀರಿ ಬೆಳೆದು ಬಿಡುತ್ತವೆ. ಅಲ್ಲಿ ಯಾವುದೇ ಅರ್ಥಗಳನ್ನೂ ಅರ್ಥೈಸುವ, ನಿಲ್ಲಿಸಿ ಮನದಟ್ಟು ಮಾಡುವ ಗೋಜಲು ಯಾವ ಶತ್ರುವಿಗೂ ಬೇಡ. ಹೃದಯ ಕಿತ್ತು ಬದಿಗಿಟ್ಟು ಹೊರ ನಡೆದು ಬಿಡುವುದು ಅದೆಂತಹ ಸಮುದ್ರದಲಿ ಮುಳುಗಿಸಿ ಬಿಡುತ್ತದೆಂದರೆ ಉಸಿರುಗಟ್ಟಿ ಸಾಯುವುದೇ ಹಿತವೆನ್ನಿಸಿಬಿಡುತ್ತದೆ. ಇವೆಲ್ಲವ ಲೆಕ್ಕಿಸದೆ ಅಂದು ಮುಂದೆ ಹೆಜ್ಜೆ ಇಟ್ಟುಬಿಟ್ಟೆ. 

ಕಾರಣ ತಿಳಿಸಿದರೆ ಮತ್ತಷ್ಟು ಬಿಡಿಸಲಾರದ ಗಂಟುಗಳೇ ಹೊರತು ಮತ್ತೇನೂ ಘಟಿಸಲಾರದು. ತಾಯಿ, ದೇವರ ಇನ್ನೊಂದು ರೂಪ ಎನ್ನುತ್ತಾರೆ. ಅಂತಹ ದೇವರೇ ಬಂದು ನನ್ನ ಒಡಲ ಕುಡಿಯ ಉಳಿಸಿಕೊಡು ನಿನ್ನ ಕೈ ಹಿಡಿದರೆ ಅವನ ಸಾವು ಖಚಿತ ಎಂದು ಸೆರಗನೊಡ್ಡಿ ಅಂಗಲಾಚಿ ಬೇಡಿದಾಗ ಸತ್ತು ಸ್ವರ್ಗದಲ್ಲಿರುವ ನನ್ನ ತಾಯಿಯೇ ನೆನಪಾದಳು. ಮತ್ತೆ ಮತ್ತೆ ಅವಳ ತುಂಬಿದ ಕಣ್ಣುಗಳು ಹಗಲು ರಾತ್ರಿ ಎನ್ನದೆ ಕಾಡತೊಡಗಿದವು. ನನ್ನಗೆ ಗೊತ್ತು ಅಮ್ಮ ಅಂದರೆ ಅವನಿಗೆ ಪ್ರಾಣಕ್ಕಿಂತ ಹೆಚ್ಚು. ಚಿಕ್ಕಂದಿನಲ್ಲೇ ಬಿಟ್ಟು ಹೋದ ಅಪ್ಪನ ನೆನಪೂ ಕೂಡ ಆಗದಂತೆ ಕಷ್ಟ ಪಟ್ಟು ಸಾಕಿದ್ದ ಅವಳನ್ನು ಧಿಕ್ಕರಿಸಿ ನನ್ನ ವರಿಸುವುದೂ ಅವನಿಗೆ ಕಷ್ಟವಾಗಿತ್ತು. ದಿನವೂ ಗೊಂದಲದಲ್ಲಿ ನೋಯುವ ಅವನ ಮನಸ್ಸಿಗೆ ಶಾಂತಿ ತರಲು ಇದ್ದ ದಾರಿ ಇದೊಂದೇ ನನಗೆ. ಕಲ್ಲು ಮುಳ್ಳುಗಳ ನಾನೇ ಹಾಸಿ ಹೊದ್ದು ಮಲಗಿದರಾಯಿತು. ಅವನು ಆ ಒಡಲು ಸುಖವಾಗಿದ್ದರೆ ಸಾಕು ಎನ್ನುವುದು ನನ್ನ ನಿರ್ಣಯ.

ಬಿಟ್ಟು ಬಂದ ನಂತರ ನನ್ನ ಜಗತ್ತು ಅಷ್ಟು ಸುಲಭವಾಗೇನೂ ಮುಂದೆ ಸಾಗಲಿಲ್ಲ. ಮನದ ಕಣಜದಿ ಅಡಗಿದ್ದ ಅವನ ಮಾತು, ನೋಟ, ನಗು, ಘಮ, ಸ್ಪರ್ಶ ಎಲ್ಲವ ಅಗುಳಿ ಹಾಕಿ ಸಮಾಧಿ ಮಾಡಿಬಿಟ್ಟೆ. ಯಾವುದೋ ಮಾಯದಲಿ ಬಿರಟೆಯ ಸಡಿಲಿಸಿ ಬರುವ ನೆನಪುಗಳ ಹೊರದಬ್ಬಲು ಪ್ರತಿಕ್ಷಣ ಕತ್ತಿ ಹಿಡಿದು ನಿಂತ ಸೈನಿಕಳಾಗುತ್ತಿದ್ದೆ. ಇದೆಲ್ಲಾ ಅವನಿಗಾಗಿ, ಆ ಹೆತ್ತು ಸಾಕಿ ಸಲುಹಿದ ಒಡಲ ನೆಮ್ಮದಿಗಾಗಿ ಎನ್ನುವುದು ಅಗಲಿಕೆಯ ಚಿತೆಯಲೂ ನನ್ನನ್ನು ಸಮಾಧಾನಿಸುತ್ತಿತ್ತು. ಬದುಕು ನಿಷ್ಕರುಣಿ ಎನ್ನುವುದು ನನಗೆ ಮಾತ್ರ ಗೊತ್ತು. ಇಲ್ಲಿ ಅವನ ಪಾಲಿಗೆ ನಾನು ಮೋಸಗಾತಿಯೇ ಆಗಿರಲಿ. ಅಗಲಿಕೆಯ ನೋವು ಮಾಯುವುದು ದ್ವೇಷದ ಕಿಡಿ ಉಕ್ಕಿದರೆ ಮಾತ್ರವಂತೆ. ಆ ಕಿಡಿ ನನ್ನನ್ನು ಅವನ ನೆನಪಿನ ಬುತ್ತಿಯಿಂತ ಕಿತ್ತೂಗೆದರಷ್ಟೇ ಸಾಕು ನನಗೆ. 

Advertisement

ವರುಷಗಳು ಉರುಳಿದರೂ ಈಗಲೂ ಅವನು ನನ್ನ ಕನಸಿನ ಅತಿಥಿ. ಅಲ್ಲಿ ಮುಗಿಯದ ಹಾದಿಯಲಿ ಮೂಕ ಪಯಣ ನಮ್ಮದು. ಬಿರುಗಾಳಿ, ಸುಡು ಬಿಸಿಲು, ಕೊರೆವ ಚಳಿ, ನಿಲ್ಲದ ಮಳೆ ಎಲ್ಲರ ವಿರುದ್ಧವೂ ನಮ್ಮ ಹೋರಾಟ. ತಾಕಿದರೂ ತಾಕದಷ್ಟು ಹತ್ತಿರ ಅವನೊಟ್ಟಿಗೆ ನಡೆಯುವುದೇ ಸುಖ. ಕಾಡುವ ಮೌನಕೆ ಮಾತನು ಹೆಣೆಯುವ, ಕಣ್ಣಂಚಿನ ನೋಟದಲಿ ನಕ್ಷತ್ರಗಳ ಕಾಣುವ, ಬಿಸಿಯುಸಿರ ಸನಿಹಕೆ ರಾಗ ತಾಳವ ಹೊಂದಿಸುವ ಕಾಯಕ ನನ್ನದು. ಇಲ್ಲಿ ನಮ್ಮಿಬ್ಬರ ಸಂಬಂಧಕೆ ಯಾವುದೇ ಹೆಸರು ಬೇಡ. ಮಧುರ ಕನಸಿನ ಮಾಯಾಲೋಕದ ಪಯಣಿಗರು ನಾವಿಬ್ಬರೇ. ಇಲ್ಲಿ ಯಾವ ಜೋತಿಷಿಯ ಲೆಕ್ಕಗಳಿಗೂ ನಮ್ಮ ನಾಳೆಗಳು ಮೀರಿದ್ದು. 

ನಿದಿರೆ ಮುಗಿದು ಮತ್ತೆ ವಾಸ್ತವ ಅಲ್ಲಿ ಅವನಿಲ್ಲ. ಕೊರಗುತ್ತಾ ಕೂರಲು ಸಾಧ್ಯವಿಲ್ಲ. ಮತ್ತೂಂದು ದಿನದ ಬದುಕಿನ ಬಂಡಿ ಸಾಗಲೇ ಬೇಕಲ್ಲ. ನೊಗವನೊತ್ತು ಮುಂದುವರೆಯಲೇ ಬೇಕು. ಮತ್ತೂಂದು ಕನಸಿನ ಪಯಣಕೆ ಪೂರ್ವ ಸಿದ್ಧತೆಯ ಮಾಡಿಕೊಳ್ಳಲೇ ಬೇಕು. ಯಾರ ಕೈಗೂ ಸಿಗದ ನಾಳೆಗಳ ಸುಳಿವ ಬೇಡವೆಂದರೂ ಬೆನ್ನಟ್ಟಿ ಹಿಡಿಯಲೇ ಬೇಕು. ಪ್ರೀತಿಗಾಗಿ… 

– ಜಮುನಾ ರಾಣಿ ಹೆಚ್‌.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next