ಶೃಂಗೇರಿ: ಕಲಾ ಜಗತ್ತಿಗೆ ಕೋವಿಡ್ ಲಾಕ್ ಡೌನ್ ನಿರ್ಬಂಧ ಹೇರಿದಾಗ ಶೃಂಗೇರಿಯ ರಂಗ ಕಲಾವಿದರು ವರ್ಚುವಲ್ ಕಾರ್ಯಕ್ರಮದ ಕಡೆ ಹೆಜ್ಜೆ ಹಾಕಿ ಯೂಟ್ಯೂಬ್ ಕಿರುಚಿತ್ರಗಳನ್ನು ನಿರ್ಮಿಸಿ ಜಗತ್ತಿನ ಗಮನ ಸೆಳೆದಿದ್ದರು.
ಮಲೆನಾಡ ಹೆಸರಾಂತ ರಂಗ ನಿರ್ದೇಶಕ ರಮೇಶ್ ಬೇಗಾರ್ ತಮ್ಮ ಶ್ರೀ ಭಾರತೀತೀರ್ಥ ಕಲ್ಚರಲ್ ಟ್ರಸ್ಟ್‌ನ ಮೂಲಕ ಸ್ಕ್ರೀನ್ ಎಂಬ ಚಾನಲ್ ಅನ್ನು ರೂಪಿಸಿ ಮಲೆನಾಡ ಶೈಲಿಯ ಕಥಾಚಿತ್ರಗಳನ್ನು ನೀಡುತ್ತಿದ್ದಾರೆ. ಈಗಾಗಲೇ ಕೊರೊನೋತ್ತರ ಬದುಕಿನ “ಶುದ್ಧ ಸಾವೇರಿ’ ಎಂಬ ಚಿತ್ರ ಈ ತಂಡಕ್ಕೆ ಅಪಾರ ಹೆಸರನ್ನು ತಂದು ಕೊಟ್ಟಿದೆ. ಇದರ ಯಶಸ್ಸಿನ ನೆಲೆಯಲ್ಲಿ ಇದೀಗ ಇದೇ ತಂಡ “ಹುಚ್ಚಿಕ್ಕಿ’ ಎಂಬ ಸಂಗೀತಮಯ ಕಿರು ಚಿತ್ರವನ್ನು ನಿರ್ಮಿಸಿ ಬಿಡುಗಡೆ ಮಾಡಿದ್ದು ಕಿರುಚಿತ್ರ ವಲಯದಲ್ಲಿ ಸದ್ದು ಮಾಡುತ್ತಿದೆ.
ಶಾರ್ಟ್ ಮೂವಿ ಟ್ರೆಂಡ್‌ನಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಅಳವಡಿಸಿದ ಅಪರೂಪದ ಪ್ರಯತ್ನ “ಹುಚ್ಚಿಕ್ಕಿ’ ಚಿತ್ರದಲ್ಲಿದೆ. 35-40 ವರ್ಷಗಳ ಹಿಂದಿನ ಮಲೆನಾಡು, ಪೋಷಾಕು ಮತ್ತು ಭಾಷೆಯನ್ನು ಅಳವಡಿಸಿದ ಕಲಾತ್ಮಕ ಪ್ರಯತ್ನವಾಗಿ ಮೂಡಿ ಬಂದಿರುವ “ಹುಚ್ಚಿಕ್ಕಿ’ಯಲ್ಲಿ ಶೃಂಗೇರಿಯ ರಂಗಕಲಾವಿದರು ಯಾವುದೇ ವೃತ್ತಿಪರರಿಗೆ ಕಡಿಮೆ ಇಲ್ಲದಂತೆ ಲೀಲಾಜಾಲವಾಗಿ ಅಭಿನಯಿಸಿದ್ದಾರೆ. ಕೌಟುಂಬಿಕ ವಿಘಟನೆಯನ್ನು ಶಾಸ್ತ್ರೀಯ ಸಂಗೀತದ ಹಿನ್ನೆಲೆಯಲ್ಲಿ ನೋಡುವ ವಿಶಿಷ್ಟವಾದ ಪ್ರಸ್ತುತಿಯಲ್ಲಿ ನಿರ್ದೇಶಕ ರಮೇಶ್ ಬೇಗಾರ್ ತಮ್ಮ ಗುರುಗಳಾದ ಗಿರೀಶ್ ಕಾಸರವಳ್ಳಿ ಅವರನ್ನು ನೆನಪಿಸುತ್ತಾರೆ.
ಶ್ರೀನಿಧಿ ಕೊಪ್ಪ ಅವರ ಸಂಗೀತ, ಶಿಶಿರ ಅವರ ಛಾಯಾಗ್ರಹಣ ಮತ್ತು ಅವಿನಾಶ್ ಸಂಕಲನ, ಗ್ರಾಮೀಣ ಪ್ರದೇಶದ ತಾಂತ್ರಿಕ ನಿಪುಣತೆಯ ಧೊÂàತಕವಾಗಿ ಕಾಣುವುದರ ಜೊತೆಗೆ ಕಲಾ ಜಗತ್ತಿನ ಗ್ರಾಮೀಣ ಆತ್ಮನಿರ್ಭರತೆಯನ್ನು ಸಂಕೇತಿಸುತ್ತದೆ. ಮಲೆನಾಡ ಪ್ರತಿಭಾವಂತ ನಟರಾದ ಬಿ.ಎಲ್. ರವಿಕುಮಾರ್, ಎಚ್. ಎಂ. ನಾಗರಾಜ ರಾವ್, ಪ್ರದೀಪ ಯಡದಾಳು, ಗುತ್ತಳಿಕೆ ಕೇಶವ, ವಿಶ್ವನಾಥ್ ಮೊದಲಾದವರು ಮಲೆನಾಡ ಸೊಬಗಿನ ಕಿರುಚಿತ್ರಕ್ಕೆ ಅಭಿನಯದ ಮೂಲಕ ಜೀವ ತುಂಬಿದ್ದಾರೆ. “ಹುಚ್ಚಿಕ್ಕಿ’ಯಾಗಿ ಕಾಣಿಸಿಕೊಂಡಿರುವ ನಾಗಶ್ರೀ ಈ ಮಾಧ್ಯಮದಲ್ಲಿ ಭರವಸೆಯ ನಟಿಯಾಗಿ ನೆಲೆ ಊರುವುದರಲ್ಲಿ ಸಂಶಯವಿಲ್ಲ. ಹುಡುಗಾಟದ ಹುಡುಗಿಯಾಗಿ, ಸೇರಿದ ಮನೆಯ ಗಾಂಭೀರ್ಯಕ್ಕೆ ನಲುಗುವ, ಕುಸಿದ ಕನಸಿನೊಂದಿಗೆ ಹುಚ್ಚಿಯಾಗುವ, ನಿರ್ಲಿಪ್ತ ಮನಸ್ಥಿತಿಯಲ್ಲಿ ಧ್ಯಾನಿಸುವ ವಿವಿಧ ಶೇಡ್‌ಗಳಲ್ಲಿ ನಾಗಶ್ರೀ ತನ್ನದೇ ಆದ ಮುಗ್ಧ ಅಭಿನಯದ ಮೂಲಕ ನೋಡುಗರ ಮನ ಸೆಳೆಯುತ್ತಾಳೆ.