ಹುಬ್ಬಳ್ಳಿ: ಅವಳಿ ನಗರದಲ್ಲಿ ಅಪರಾಧ ಚಟುವಟಿಕೆಗಳ ನಿಯಂತ್ರಿಸುವ ನಿಟ್ಟಿನಲ್ಲಿ ಮಹತ್ತರ ಪಾತ್ರ ವಹಿಸುವ ನಗರ ಅಪರಾಧ ದಳಕ್ಕೆ (ಸಿಸಿಬಿ) ಮೇಜರ್ ಸರ್ಜರಿಗೆ ಹು-ಧಾ ಮಹಾನಗರ ಆಯುಕ್ತ ಆರ್.ದಿಲೀಪ್ ಮುಂದಾಗಿದ್ದಾರೆ. ಹಲವು ವರ್ಷಗಳಿಂದ ಬೇರೂರಿ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಆರೋಪದ ಮೇರೆಗೆ ಹಲವು ಸಿಬ್ಬಂದಿಯನ್ನು ವಿವಿಧ ಠಾಣೆಗಳಿಗೆ ವರ್ಗಾಯಿಸಿ ಹೊಸ ತಂಡ ರಚಿಸಲು ಆದೇಶಿಸಿದ್ದಾರೆ.
Advertisement
ನಗರದ ಅಪರಾಧ ಕೃತ್ಯ ಹಾಗೂ ಅಕ್ರಮ ಚಟುವಟಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ನಗರ ಅಪರಾಧ ದಳ (ಸಿಸಿಬಿ) ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಇಲ್ಲಿನ ಸಿಸಿಬಿಯ ಕೆಲ ಸಿಬ್ಬಂದಿ ಮೂಲ ಕರ್ತವ್ಯ ಮರೆತು ಇಲಾಖೆಗೆ ಕಪ್ಪು ಚುಕ್ಕೆ ತರುವ ಕೆಲಸದಲ್ಲಿ ತೊಡಗಿದ್ದರು. ಅಕ್ರಮ ದಂಧೆಕೋರರಿಗೆ ಬೆಂಬಲ, ಸಮಾಜಘಾತುಕ ಶಕ್ತಿಗಳೊಂದಿಗೆ ಶಾಮೀಲು, ಇಲಾಖೆ ಗೌಪ್ಯ ಮಾಹಿತಿ ಸೋರಿಕೆ, ಬಡ್ಡಿ ವ್ಯವಹಾರ ಸೇರಿದಂತೆ ಹಲವು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ಆರೋಪಗಳು ಬಂದ ಹಿನ್ನೆಲೆಯಲ್ಲಿ ಮಹಾನಗರ ಪೊಲೀಸ್ ಆಯುಕ್ತ ಆರ್.ದಿಲೀಪ್ ಸಿಸಿಬಿಗೆ ದೊಡ್ಡ ಮಟ್ಟದ ಸರ್ಜರಿಗೆ ಆದೇಶಿಸಿದ್ದಾರೆ.
Related Articles
Advertisement
ಅಕ್ರಮ ಚಟುವಟಿಕೆಗಳ ನಡೆಸುತ್ತಿರುವವರ ಮೇಲೆ ದಾಳಿ ನಡೆಸಲು ಯೋಜನೆ ರೂಪಿಸಿದರೆ ಗೌಪ್ಯ ಮಾಹಿತಿಯನ್ನು ದಂಧೆಕೋರರಿಗೆ ಸೋರಿಕೆ ಮಾಡುತ್ತಿದ್ದರು ಎಂಬುದು ಸೇರಿದಂತೆ ಹಲವು ಆರೋಪಗಳನ್ನು ಹೊತ್ತ ಸಿಬ್ಬಂದಿಯಿಂದ ಪ್ರಾಮಾಣಿಕ ಕೆಲಸ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಕೆಲ ಅಧಿಕಾರಿಗಳು ಪೊಲೀಸ್ ಆಯುಕ್ತರ ಮುಂದೆ ಮೌಖೀಕ ದೂರು ನೀಡಿದ್ದರು. ಅಲ್ಲದೆ ನಗರದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆ ಹಾಗೂ ಅಪರಾಧ ಕೃತ್ಯಗಳನ್ನು ತಡೆಗಟ್ಟುವಲ್ಲಿ ಸಿಸಿಬಿ ಸಿಬ್ಬಂದಿ ಸಂಪೂರ್ಣ ವಿಫಲವಾಗಿದ್ದಾರೆ ಎನ್ನುವ ಕಾರಣಕ್ಕೆ ಪೊಲೀಸ್ ಆಯುಕ್ತರು ಮೇಜರ್ ಸರ್ಜರಿಗೆ ಮುಂದಾಗಲು ಕಾರಣವಾಗಿದೆ.
ಅಧಿಕಾರಿಗಳ ಅನುಕೂಲಕ್ಕಾಗಿ ತಂಡ: ಹಿಂದಿನ ಕೆಲ ಅಧಿಕಾರಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಸಿಸಿಬಿಯನ್ನು ರಚಿಸಿ ತಮಗೆ ಬೇಕಾದ ಸಿಬ್ಬಂದಿಯನ್ನು ಹಾಕಿಕೊಂಡಿದ್ದಾರೆ ಎನ್ನುವ ಬಲವಾದ ಆರೋಪ ಇಲಾಖೆಯಲ್ಲಿದೆ. ಇನ್ನೂ ಕೆಲ ಸಿಬ್ಬಂದಿ ಠಾಣಾ ವ್ಯಾಪ್ತಿಯಲ್ಲಿ ವಸೂಲಿ ಬಾಜಿ, ಕರ್ತವ್ಯದಲ್ಲಿ ನಿರ್ಲಕ್ಷ್ಯದಂತಹಪ್ರಕರಣದಲ್ಲಿ ಶಿಸ್ತು ಕ್ರಮಕ್ಕೊಳಗಾದವರು ಸಿಸಿಬಿಯಲ್ಲಿದ್ದರು. ಇಂತಹ ಸಿಬ್ಬಂದಿಯನ್ನು ಸಿಸಿಬಿಗೆ ವರ್ಗಾಯಿಸಿದ್ದು ರತ್ನಗಂಬಳಿ ಹಾಸಿದಂತಾಗಿತ್ತು. ಹಿಂದಿನ ಕೆಲ ಅಧಿಕಾರಿಗಳು ಮೌಖೀಕ ಆದೇಶದ ಮೂಲಕ ಸಿಬ್ಬಂದಿಯನ್ನು ಸಿಸಿಬಿಗೆ ಹಾಕಿಸಿಕೊಂಡಿದ್ದರು. ರಾಜಕಾರಣಿ ಹೆಸರು, ಸಂಘಟನೆಗಳ ಹೆಸರು ಹೇಳಿಕೊಂಡು ಅಧಿಕಾರಿಗಳನ್ನು ಹೆದರಿಸುವಷ್ಟರ ಮಟ್ಟಿಗೆ ಬಲಾಡ್ಯರಾಗಿ ಬೆಳೆದಿದ್ದರು. ಸಿಸಿಬಿ ಎನ್ನುವುದು ಅಧಿಕಾರಿಗಳ ಅನುಕೂಲಕ್ಕಾಗಿಯೇ ಇರುವ ತಂಡ ಎನ್ನುವುದು ಇಲಾಖೆ ಸಿಬ್ಬಂದಿಯನಾಮಾಂಕಿತವಾಗಿದೆ. ವಿಶೇಷ ದಳ ಸಮ್ಮತಿ: ನಿಯಮಾವಳಿ ಪ್ರಕಾರ ಸಿಸಿಬಿ ತಂಡದಲ್ಲಿ ಇರುವ ಸಿಬ್ಬಂದಿಯನ್ನು ನಿಯೋಜಿಸಿ ಪ್ರತ್ಯೇಕ ತಂಡವೊಂದನ್ನು ರಚಿಸಲು ಚಿಂತನೆ ನಡೆಸಲಾಗಿದೆ. ಮಹಾನಗರದ ವ್ಯಾಪ್ತಿಗೆ ಇರುವ ಸಿಬ್ಬಂದಿ ಸಾಲುವುದಿಲ್ಲ ಎನ್ನುವಕಾರಣಕ್ಕೆ ಸಿಸಿಬಿ ಮಾದರಿಯಲ್ಲಿ
ಕರ್ತವ್ಯ ನಿರ್ವಹಿಸುವ ಪ್ರತ್ಯೇಕ ತಂಡ ರಚನೆಯಾಗಲಿದೆ. ನಗರದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ನಿಯಂತ್ರಣ, ರೌಡಿಶೀಟರ್‌ಗಳ ಹತೋಟಿ ಹಾಗೂ ಅಪರಾಧಿಕ ಕೃತ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಸಿಸಿಬಿ ಹಾಗೂ ವಿಶೇಷ ತಂಡಕ್ಕೆ ಸಿಬ್ಬಂದಿಯ ನಿಯೋಜನೆಗೆ ಅಧಿಕಾರಿಗಳಿಗೆ ಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ನಗರ ವಿಶೇಷ ಶಾಖೆ (ಸಿಎಸ್‌ಬಿ)ಯಲ್ಲಿ ಹತ್ತಾರು ವರ್ಷಗಳಿಂದ ನೆಲೆಯೂರಿರುವ ಸಿಬ್ಬಂದಿಯ ಕಾರ್ಯವೈಖರಿ ಹಾಗೂ ಠಾಣಾ ವ್ಯಾಪ್ತಿಯಲ್ಲಿ ಎಸ್‌ಬಿ ಪೇದೆಗಳ ಕಾರ್ಯವೈಖರಿ ಕುರಿತು ಪೊಲೀಸ್
ಆಯುಕ್ತರು ಗಮನ ಹರಿಸಬೇಕು ಎನ್ನುವುದು ಸಿಬ್ಬಂದಿಯ ಅಭಿಪ್ರಾಯವಾಗಿದೆ.