ಹುಬ್ಬಳ್ಳಿ: ನಗರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳು ಕೈಗೊಳ್ಳಲಾಗಿದ್ದು, ರಾಜ್ಯದ ಭವಿಷ್ಯದ ನಗರವಾಗಿ ರೂಪುಗೊಳ್ಳಲಿದೆ ಎಂದು ಹು-ಧಾ ಕೇಂದ್ರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ
ಸಿಎಂ ಜಗದೀಶ ಶೆಟ್ಟರ ಹೇಳಿದರು.
ವಾರ್ಡ್ 39, 41 ಮತ್ತು 47 ಸೇರಿದಂತೆ ವಿವಿಧ ಕಡೆ ಮತಯಾಚನೆ ಮಾಡಿ ಮಾತನಾಡಿದ ಅವರು, ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ, ಜನರ ಹಿತದೃಷ್ಟಿಯಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತ ಬಂದಿದ್ದೇನೆ. ಕ್ಷೇತ್ರದಲ್ಲಿ ಹಲವು ಮೂಲಸೌಲಭ್ಯಗಳ ನೀಡಿಕೆ ನಿಟ್ಟಿನಲ್ಲಿ ಪ್ರಾಮಾಣಿಕ ಯತ್ನ ತೋರಿದ್ದೇನೆ.ಕ್ಷೇತ್ರವನ್ನು ಉತ್ತಮಗೊಳಿಸಿದ ತೃಪ್ತಿ ಇದೆ ಎಂದರು.
ನೃಪತುಂಗ ಬೆಟ್ಟವನ್ನು ಅಭಿವೃದ್ಧಿಪಡಿಸಲಾಗಿದೆ. 1994ರಲ್ಲಿ ನೃಪತುಂಗ ಬೆಟ್ಟ ಅಭಿವೃದ್ಧಿಗೆ ಮುಂದಾದಾಗ ಹಲವರು ಕುಹಕವಾಡಿದ್ದರು. ಇದನ್ನು ಸವಾಲಾಗಿ ಸ್ವೀಕರಿಸಿ ಬೆಟ್ಟದ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದೆ. ಇದೀಗ ಅದು ಪ್ರೇಕ್ಷಣೀಯ ಸ್ಥಳವಾಗಿದ್ದು, ನಗರಕ್ಕೆ ವರದಾನವಾಗಿದೆ.
ನೃಪತುಂಗ ಬೆಟ್ಟವನ್ನು ವೈಜ್ಞಾನಿಕವಾಗಿ ನಿರ್ಮಿಸಿ ಸಮಪಾತಳಿಯ ಪಾದಚಾರಿ ಮಾರ್ಗ, ವೈವಿಧ್ಯಮಯ ಉಪಕರಣಗಳು, ಕ್ರೀಡಾ ಚಟುವಟಿಕೆಗಳಿಗೆ ಪೂರಕ ವಾತಾವರಣ, ಮಕ್ಕಳು, ಮಹಿಳೆಯರು, ಪುರುಷರಿಗೆ ಅನುಕೂಲವಾಗುವಂತಹ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಬೆಟ್ಟದ ಮೇಲೆ ನಿಂತು ಬಹುತೇಕ ಹುಬ್ಬಳ್ಳಿಯನ್ನು
ವೀಕ್ಷಿಸಬಹುದಾಗಿದೆ ಎಂದರು.