ಹುಬ್ಬಳ್ಳಿ: ರಾಜ್ಯದಲ್ಲಿರುವ 2,600 ಸ್ಲಂಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಕೊಳಚೆ ನಿಮೂರ್ಲನಾ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.
ಕೊಳಚೆ ನಿರ್ಮೂಲನಾ ಮಂಡಳಿ ಅಧ್ಯಕ್ಷರಾಗಿ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ ಶಾಸಕ ಪ್ರಸಾದ ಅಬ್ಬಯ್ಯ ಮಾಧ್ಯಮದವರೊಂದಿಗೆ ಮಾತನಾಡಿ, ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ನಮ್ಮ ಮೇಲೆ ಭರವಸೆ ಇಟ್ಟು ಜವಾಬ್ದಾರಿ ನೀಡಿದ್ದು ಆ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ. ಜೊತೆಗೆ ರಾಜ್ಯದಲ್ಲಿರುವ ಸ್ಲಂಗಳ ಅಭಿವೃದ್ಧಿಗೆ ದೂರದೃಷ್ಟಿ ಇಟ್ಟುಕೊಂಡು ಕೆಲಸ ಮಾಡಲಾಗುವುದು ಎಂದರು.
ಲೋಕಸಭೆ ಚುನಾವಣೆ ಪೂರ್ವದಲ್ಲಿ ಸುಮಾರು 36 ಸಾವಿರ ಮನೆಗಳ ಹಸ್ತಾಂತರ ಕೆಲಸ ಮಾಡಲಾಗುವುದು. ಜೊತೆಗೆ ಲೋಕಸಭೆ ನಂತರ ಮತ್ತೆ 500 ಕೋಟಿಗೂ ಹೆಚ್ಚು ಹಣ ಬಿಡುಗಡೆ ಮಾಡುತ್ತೇನೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಜೊತೆಗೆ ಹಂತ ಹಂತವಾಗಿ ಎಲ್ಲ ಕೆಲಸಗಳನ್ನು ಮಾಡಲಾಗುವುದು ಎಂದರು.
ಗಬ್ಬೂರು ಬೈಪಾಸ್ ವೃತ್ತದಿಂದ ಸಾವಿರಾರು ಕಾರ್ಯಕರ್ತರು ವಿವಿಧ ವಾದ್ಯ ಮೇಳಗಳೊಂದಿಗೆ ಸ್ವಾಗತಿಸಿದರು.
ಇದೇ ಸಂದರ್ಭದಲ್ಲಿ ಪಾಲಿಕೆ ಮಾಜಿ ಸದಸ್ಯ ಮೋಹನ ಅಸುಂಡಿ ಗೆಳೆಯರು ಬಳಗದಿಂದ 150 ಕೆಜಿ ಸೇಬು ಹಣ್ಣಿನ ಮಾಲೆಯನ್ನು ಹಾಕುವ ಮೂಲಕ ಅದ್ದೂರಿ ಸ್ವಾಗತ ಮಾಡಲಾಯಿತು.