Advertisement

ಹುಬ್ಬಳ್ಳಿ: ಒಣಮೆಣಸಿನಕಾಯಿ ಮೇಳಕ್ಕೆ ಸಂತೋಷ್ ಲಾಡ್‌ ಚಾಲನೆ

05:21 PM Feb 03, 2024 | Team Udayavani |

ಹುಬ್ಬಳ್ಳಿ: ಇಲ್ಲಿನ ಮೂರುಸಾವಿರಮಠದ ಶಾಲಾ ಆವರಣದಲ್ಲಿ ಮೂರು ದಿನಗಳ ನಡೆಯಲಿರುವ ಒಣ ಮೆಣಸಿಕಾಯಿ ಮೇಳವನ್ನು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಶುಕ್ರವಾರ ಉದ್ಘಾಟಿಸಿದರು.

Advertisement

ನಂತರ ಮಾತನಾಡಿದ ಸಚಿವ ಸಂತೋಷ ಲಾಡ್‌, ಮೆಣಸಿನಕಾಯಿ ಮೇಳದಿಂದ ರೈತರಿಗೆ ಸಾಕಷ್ಟು ಅನುಕೂಲವಾಗುತ್ತಿದೆ. ರೈತರಿಗೆ ಸಮರ್ಪಕ ಬೆಲೆ, ಗ್ರಾಹಕರಿಗೆ ತಮ್ಮ ಕೈಗೆಟಕುವ ದರ ಇರುತ್ತದೆ. ರೈತರಿಗೆ ಮೆಣಸಿನ ಬೆಳೆ ಕುರಿತು ಕೃಷಿ ವಿಜ್ಞಾನಿಗಳಿಂದ ಉಪಯುಕ್ತ ಮಾಹಿತಿ ದೊರೆಯುತ್ತದೆ. ತೋಟಗಾರಿಕೆ ವಿದ್ಯಾರ್ಥಿಗಳಿಗೆ ಅನುಭವ ನೀಡಲಿದೆ ಎಂದರು. ನಂತರ ಮೇಳದಲ್ಲಿ ಪಾಲ್ಗೊಂಡ ರೈತರೊಂದಿಗೆ ಮೆಣಸಿನಕಾಯಿ ಬೆಳೆ ಕುರಿತು ಚರ್ಚಿಸಿದರು.

ಕರ್ನಾಟಕ ರಾಜ್ಯ ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಬಿ.ಆರ್‌.ಗಿರೀಶ ಮಾತನಾಡಿ, ಜನರು ಹಾಗೂ ರೈತರ ನಡುವೆ ಸಂಪರ್ಕ ಕಲ್ಪಿಸುವ ಈ ಮೇಳ ಯಶಸ್ವಿಯಾಗಿದೆ. 1.50 ಕೋಟಿ ರೂ.ನಷ್ಟು ಮೆಣಸು ಮಾರಾಟವಾಗುವ ನಿರೀಕ್ಷೆಯಿದೆ ಎಂದರು. ಕರ್ನಾಟಕ ರಾಜ್ಯ ಸಂಬಾರು ಪದಾರ್ಥಗಳ ಅಭಿವೃದ್ದಿ ಮಂಡಳಿ, ತೋಟಗಾರಿಕೆ ಇಲಾಖೆ, ಕರ್ನಾಟಕ
ವಾಣಿಜ್ಯೋದ್ಯಮ ಸಂಸ್ಥೆ, ಅಮರಶಿವ ರೈತ ಉತ್ಪನ್ನ ಸಂಘ ಸೇರಿದಂತೆ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಮೇಳ ಆಯೋಜಿಸಲಾಗಿದೆ. ಕೊಳಚೆ ನಿರ್ಮೂಲನಾ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಪ್ರಸಾದ ಅಬ್ಬಯ್ಯ, ತೋಟಗಾರಿಕೆ ಇಲಾಖೆ ಅಧಿಕಾರಿ ಯೋಗೇಶ ಕಿಲಾರಿ ಇನ್ನಿತರರಿದ್ದರು.

ಮೇಳಕ್ಕೆ ರೈತರಿಂದ ಸ್ಪಂದನೆ
ಈ ಬಾರಿ ಮಳೆಯಿಲ್ಲದ ಪರಿಣಾಮ ನಿರೀಕ್ಷೆಯಷ್ಟು ಬೆಳೆ ಇರಲಿಲ್ಲ. ಆದರೂ ಮೇಳಕ್ಕೆ ರೈತರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. 130 ಕ್ಕೂ ಮಳಿಗೆಗಳ ವ್ಯವಸ್ಥೆ ಮಾಡಲಾಗಿದ್ದು, ಕುಂದಗೋಳ, ಹುಬ್ಬಳ್ಳಿ ತಾಲೂಕಿನ ರೈತರೇ ಹೆಚ್ಚಿದ್ದಾರೆ.

ಡಬ್ಬಿ, ಕಡ್ಡಿಗೆ ಬೇಡಿಕೆ
ಮೊದಲ ದಿನ ಬಹುತೇಕರು ಬ್ಯಾಡಗಿ ಡಬ್ಬಿ-ಕಡ್ಡಿಗೆ ಹೆಚ್ಚಿನ ಒಲವು ತೋರುತ್ತಿದ್ದಾರೆ. ಇದರೊಂದಿಗೆ ದ್ಯಾವನೂರು ಡಬ್ಬಿ, ಡಿಲೆಕ್ಸ್‌, ಅಣ್ಣಿಗೇರಿ ಸ್ಥಳೀಯ ಮೆಣಸಿಗೂ ಬೇಡಿಕೆಯಿದೆ. ಸುಮಾರು 350-650 ರೂ.ವರೆಗೂ ಒಣ ಮೆಣಸು ಮಾರಾಟವಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next