Advertisement

ಹುಬ್ಬಳ್ಳಿ: ಆಧಾರ ಸೇವಾ ಕೇಂದ್ರದ ಮುಂದೆ ಜನಜಾತ್ರೆ

01:37 PM Jun 16, 2023 | Team Udayavani |

ಹುಬ್ಬಳ್ಳಿ: ರಾಜ್ಯ ಸರಕಾರ ಐದು ಗ್ಯಾರಂಟಿಗಳಿಗೆ ಒಂದಿಲ್ಲೊಂದು ರೀತಿಯಲ್ಲಿ ಆಧಾರ ಕಾರ್ಡ್‌ ಕಡ್ಡಾಯಗೊಳಿಸಿದ್ದರಿಂದ ಆಧಾರ ಕಾರ್ಡ್‌ನಲ್ಲಿ ಕೆಲ ಮಾಹಿತಿ ಸೇರ್ಪಡೆ, ಬದಲಾವಣೆ, ತಿದ್ದುಪಡಿಗಾಗಿ ಜನರು ಬರುತ್ತಿದ್ದು, ಆಧಾರ ಸೇವಾ ಕೇಂದ್ರ ಮುಂಭಾಗದಲ್ಲಿ ಜನವೋ ಜನ ಎನ್ನುವಂತಾಗಿದೆ.

Advertisement

ಆಧಾರ ಕಾರ್ಡ್‌ 10 ವರ್ಷ ಮೇಲ್ಪಟ್ಟು ಆಗಿದ್ದಲ್ಲಿ ಅಂತಹವುಗಳನ್ನು ಎಲ್ಲಿ ಬೇಕಾದರೂ ಅಪ್‌ಡೇಟ್‌ ಮಾಡಿಕೊಳ್ಳಬಹುದು ಆದರೆ ಜನರಲ್ಲಿರುವ ತಪ್ಪು ತಿಳಿವಳಿಕೆಯಿಂದ ನೂರಾರು ಜನರು ಬೆಳಿಗ್ಗೆಯಿಂದಲೇ ಆಧಾರ ಸೇವಾ ಕೇಂದ್ರದ ಮುಂದೆ ಸರದಿ ನಿಲ್ಲುತ್ತಿರುವುದು ಕಂಡು ಬರುತ್ತಿದೆ. ಜೂ.15ರೊಳಗೆ ಆಧಾರ ಕಾರ್ಡ್‌ ನವೀಕರಣ ಮಾಡಿಕೊಳ್ಳದಿದ್ದರೆ ಅದು ನಿಷ್ಕ್ರಿಯಗೊಳ್ಳುತ್ತದೆ ಎನ್ನುವ ತಪ್ಪು ಸಂದೇಶದಿಂದ ಜನರು ಗೊಂದಲಕ್ಕೆ ಬಿದ್ದು ಆಧಾರ ಸೇವಾ ಕೇಂದ್ರಗಳತ್ತ ಧಾವಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಕರ್ನಾಟಕ ಒನ್‌ ಕೇಂದ್ರದಿಂದ ಸೇವಾ ಕೇಂದ್ರಕ್ಕೆ:
ಕರ್ನಾಟಕ ಒನ್‌ ಕೇಂದ್ರದಲ್ಲೂ ಆಧಾರ ಕಾರ್ಡ್‌ ಮಾಡಲಾಗುತ್ತಿದ್ದು ಆದರೆ ಕೆಲ ಕೇಂದ್ರಗಳಲ್ಲಿ ಜನರನ್ನು ಮರಳಿ ಕಳುಹಿಸುತ್ತಿದ್ದಾರೆನ್ನುವ ಆರೋಪಗಳು ಕೇಳಿ ಬಂದಿವೆ. ನಗರದ ಗೋಕುಲ ರಸ್ತೆ ಅಕ್ಷಯ ಪಾರ್ಕ್ ನಲ್ಲಿ ಕೇಂದ್ರ, ಕೋಠಾರಿಗೇರಿ ಓಣಿ, ಸಿದ್ದೇಶ್ವರ‌ ಪಾರ್ಕ್‌ನಲ್ಲಿರುವ ಕೇಂದ್ರಗಳು ಆಧಾರ ಕಾರ್ಡ್‌ ಮಾಡಲಾಗುತ್ತಿಲ್ಲ. ಇದರಿಂದ ಜನರು ಅಲ್ಲಿಂದ ಆಧಾರ ಸೇವಾ ಕೇಂದ್ರಕ್ಕೆ ಬರುವ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಒಂದು ವಾರದಿಂದ ಡೇಟಾ ಸೆಂಟರ್‌ ನಲ್ಲಿ ಅಪಡೇಟ್‌ ಮಾಡುವ ಕಾರಣದಿಂದ ಮಧ್ಯಾಹ್ನದ ನಂತರವೇ ಆಧಾರ ಕಾರ್ಡ್‌ ಸಿಂಕ್‌ ಆರಂಭಗೊಳ್ಳುತ್ತಿರುವುದರಿಂದ ಸಮಸ್ಯೆ ಉದ್ಭವಿಸಿತ್ತು.

ಆದರೆ ಸದ್ಯ ಮೂರು ಕೇಂದ್ರಗಳಲ್ಲಿ ಆಧಾರ ಕಾರ್ಡ್‌ ಮಾಡಲಾಗುತ್ತಿಲ್ಲ. ಪ್ರತಿ ಕರ್ನಾಟಕ ಒನ್‌ ಕೇಂದ್ರದಲ್ಲೂ ಆಧಾರ ಕಾರ್ಡ್‌ ಜತೆಗೆ ಇನ್ನಿತರೆ ಸೇವೆ ನೀಡುತ್ತಿದ್ದು, ಪ್ರತಿದಿನ ಸುಮಾರು 50ಕ್ಕೂ ಹೆಚ್ಚು ಆಧಾರ ಕಾರ್ಡ್‌ ಮಾಡಲಾಗುತ್ತಿದೆ.ಜತೆಗೆ ಆಗಮಿಸುವ ಜನರಿಗೆ ಟೋಕನ್‌ ನೀಡಿ ಅವರನ್ನು ಬರಲು ತಿಳಿಸಲಾಗುತ್ತಿದೆ. ಚಿಟಗುಪ್ಪಿ ಪಾರ್ಕ್‌ನಲ್ಲಿರುವ ಆಧಾರ ಸೇವಾ ಕೇಂದ್ರದಲ್ಲಿ ಒಂದು ದಿನಕ್ಕೆ ಸುಮಾರು 250 ರಿಂದ 300 ಆಧಾರ ಕಾರ್ಡ್‌ ಮಾಡಬಹುದು ಆದರೆ ಒಂದೇ ಬಾರಿಗೆ ಸಾವಿರಾರು ಜನರು ಬಂದರೆ
ತೊಂದರೆಯಾಗುತ್ತಿದೆ.

ಚಿಟಗುಪ್ಪಿ ಪಾರ್ಕ್‌ನಲ್ಲಿರುವ ಆಧಾರ ಸೇವಾ ಕೇಂದ್ರದಲ್ಲಿ ಜೂ.20ರವರೆಗೆ ಜನರಿಗೆ ಟೋಕನ್‌ ನೀಡಲಾಗಿದೆ. ಪ್ರತಿದಿನ
ಸಾವಿರಾರು ಜನರು ಆಗಮಿಸುತ್ತಿದ್ದಾರೆ. ಇರುವ ಆರು ಕೌಂಟರ್‌ಗಳಲ್ಲಿ ಎಲ್ಲರನ್ನೂ ಸಂಬಾಳಿಸುವುದು ಕಷ್ಟವಾಗಿದೆ. ಹಂತವಾಗಿ ಆಧಾರ ಕಾರ್ಡ್‌ ಮಾಡಿಕೊಡಲಾಗುತ್ತಿದೆ. ಅದಕ್ಕಾಗಿ ಜನರು ಸಹ ಸಹಕಾರ ನೀಡಬೇಕು.
ಲೋಹಿತ್‌ ಎಂ.,
ಆಧಾರ ಸೇವಾ ಕೇಂದ್ರದ ಮುಖ್ಯಸ್ಥ

Advertisement

ಕರ್ನಾಟಕ ಒನ್‌ ಕೇಂದ್ರದಲ್ಲಿ ಆಧಾರ ಕಾರ್ಡ್‌ ಮಾಡಲಾಗುತ್ತಿದ್ದು ಪ್ರತಿದಿನ ಒಂದೊಂದು ಕೇಂದ್ರದಲ್ಲಿ ಸುಮಾರು 50 ರಿಂದ 80 ಜನರವರೆಗೆ ಆಧಾರ ಕಾರ್ಡ್‌ ಮಾಡಲಾಗುತ್ತಿದೆ. ಕೆಲ ಕೇಂದ್ರಗಳಲ್ಲಿ ತಾಂತ್ರಿಕ ಕಾರಣದಿಂದ ಆಧಾರ ಕೇಂದ್ರ ಸ್ಥಗಿತಗೊಂಡಿವೆ. ಆದರೆ ಐಟಿ ಪಾರ್ಕ್‌, ಇಂದಿರಾ ಗಾಜಿನಮನೆ ಕೇಂದ್ರಗಳು ಖಾಲಿ ಇದ್ದು ಅಲ್ಲಿ ಜನರು ಆಗಮಿಸಿ ಆಧಾರ ಕಾರ್ಡ್‌ ಮಾಡಿಸಿಕೊಳ್ಳಬಹುದು.
ಮಧುಮತಿ ಸಂದಿಮನಿ,
ಜಿಲ್ಲಾ ಸಂಯೋಜಕಿ ಕರ್ನಾಟಕ ಒನ್‌

ಬಸವರಾಜ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next