ಹುಬ್ಬಳ್ಳಿ: ಹವಾಮಾನದ ವೈಪರೀತ್ಯದಿಂದ ವೀಳ್ಯದೆಲೆ ಉತ್ಪಾದನೆ ಗಣನೀಯವಾಗಿ ಕುಸಿದಿದ್ದು, ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಬಿಸಿ ತಟ್ಟುತ್ತಿದೆ. ಈ ಭಾಗದಲ್ಲಿ ಅಂಬಾಡಿ ಹಾಗೂ ಕರಿಎಲೆ ಹೆಚ್ಚು ಬಳಕೆಯಾಗುತ್ತದೆ. ಪಕ್ಕದ ರಾಣಿಬೆನ್ನೂರ, ಸವಣೂರ, ಕಾರಡಗಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಂದ ಇಲ್ಲಿನ ಮಾರುಕಟ್ಟೆಗೆ ಆಗಮಿಸುತ್ತದೆ. ಇಲ್ಲಿಂದ ಅಕ್ಕಪಕ್ಕದ ಊರುಗಳಿಗೆ ಸರಬರಾಜು ಮಾಡಲಾಗುತ್ತದೆ.
ಹವಾಮಾನ ವೈಪರೀತ್ಯದಿಂದಾಗಿ ವೀಳ್ಯದೆಲೆ ಉತ್ಪಾದನೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲದ ಕಾರಣ ಮಾರುಕಟ್ಟೆಯಲ್ಲಿ ಎಲೆ ಕೊರತೆ ಹೆಚ್ಚಾಗಿದ್ದು, ಬರುತ್ತಿರುವ ಎಲೆಗೆ ದರ ದುಪ್ಪಟ್ಟಾಗಿದೆ.
ಚಳಿಗಾಲದ ಎಫೆಕ್ಟ್: ಮೂರು ತಿಂಗಳ ಕಾಲ ಇರುವ ಚಳಿಗಾಲದ ಹಿನ್ನೆಲೆಯಲ್ಲಿ ಎಲೆ ಬೆಳವಣಿಗೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರಿಂದ ಇಳುವರಿ ಕಡಿಮೆ ಆಗುತ್ತದೆ. ಇದರಿಂದ ಮಾರುಕಟ್ಟೆಗೆ ಆಗಮಿಸುವ ವೀಳ್ಯದೆಲೆಯ ಬೆಲೆ ಏರಿಕೆ ಕಂಡುಬರುತ್ತಲೇ ಮೂರು ತಿಂಗಳಲ್ಲಿ ನೂರು ಕರಿಎಲೆಗೆ 100-120 ರೂ. ಇದ್ದದ್ದು 150-200ರ ವರೆಗೂ ಏರಿಕೆ ಆಗುತ್ತದೆ. ಇನ್ನು ಅಂಬಾಡಿ ಎಲೆಯಲ್ಲಿ ಕೊಂಚ ಏರಿಕೆಯಷ್ಟೆ ಕಂಡು ಬರುತ್ತದೆ.
ಆವಕ ಎಷ್ಟು?: ನಗರದ ಮಹಾತ್ಮಾ ಗಾಂಧಿ ಮಾರುಕಟ್ಟೆಗೆ ವಾರದಲ್ಲಿ ಕರಿಎಲೆ ಸುಮಾರು 20 ರಿಂದ 25ಕ್ಕೂ ಹೆಚ್ಚು ಹಂಡಿಗೆ ಬರುತ್ತವೆ. ಒಂದು ಹಂಡಿಗೆಯಲ್ಲಿ ಸುಮಾರು 12,000 ಸಾವಿರಕ್ಕೂ ಹೆಚ್ಚು ಎಲೆಗಳು ಇರುತ್ತವೆ. ಶನಿವಾರ, ಮಂಗಳವಾರ, ಸೋಮವಾರ ಹಾಗೂ ಗುರುವಾರ ಒಟ್ಟು ನಾಲ್ಕು ದಿನ ವೀಳ್ಯದೆಲೆ ಆವಕವಾಗುತ್ತದೆ. ಸುಮಾರು 70 ರಿಂದ 100 ಬುಟ್ಟಿ ಅಂಬಾಡಿ ಎಲೆ ಬರುತ್ತಿದ್ದು, ಒಂದು ಬುಟ್ಟಿಯಲ್ಲಿ ಸುಮಾರು 2ರಿಂದ 2.5 ಸಾವಿರ ಇರುತ್ತವೆ.
ಕಲ್ಕತ್ತಾ ಎಲೆಗಳ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಈ ಹಿಂದೆ ನೆರೆಹಾವಳಿ ಬಂದು ಕಲ್ಕತ್ತಾ ಎಲೆ ಬೆಳೆಯುವ ಪ್ರದೇಶದಲ್ಲಿ ಎಲ್ಲವೂ ಕೊಚ್ಚಿಕೊಂಡು ಹೋಗಿತ್ತು. ಆಗ ಒಂದು ಕಲ್ಕತ್ತಾ ಎಲೆ ದರ 10ರಿಂದ 15 ರೂ. ಗೆ ಏರಿಕೆ ಆಗಿತ್ತು. ಆದರೆ, ಇದೀಗ ಒಂದು ಕಲ್ಕತ್ತಾ ಎಲೆಯ ದರ 4-5 ರೂ. ಇದೆ.
ವಾಯಿದ್ ಶೇಖ್,
ಕಲ್ಕತ್ತಾ ಎಲೆ ಸರಬರಾಜುದಾರ
ಪ್ರತಿವರ್ಷ ಚಳಿಗಾಲದಲ್ಲಿ ವೀಳ್ಯದೆಲೆ ಬೆಲೆ ಏರಿಕೆ ಸಾಮಾನ್ಯ. ಇಳುವರಿಯಲ್ಲಿ ಇಳಿಕೆ ಕಾಣುವುದರಿಂದ ಮಾರುಕಟ್ಟೆಗೆ ಆವಕ ಕಡಿಮೆ ಆಗುತ್ತದೆ. ಈ ಸಮಯದಲ್ಲಿ ಬೆಲೆ ಏರಿಕೆ ಆಗುತ್ತದೆ. ಈ ವರ್ಷ ನೂರು ಎಲೆಗೆ ಸುಮಾರು 60ರಿಂದ 80 ರೂ. ವರೆಗೆ ಬೆಲೆ ಏರಿಕೆ ಕಂಡುಬಂದಿದೆ.
ಅಸ್ಲಂ ಹುಬ್ಬಳ್ಳಿ, ವೀಳ್ಯದೆಲೆ ಮಾರಾಟಗಾರ
ಬಸವರಾಜ ಹೂಗಾರ