Advertisement

Hubli: ಸ್ಥಾನಮಾನ ಸಿಗದಿದ್ದವರಿಂದ ಪಕ್ಷ ವಿರೋಧಿ ಹೇಳಿಕೆ: ಜಿಟಿಡಿ ವಿರುದ್ದ ಜೋಶಿ ಕಿಡಿ

11:24 AM Oct 05, 2024 | Team Udayavani |

ಹುಬ್ಬಳ್ಳಿ: ಶಾಸಕ ಜಿ.ಟಿ. ದೇವೇಗೌಡ ಹೇಳಿಕೆಯಿಂದ ಬಿಜೆಪಿಗೆ ಯಾವುದೇ ಹಾನಿ ಆಗಲ್ಲ. ಇತ್ತೀಚೆಗೆ ರಾಜಕಾರಣದಲ್ಲಿ ಕೆಲವರಿಗೆ ತಮಗೆ ಬೇಕಾದ ಸ್ಥಾನಮಾನ ಸಿಗದಿದ್ದಾಗ ಸ್ವಪಕ್ಷದ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ (Prahlad Joshi) ಹರಿಹಾಯ್ದರು.

Advertisement

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿ.ಟಿ. ದೇವೇಗೌಡ ಮೊನ್ನೆ ಮೊನ್ನೆವರೆಗೆ ಸಿದ್ದರಾಮಯ್ಯ ವಿರುದ್ಧ ಮಾತನಾಡಿದ್ದರು. ಈಗ ಏಕಾಏಕಿ ಅವರ ಪರ ಮಾತನಾಡಿದ್ದಾರೆ.‌ ಈಗ ರಾಜಕಾರಣದಲ್ಲಿ ಕೆಲವರಿಗೆ ತಮಗೆ ಬೇಕಾದ ಸ್ಥಾನಮಾನ ಸಿಗದಿದ್ದಲ್ಲಿ ಸ್ವಪಕ್ಷದ ವಿರುದ್ಧ ಮಾತನಾಡುತ್ತಿದ್ದಾರೆ. ಪ್ರತಿಯೊಂದು ರಾಜಕೀಯ ಪಕ್ಷಕ್ಕೆ ಅದರದ್ದೆ ಆದ ವಿಚಾರಧಾರೆ ಇರುತ್ತದೆ. ಆದರೆ, ತಮ್ಮ ಸ್ವಂತದ ಅಧಿಕಾರದ ಸ್ಥಾನಮಾನಕ್ಕಾಗಿ ಬಡಿದಾಡಿ ಕೊಳ್ಳುವವರು ಜಾಸ್ತಿ ಆಗಿದೆ ಎಂದರು.

ಈಗ ಅಚಾನಕ್ಕಾಗಿ ಜೆಡಿಎಸ್ ಪಕ್ಷದಲ್ಲಿ ಏನು ಘಟನಾವಳಿಗಳು ಆಗಿವೆ ಎಂಬುದನ್ನು ನೋಡಬೇಕು. ಅದು ಅವರ ಪಕ್ಷದ ಆಂತರಿಕ ವಿಚಾರ. ಈಗ ರಾಜ್ಯ ಸರ್ಕಾರದ ವಿರುದ್ಧ ಮುಡಾ ಮತ್ತು ವಾಲ್ಮೀಕಿ ಹಗರಣ ಬಂದಿವೆ. ಇಂತಹ ಸಮಯದಲ್ಲಿ ಜಿ.ಟಿ. ದೇವೇಗೌಡರ ಹೇಳಿಕೆ ಸರಿಯಲ್ಲ ಎಂದರು.

ಬೇಜವಾಬ್ದಾರಿ ಹೇಳಿಕೆ ಸರಿಯಲ್ಲ: ಪಾಕಿಸ್ತಾನದ ಪ್ರಜೆಗಳು ರಾಜ್ಯದಲ್ಲಿ ನೆಲೆಸಿರುವ ಬಗ್ಗೆ ಗೃಹಮಂತ್ರಿ ಡಾ. ಜಿ. ಪರಮೇಶ್ವರ್ ಬೇಜವಾಬ್ದಾರಿಯಿಂದ ಹೇಳಿಕೆ ಕೊಡುವುದು ಸರಿಯಲ್ಲ. ಕಾಂಗ್ರೆಸ್‌ ನವರು ಅಧಿಕಾರದಲ್ಲಿದ್ದಾಗ ಎಷ್ಟು ಜನ ನುಸುಳುಕೋರರು ಭಾರತಕ್ಕೆ ಬಂದಿದ್ದರು. ಎಷ್ಟು ಭಯೋತ್ಪಾದನಾ ಚಟುವಟಿಕೆಗಳಾಗಿವೆ. ಎಲ್ಲೆಲ್ಲಿ ಬಾಂಬ್ ಬ್ಲಾಸ್ಟ್‌ಗಳಾಗಿ ಎಂಬುದನ್ನು ‌ತಿಳಿದು ಮಾತನಾಡಲಿ. ಪಾಕಿಸ್ತಾನಿ ಪ್ರಜೆಗಳು ಭಾರತದಲ್ಲಿ ಅಕ್ರಮವಾಗಿ ನೆಲೆಸಲು ಕೇಂದ್ರ ಎಜೆನ್ಸಿಗಳು ಕಾರಣ ಎಂಬ ಪರಮೇಶ್ವರ ಹೇಳಿಕೆಗೆ ಜೋಶಿಯವರು ಕಿಡಿಕಾರಿದರು.

ರಾಜ್ಯದಲ್ಲಿ ಹಲವಾರು ವರ್ಷಗಳಿಂದ ಗೃಹಮಂತ್ರಿಯಾಗಿ ಅವರು ಕೆಲಸ ಮಾಡಿದ್ದಾರೆ. ನುಸುಳುಕೋರರು ಭಾರತಕ್ಕೆ ನುಗ್ಗುವುದಕ್ಕೆ ಕಡಿವಾಣ ಹಾಕಿದ್ದೆ ಬಿಜೆಪಿ ಸರ್ಕಾರ. ಆದರೆ, ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಬೆಂಗಳೂರು, ಹೈದ್ರಾಬಾದ್, ಮುಂಬೈ, ಹುಬ್ಬಳ್ಳಿ ಸೇರಿದಂತೆ ಅನೇಕ ಕಡೆ ಬಾಂಬ್ ಬ್ಲಾಸ್ಟ್‌ಗಳಾಗಿವೆ. ಅದೆಲ್ಲವನ್ನೂ ನೆನಪು ಮಾಡಿಕೊಳ್ಳಲಿ. ಬಾಂಬ್ ಬ್ಲಾಸ್ಟ್ ಆಗಲಿಕ್ಕೆ ಕಾರಣ ನುಸುಳುಕೋರರು. ಬಿಜೆಪಿ ಸರ್ಕಾರ ಬಂದ ಮೇಲೆ ಇವಕ್ಕೆಲ್ಲ ಕಡಿವಾಣ ಬಿದ್ದಿದೆ. ಈ ವಿಷಯದಲ್ಲಿ ನಾವು ರಾಜಕಾರಣ ಮಾಡಿಲ್ಲ. ಜಿ. ಪರಮೇಶ್ವರ್ ಅವರನ್ನು ನಾವು ಸಜ್ಜನ, ದೇಶ ಮತ್ತು ರಾಜ್ಯದ ಬಗ್ಗೆ ಕಳಕಳಿ ಇರುವವರು ಎಂದು ತಿಳಿದುಕೊಂಡಿದ್ದೇವೆ‌. ರಾಹುಲ್ ಗಾಂಧಿಯಂತೆ‌ ಚಿಲ್ಲರೆಯಾಗಿ ಮಾತನಾಡುವುದನ್ನ ಬಿಡಬೇಕು ಎಂದು ಕುಟುಕಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next