ಹುಬ್ಬಳ್ಳಿ: ಇಲ್ಲಿನ ಹಳೆಯ ಕೋರ್ಟ್ ವೃತ್ತ ಬಳಿ ನಿರ್ಮಾಣ ಹಂತದ ಮೇಲ್ಸೇತುವೆ ಕಾಮಗಾರಿ ವೇಳೆ ಕಬ್ಬಿಣದ ಪೈಪ್ ಬಿದ್ದು ಎಎಸ್‌ಐ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಉಪನಗರ ಪೊಲೀಸರು ಗುತ್ತಿಗೆ ಕಂಪನಿಯ ಯೋಜನಾ ಸಂಯೋಜಕನನ್ನು ಬಂಧಿಸಿದ್ದಾರೆ. ಆ ಮೂಲಕ ಈ ಘಟನೆಯಲ್ಲಿ ಇದುವರೆಗೆ ಒಟ್ಟು 12 ಜನರನ್ನು ಬಂಧಿಸಿದಂತಾಗಿದೆ.
ಕಾಮಗಾರಿ ಗುತ್ತಿಗೆ ಪಡೆದ ಝಂಡು ಕನ್‌ಸ್ಟ್ರಕ್ಷನ್ ಕಂಪನಿಯ ಹರಿಯಾಣ ರಾಜ್ಯದ ವಿಕಾಸ ಶರ್ಮಾ ಬಂಧಿತರಾಗಿದ್ದಾರೆ.
ಸೆ. 10ರಂದು ಕರ್ತವ್ಯಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದ ಉಪನಗರ ಠಾಣೆ ಎಎಸ್‌ಐ, ಧಾರವಾಡ ಸತ್ತೂರಿನ ರಾರಾಜಿನಗರ ನಿವಾಸಿ ನಾಬಿರಾಜ ಜಯಪಾಲ ದಯಣ್ಣವರ (59) ಅವರ ತಲೆಯ ಮೇಲೆ ಕಬ್ಬಿಣದ ರಾಡ್ ಬಿದ್ದು ತೀವ್ರ ಗಾಯಗೊಂಡಿದ್ದರು. ಚಿಕಿತ್ಸೆ ಫಲಿಸದೆ ಸೆ. 15ರಂದು ಕೆಎಂಸಿಆರ್‌ಐ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಈ ಅವಘಡಕ್ಕೆ ಸಂಬಂಧಿಸಿ ಝಂಡು ಕನ್‌ಸ್ಟ್ರಕ್ಷನ್ ಕಂಪನಿಯ ಎಂಡಿ ಸೇರಿದಂತೆ 19ಕ್ಕೂ ಹೆಚ್ಚು ಜನರ ವಿರುದ್ಧ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಘಟನೆಗೆ ಸಂಬಂಧಿಸಿ ಪೊಲೀಸರು ಸೆ. 16ರಂದು ಕನ್‌ಸ್ಟ್ರಕ್ಷನ್ ಕಂಪನಿಯ ಮೂವರು ಇಂಜಿನಿಯರ್ ಸೇರಿದಂತೆ 11 ನೌಕರರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜಪಡಿಸಿದ್ದರು. ಈಗ ಮೇಲ್ಸೇತುವೆ ಕಾಮಗಾರಿಯ ಸಂಪೂರ್ಣ ಜವಾಬ್ದಾರಿ ನೋಡಿಕೊಳ್ಳುತ್ತಿದ್ದ ಕಂಪನಿಯ ಯೋಜನಾ ಸಂಯೋಜಕನನ್ನು ಶುಕ್ರವಾರ ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.