ಹುಬ್ಬಳ್ಳಿ: ತಾಪಂ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿಗಳನ್ನು ಆರಂಭಿಸಲಾಗಿದ್ದು, ಉಮಚಗಿ ಗ್ರಾಪಂ ವ್ಯಾಪ್ತಿಯಲ್ಲಿ ರೈತರ ಹೊಲದಲ್ಲಿ ಬದು ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.
ತಾಪಂ ಸಹಾಯಕ ನಿರ್ದೇಶಕ ಗಂಗಾಧರ ಕಂದಕೂರ ಮಾತನಾಡಿ, 2020-21ನೇ ಸಾಲಿಗೆ 4.60 ಲಕ್ಷ ಮಾನವ ದಿನಗಳ ಗುರಿ ನಿಗದಿ ಮಾಡಲಾಗಿದೆ. ಇದುವರೆಗೆ 11ರಿಂದ 12 ಸಾವಿರ ಮಾನವ ದಿನಗಳ ಸೃಜನೆ ಮಾಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ತಾಲೂಕಿನಾದ್ಯಂತ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಕೃಷಿ ಹೊಂಡ, ಬದು, ದನದ ಕೊಟ್ಟಿಗೆ, ಆಶ್ರಯ ಮನೆಗಳ ನಿರ್ಮಾಣಕ್ಕೆ 90 ಮಾನವ ದಿನಗಳನ್ನು ನೀಡಲಾಗುತ್ತಿದೆ. ಮುಂದಿನ ಜೂನ್ ಅಂತ್ಯದ ವೇಳೆಗೆ ಎಲ್ಲಾ ಕೃಷಿ ಹೊಂಡ, ಬದು ಹಾಗೂ ಚಕ್ ಡ್ಯಾಮ್‌ಗಳನ್ನು ಪೂರ್ಣಗೊಳಿಸಿ ಮಳೆನೀರು ಸಂಗ್ರಹಿಸಲು ಯೋಜನೆ ರೂಪಿಸಲಾಗಿದೆ ಎಂದರು.
ಕೊವೀಡ್-19 ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ಸೇರಿದಂತೆ ಇತರೆ ನಗರಗಳಿಂದ ಹಳ್ಳಿಗೆ ಬಂದಿರುವ ಜನರಿಗೆ ನರೇಗಾದಡಿ ಕೆಲಸ ನೀಡುತ್ತಿರುವುದು ವರದಾನವಾಗಿದೆ. ಈಗ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಕನಿಷ್ಠ 30ರಿಂದ 40 ಕೂಲಿ ಕಾರ್ಮಿಕರು ಸಿಗುತ್ತಿದ್ದಾರೆ. ಇನ್ನೂ ಮುಂದೆ ಇವರು ನಗರಗಳಿಗೆ ವಲಸೆ ಹೋಗದಂತೆ ಗ್ರಾಪಂ ವ್ಯಾಪ್ತಿಯಲ್ಲಿಯೇ ಕೆಲಸ ನೀಡಲಾಗುವುದು. ಪ್ರತಿ ಕಾಮಗಾರಿ ಆಗಮಿಸುವ ಕೂಲಿಕಾರರಿಗೆ ಮಾಸ್ಕ್ ವಿತರಿಸಲಾಗಿದೆ. ಹ್ಯಾಂಡ್ ಸ್ಯಾನಿಟೈಸರ್ ಒದಗಿಸಲಾಗಿದೆ. ಸಾಮಾಜಿಕ ಅಂತರದೊಂದಿಗೆ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದರು.
ಗ್ರಾಪಂ ಪಿಡಿಒ ದಾವಲ್ ಸಾಬ್ ಪಿಂಜಾರ್ ಮಾತನಾಡಿ, ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾದಡಿ ಕೆಲಸ ನೀಡಲಾಗಿದೆ. 150 ರಿಂದ 200 ಕೂಲಿಕಾರರು ಕೆಲಸ ನಿರ್ವಹಿಸುತ್ತಿದ್ದಾರೆ. ವಾರದೊಳಗಾಗಿ ಕೂಲಿ ಹಣವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದೆ. ಗ್ರಾಪಂ ವ್ಯಾಪ್ತಿಯಲ್ಲಿ 25 ರಿಂದ 30 ರೈತರ ಹೊಲದಲ್ಲಿ ಬದು ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ ಎಂದರು. ಉಮಚಗಿ ಗ್ರಾಮದ ರೈತ ಶಿವಾನಂದ ಮಾಳಪ್ಪ ಕಟಗಿ ಮಾತನಾಡಿದರು.
ನರೇಗಾದಡಿ ಕೂಲಿ ನೀಡುತ್ತಿರುವುದು ಎಲ್ಲಾ ಕಾರ್ಮಿಕರಿಗೆ ಅನುಕೂಲವಾಗಿದೆ. ಕೊರೊನಾ ಸಂದರ್ಭದಲ್ಲಿ ಜನರು ಬೇರೆ ಸ್ಥಳಗಳಿಗೆ ತೆರಳಿ ಕೆಲಸ ನಿರ್ವಹಿಸುವುದು ದುಸ್ತರವಾಗಿದೆ. ನರೇಗಾ ಕೆಲಸದಿಂದ ಮನೆ ನಿರ್ವಹಣೆ, ಔಷಧೋಪಚಾರ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಿದೆ ಎಂದು ಕಾರ್ಮಿಕ ಮಲ್ಲಿಕಾರ್ಜುನ ಹೇಳಿದರು.