Advertisement

Hubli; ಮುಡಾ ಹಗರಣ ತನಿಖೆಯನ್ನು ಸಿಬಿಐಗೆ ವಹಿಸಲಿ: ಶೆಟ್ಟರ್ ಆಗ್ರಹ

03:30 PM Jul 05, 2024 | Team Udayavani |

ಹುಬ್ಬಳ್ಳಿ: ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರು ಕೇಳಿ ಬರುತ್ತಿದೆ. ಕಾರಣ ಪ್ರಕರಣವನ್ನು ಕೂಡಲೇ ಸಿಬಿಐ ತನಿಖೆಗೆ ವಹಿಸಬೇಕು ಎಂದು‌ ಸಂಸದ, ಮಾಜಿ ಸಿಎಂ ಜಗದೀಶ ಶೆಟ್ಟರ ಆಗ್ರಹಿಸಿದರು.

Advertisement

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೇ. 50ರ ಅನುಪಾತದಲ್ಲಿ ನಿವೇಶನ ಹಂಚಿಕೆ ಮಾಡಿರುವುದಾಗಿ ಹೇಳಲಾಗುತ್ತಿದೆ. ನಿವೇಶನ ಹಂಚಿಕೆ ನಿಯಮಗಳು ಏನಿದೆ ಎನ್ನುವುದನ್ನು ಮೊದಲು ಓದಲಿ. ನಂತರ ಇದರ ಬಗ್ಗೆ ಮಾತನಾಡಲಿ ಎಂದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಇದು ನಡೆದಿದೆ. ಇದರಲ್ಲಿ ನನ್ನದೇನು ತಪ್ಪಿಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಅವರು ತಮ್ಮ ಪತ್ನಿ ಹೆಸರಲ್ಲಿ ಸೈಟ್ ತೆಗೆದುಕೊಂಡಿದ್ದಾರೆ. ಆದರೀಗ ತಪ್ಪು ಮಾಹಿತಿ ಕೊಡುವ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಅವರ ಪಾತ್ರವಿದೆ. ಹೀಗಾಗಿ ಸಿಎಂ ಸಂಪೂರ್ಣ ಜವಾಬ್ದಾರಿಯಾಗುತ್ತಾರೆ. ಕಾರಣ ಇದನ್ನು ಸಿಬಿಐಗೆ ಕೊಟ್ಟರೆ ಪರಿಪೂರ್ಣ ಸತ್ಯ ಹೊರ ಬೀಳುತ್ತದೆ ಎಂದರು.

ಜನರ ದಿಕ್ಕುತಪ್ಪಿಸಲು ಸಮನ್ಸ್ ಜಾರಿ: ಕಾಂಗ್ರೆಸ್ ಸರ್ಕಾರದ ಒಂದೊಂದೇ ಹಗರಣಗಳು ಬಯಲಿಗೆ ಬರುತ್ತಿವೆ. ಹೀಗಾಗಿ ಜನರ ದಿಕ್ಕು ತಪ್ಪಿಸಲು ರಾಜಕೀಯ ದುರುದ್ದೇಶದಿಂದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಮೇಲೆ ಪೋಕ್ಸೋ ಪ್ರಕರಣದಲ್ಲಿ ಸಮನ್ಸ್ ಜಾರಿ ಮಾಡಲಾಗಿದೆ. ಹಳೆಯ ಪ್ರಕರಣಕ್ಕೆ ಮರು ಜೀವ ಕೊಡಲಾಗುತ್ತಿದೆ.‌ ಅವರ ವಿರುದ್ಧ ರಾಜಕೀಯ ಷಡ್ಯಂತ್ರ ಮಾಡಲಾಗುತ್ತಿದೆ. ಮೊದಲು ಅವರನ್ನು ಬಂಧಿಸಲು ಪ್ರಯತ್ನಿಸಿದರು. ಈಗ ಸಮನ್ಸ್ ಜಾರಿ ಮಾಡಲಾಗಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ವಾಲ್ಮೀಕಿ ಹಗರಣ ಬಯಲಿಗೆ ಬಂತು. ಈಗ ಮುಡಾ ಹಗರಣ ಬಯಲಿಗೆ ಬಂದಿದೆ. ಇದನ್ನು ಮರೆಮಾಚಲು ಸರ್ಕಾರ ಈ ರೀತಿ ಮಾಡುತ್ತಿದೆ. ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳಲಿದೆ.‌ ಆದರೆ ರಾಜಕೀಯ ಹಿನ್ನೆಲೆ ಇಟ್ಟುಕೊಂಡು ಈ ರೀತಿ ಮಾಡಲಾಗುತ್ತಿದೆ. ಇದರಲ್ಲಿ ಯಡಿಯೂರಪ್ಪ ನಿರಪರಾಧಿ ಎಂದು ಸಾಬೀತಾಗುತ್ತಾರೆಂಬ ವಿಶ್ವಾಸ ವ್ಯಕ್ತಪಡಿಸಿದರು.

Advertisement

ರಾಹುಲ್ ಗಾಂಧಿಯಲ್ಲಿ ಇನ್ನೂ ಪ್ರಭುದ್ಧತೆ ಬಂದಿಲ್ಲ: ಸಂಸದ ರಾಹುಲ್ ಗಾಂಧಿ ಮೊದಲೇ ಅಪ್ರಭುದ್ಧ ಎನ್ನುತ್ತಿದ್ದರು. ಲೋಕಸಭೆ ವಿಪಕ್ಷ ನಾಯಕರಾದ ಮೇಲೆ ಬದಲಾಗುತ್ತಾರೆ ಅಂದುಕೊಂಡಿದ್ದೇವು. ಆದರೆ ಅದೇ ಬಾಲಿಶತನವನ್ನು ಲೋಕಸಭೆಯಲ್ಲಿ ಮುಂದುವರಿಸಿದ್ದಾರೆ. ಅವರಿನ್ನು ಅಪ್ರಬುದ್ಧತೆಯಿಂದ ಹೊರಬಂದಿಲ್ಲ ಎಂದು ಸಂಸದ ಶೆಟ್ಟರ ಕುಟುಕಿದರು.

ರಾಹುಲ್ ಸಂಸತ್ ಅಧಿವೇಶನಕ್ಕೂ ಟಿ-ಶರ್ಟ್ ಹಾಕಿ ಬಂದಿದ್ದಾರೆ. ಅದಕ್ಕೇನು ಡ್ರೆಸ್ ಕೋಡ್ ಇಲ್ಲ. ಹಾಗಂತ ಟಿ-ಶರ್ಟ್ ಮೇಲೆ ಅಧಿವೇಶನಕ್ಕೆ ಬರುವುದು ಎಷ್ಟು ಸರಿ..? ಅವರಲ್ಲಿ ಅಶಿಸ್ತು ಅನ್ನುವುದು ಎದ್ದು ಕಾಣುತ್ತಿದೆ ಎಂದರು.

ನಾನು ಮೊದಲ ಬಾರಿಗೆ ಸಂಸತ್ ಅಧಿವೇಶನದಲ್ಲಿ ಭಾಗಿಯಾಗಿದ್ದೆ. ವಿಧಾನಸಭೆಯಲ್ಲಿ ನಾನು ಸಭಾಪತಿ ಆಗಿ ಕೆಲಸ ಮಾಡಿದ್ದೇನೆ.‌ ಇಲ್ಲಿ ಒಂದಿಷ್ಟು ಶಿಸ್ತನ್ನು ಕಂಡಿದ್ದೆ.‌ ಆದರೆ ಲೋಕಸಭೆಯಲ್ಲಿ ರಾಹುಲ್ ಗಾಂಧಿ ಮತ್ತು ಪ್ರತಿಪಕ್ಷಗಳು ಆಶಿಸ್ತಿನಿಂದ ವರ್ತಿಸಿದರು. ಪ್ರಧಾನಿ ಮೋದಿಯವರು ನಡೆದುಕೊಂಡ ರೀತಿಗೆ ವ್ಯತಿರಿಕ್ತವಾಗಿ ರಾಹುಲ್ ಗಾಂಧಿ ವರ್ತಿಸಿದರು. ಪ್ರಧಾನಿ ಭಾಷಣಕ್ಕೆ ಅಗೌರವ ತೋರುವ ರೀತಿಯಲ್ಲಿ ವರ್ತಿಸಿದರು. ಭಾಷಣದ ವೇಳೆ ಅನುಚಿತವಾಗಿ ವರ್ತಿಸಿದರು. ಇದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಾಚಿಕೆ ತರುವ ಸಂಗತಿ. ಮುಂಬರುವ ಅಧಿವೇಶನದಲ್ಲಾದರೂ ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳು ಒಳ್ಳೆಯ ನಡತೆ ತೋರಿಸಲಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next