Advertisement

ಮೂರುಸಾವಿರ ಮಠದ ಆಸ್ತಿ ಮಠಕ್ಕೆ ಬಿಟ್ಟು ಕೊಡಿ

06:01 PM Nov 01, 2021 | Team Udayavani |

ಧಾರವಾಡ: ತಾಲೂಕಿನ ಗರಗ ಗ್ರಾಮದಲ್ಲಿ ಇರುವ ಉಪ್ಪಿನಬೆಟಗೇರಿ ಮೂರುಸಾವಿರ ವಿರಕ್ತಮಠದ ಆಸ್ತಿ ವಿವಾದಕ್ಕೆ ಸಂಬಂ ಧಿಸಿದಂತೆ ಧಾರವಾಡ ಮುರುಘಾಮಠದ ಪೀಠಾಧಿಪತಿ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಗರಗ-ಉಪ್ಪಿನಬೆಟಗೇರಿ ಗ್ರಾಮಗಳ ಗುರು ಹಿರಿಯರ ಸಭೆ ಗರಗ ಗ್ರಾಮದ ಶ್ರೀಕುಮಾರೇಶ್ವರ ಮಠದಲ್ಲಿ ರವಿವಾರ ಸಂಜೆ ಜರುಗಿತು.

Advertisement

ಶ್ರೀಕುಮಾರ ವಿರೂಪಾಕ್ಷ ಸ್ವಾಮೀಜಿ ಮಾತನಾಡಿ, ಗರಗ ಗ್ರಾಮದಲ್ಲಿರುವ ಉಪ್ಪಿನಬೆಟಗೇರಿ ಮೂರುಸಾವಿರ ವಿರಕ್ತಮಠದ ಶಾಖಾಮಠ ಹಾಗೂ ಈ ಶಾಖಾಮಠಕ್ಕೆ ಸಂಬಂಧಿಸಿದ ಅಮೂಲ್ಯವಾದ ಜಮೀನುಗಳನ್ನು ಗರಗ ಗ್ರಾಮದ ಆನಂದಗೌಡ ಪಾಟೀಲ ಎಂಬುವರು ಕಾನೂನು
ಬಾಹಿರವಾಗಿ ತಮ್ಮ ಹಾಗೂ ತಮ್ಮ ಸಂಸ್ಥೆ ಹೆಸರಿನಲ್ಲಿ ಅನೇಕ ವರ್ಷಗಳ ಹಿಂದೆಯೇ ದಾಖಲು ಮಾಡಿಕೊಂಡಿದ್ದಾರೆಂದು ದೂರಿದರು.

ನಮ್ಮ ಶಾಖಾಮಠದಲ್ಲಿ ಅವರ ಒಡೆತನದ ಸಂಸ್ಥೆಯ ಹೆಸರಿನಲ್ಲಿ ಈಗಲೂ ಪ್ರೌಢಶಾಲೆ ನಡೆಸುತ್ತಿದ್ದಾರೆ. ಹಾಗೂ ನಮ್ಮ ಶಾಖಾಮಠದ ಹೆಸರಿನಲ್ಲಿದ್ದ ಅಮೂಲ್ಯವಾದ ಜಮೀನುಗಳನ್ನು ಯಾವುದೇ ಸೂಕ್ತ ದಾಖಲೆಗಳಿಲ್ಲದೇ ತನ್ನ ಹೆಸರಿನಲ್ಲಿ ಪರಭಾರೆ ಮಾಡಿಕೊಂಡು ಆ ಜಮೀನುಗಳನ್ನು ವಸತಿ ನಿವೇಶಗಳನ್ನಾಗಿ ಮಾಡಿ ಈಗಾಗಲೇ ಮಾರಿದ್ದಾರೆ. ನಮ್ಮ ಶಾಖಾಮಠ ಮತ್ತು ಶಾಖಾಮಠದ ಆಸ್ತಿ ಸಂಪೂರ್ಣ ಸಮಾಜದ ಆಸ್ತಿಯಾಗಿವೆ. ಇವು ಕೇವಲ ಒಬ್ಬರಿಗೆ ಉಪಯೋಗವಾಗದೇ ಇಡೀ ಸಮಾಜಕ್ಕಾಗಿ ಉಪಯೋಗವಾಬೇಕು. ಈ ನಿಟ್ಟಿನಲ್ಲಿ ನಾನು ಅವರಿಗೆ ಹಲವಾರು ಬಾರಿ ತಿಳಿ ಹೇಳಿದರೂ ನಮ್ಮ ಮಾತಿಗೆ ಗೌರವ ಕೊಟ್ಟಿಲ್ಲ. ಹೀಗಾಗಿ ಈ ವಿಷಯವನ್ನು ಗರಗ ಗ್ರಾಮದ ಗುರು-ಹಿರಿಯರ ಸಮ್ಮುಖದಲ್ಲಿ ವಿವರಿಸುತ್ತಿದ್ದೇನೆಂದು ದಾಖಲೆ ಸಮೇತ ತಿಳಿಸಿದರು.

ಸಮಾಜದ ಆಸ್ತಿ ಸಮಾಜಕ್ಕೆ ಉಪಯೋಗವಾಗಬೇಕು ಖಾಸಗಿ ವ್ಯಕ್ತಿಗೆ ಮಾತ್ರ ಉಪಯೋಗವಾಗಬಾರದು. ಕಾನೂನು ಬಾಹಿರವಾಗಿ ತಮ್ಮ ಮತ್ತು ತಮ್ಮ ಸಂಸ್ಥೆಯ ಹೆಸರಿನಲ್ಲಿ ದಾಖಲು ಮಾಡಿಕೊಂಡಿರುವ ಶ್ರೀಮಠ ಮತ್ತು ಮಠದ ಆಸ್ತಿಯನ್ನು ಮರಳಿ ಶ್ರೀಮಠದ ಹೆಸರಿನಲ್ಲಿ ದಾಖಲು ಮಾಡಬೇಕೆಂದು ಗರಗ ಗ್ರಾಮದ ಗುರು ಹಿರಿಯರು, ಗ್ರಾಮಸ್ಥರು ಸಭೆಯಲ್ಲಿ ನಿರ್ಣಯ ಕೈಗೊಂಡು ಸಭೆಯಲ್ಲಿಯೇ ಗ್ರಾಪಂ ಅಧ್ಯಕ್ಷರು ಮತ್ತು ಸದಸ್ಯರಿಗೆ ಮನವಿ ಪತ್ರ ಸಲ್ಲಿಸಿದರು.

ಗರಗ ಶ್ರೀಕುಮಾರೇಶ್ವರ ಮಠದ ಉದಯ ಸ್ವಾಮೀಜಿ, ಮುನವಳ್ಳಿ ಸೋಮಶೇಖರ ಮಠದ ಮುರಘರಾಜೇಂದ್ರ ಸ್ವಾಮೀಜಿ, ಅಮೀನಗಡ ಗಚ್ಚಿನಮಠದ ಶಂಕರರಾಜೇಂದ್ರ ಸ್ವಾಮೀಜಿ, ಕಮತಗಿ ಹೊಳೆ ಹುಚ್ಚೇಶ್ವರ ಸಂಸ್ಥಾನಮಠದ ಶ್ರೀ ಹುಚ್ಚೇಶ್ವರ ಸ್ವಾಮೀಜಿ, ಮಾಜಿ ಶಾಸಕ ಎ.ಬಿ.ದೇಸಾಯಿ, ಉಪ್ಪಿನಬೆಟಗೇರಿಯ ಹಿರಿಯರಾದ ವೀರಣ್ಣಾ ಪರಾಂಡೆ ಸೇರಿದಂತೆ ಅನೇಕರು ಮಾತನಾಡಿದರು. ಅಶೋಕ ದೇಸಾಯಿ, ದಯಾನಂದಗೌಡ ಪಾಟೀಲ, ಮಹಾಲಿಂಗಯ್ಯ ಹಿರೇಮಠ, ತವನಪ್ಪ ಅಷ್ಟಗಿ, ಗ್ರಾಪಂ ಅಧ್ಯಕ್ಷೆ ಲಕ್ಷ್ಮಿ ಕಾಶೀಗಾರ, ಕಿರಣ ಬುಲಬುಲೆ, ಮಹೇಶ ಹುಬ್ಬಳ್ಳಿ, ವಿಜಯ ಮಗೆಣ್ಣವರ, ಮಹೇಶ ಯಲಿಗಾರ, ಬಸವರಾಜ ಬುಡ್ರಕಟ್ಟಿ ಸೇರಿದಂತೆ ಗ್ರಾಮಸ್ಥರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next