Advertisement

ಹುಬ್ಬಳ್ಳಿ: ರೋಟರಿ ಆರೋಗ್ಯ ವಾಹಿನಿಗೆ ಚಾಲನೆ

06:00 PM Jun 26, 2024 | Team Udayavani |

ಉದಯವಾಣಿ ಸಮಾಚಾರ
ಹುಬ್ಬಳ್ಳಿ: ಅತ್ಯಾಧುನಿಕ ಯಂತ್ರಗಳನ್ನು ಹೊಂದಿರುವ ರೋಟರಿ ಆರೋಗ್ಯ ವಾಹಿನಿಗೆ ಮೂರುಸಾವಿರ ಮಠದ ಜಗದ್ಗುರು ಶ್ರೀ
ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಚಾಲನೆ ನೀಡಿದರು. ಮೊದಲ ದಿನವೇ ಜನರು ಉಚಿತವಾಗಿ ಆರೋಗ್ಯ ತಪಾಸಣೆ
ಮಾಡಿಸಿಕೊಂಡರು.

Advertisement

ಮಂಗಳವಾರ ಇಲ್ಲಿ ಮೂರುಸಾವಿರ ಮಠದ ಆವರಣದಲ್ಲಿ ಶ್ರೀಗಳು ರೋಟರಿ ಆರೋಗ್ಯ ವಾಹಿನಿ ಮತ್ತು ಮೆಮೊಗ್ರಾಫಿಕ್‌ ಹಾಗೂ ಕಾಲ್ಪುಸ್ಕೋಪಿಕ್‌ ಯಂತ್ರದ ಮೂಲಕ ಮೊದಲ ಹಂತದ ಕ್ಯಾನ್ಸರ್‌ ಕಾಯಿಲೆ ಉಚಿತ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿದರು. ಇಂತಹ ಅತ್ಯಾಧುನಿಕ ಸೌಲಭ್ಯಗಳಿಂದ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ಸಿಗುವಂತಾಗಿದೆ.

ತಪಾಸಣಾ ಯಂತ್ರಗಳನ್ನು ಹೊಂದಿರುವ ವಾಹನ ಹಳ್ಳಿಗಳಿಗೆ ತೆರಳಿ ಅಲ್ಲಿನ ಜನರ ಆರೋಗ್ಯ ತಪಾಸಣೆ ಮಾಡುವ ಕಾರ್ಯ
ಶ್ಲಾಘನೀಯ. ಇಷ್ಟೊಂದು ಬೆಲೆಬಾಳುವ ವಾಹನವನ್ನು ಖರೀದಿಸಿ ಸಮಾಜಕ್ಕೆ ನೀಡಿರುವ ರೋಟರಿ ಕ್ಲಬ್‌ನ ಪದಾಧಿಕಾರಿಗಳ
ಸಮಾಜಮುಖಿ ಕಾರ್ಯ ದೊಡ್ಡದು ಎಂದು ಸ್ವಾಮೀಜಿ ಹೇಳಿದರು.

ನವನಗರದ ಕರ್ನಾಟಕ ಕ್ಯಾನ್ಸರ್‌ ಥೆರಪಿ ಇನ್‌ಸ್ಟಿಟ್ಯೂಟ್‌ನ ಡಾ| ಬಿ.ಆರ್‌. ಪಾಟೀಲ ಮಾತನಾಡಿ, ಈ ವಾಹನವು ಬಾಯಿ, ಸ್ತನ,
ಗರ್ಭಕೋಶ ಹಾಗೂ ರಕ್ತ ಕ್ಯಾನ್ಸರ್‌ ಪತ್ತೆ ಮಾಡುವಂತಹ ಯಂತ್ರಗಳನ್ನು ಹೊಂದಿದೆ. ಗ್ರಾಮೀಣ ಪ್ರದೇಶಗಳಿಗೆ ತೆರಳಿ ತಪಾಸಣೆ
ಹಾಗೂ ಅಂದೇ ವರದಿ ನೀಡುವ ಸೌಲಭ್ಯವಿದೆ.

ಕ್ಯಾನ್ಸರ್‌ ರೋಗದ ಲಕ್ಷಣಗಳು ಪತ್ತೆಯಾದರೆ ನಂತರ ಚಿಕಿತ್ಸೆಗೆ ಅನುಕೂಲವಾಗಲಿದೆ. ಇದೊಂದು ಅತ್ಯಾಧುನಿಕ ಯಂತ್ರಗಳನ್ನು
ಹೊಂದಿದ ಆರೋಗ್ಯ ವಾಹನವಾಗಿದೆ. ದಿನಕ್ಕೆ 100 ಜನರ ಆರೋಗ್ಯ ತಪಾಸಣೆ ಮಾಡುವ ಸಾಮರ್ಥ್ಯ ಹೊಂದಿದೆ ಎಂದು ತಿಳಿಸಿದರು. ರೋಟರಿ ಕ್ಲಬ್‌ ಅಧ್ಯಕ್ಷ ಅರವಿಂದ ಕುಬಸದ ಮಾತನಾಡಿ, ಈ ವಾಹನದ ಮೂಲಕ ಗ್ರಾಮೀಣ ಭಾಗದಲ್ಲಿ ಶಿಬಿರಗಳನ್ನು ಮಾಡಲಾಗುವುದು. ಪ್ರತಿಯೊಂದು ಆರೋಗ್ಯ ತಪಾಸಣೆಯು ಉಚಿತವಾಗಿರುತ್ತದೆ.

Advertisement

ಧಾರವಾಡ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ರೋಟರಿ ಕ್ಲಬ್‌ಗಳಿವೆ. ಇವರೆಲ್ಲನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅವರು ಕೂಡ ತಮ್ಮ ವ್ಯಾಪ್ತಿಯಲ್ಲಿ ಈ ವಾಹನದ ಮೂಲಕ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಬಹುದಾಗಿದೆ. ಇದರ ನಿರ್ವಹಣೆಯನ್ನು ನವನಗರದ ಕ್ಯಾನ್ಸರ್‌ ಆಸ್ಪತ್ರೆಗೆ ನೀಡಲಾಗಿದೆ. ಈ ವಾಹನದ ಒಟ್ಟು ಮೌಲ್ಯ ಸುಮಾರು 1.20 ಕೋಟಿ ರೂ. ನಮ್ಮ ಕ್ಲಬ್‌ ಹಾಗೂ ಅಂತಾರಾಷ್ಟ್ರೀಯ ಕ್ಲಬ್‌ನ ವಂತಿಗೆ ಕೂಡ ಇದೆ ಎಂದು ತಿಳಿಸಿದರು.

ರೋಟರಿ ಕ್ಲಬ್‌ ಆಫ್‌ ಹುಬ್ಬಳ್ಳಿ ಹಾಗೂ ನವನಗರದ ಕರ್ನಾಟಕ ಕ್ಯಾನ್ಸರ್‌ ಥೆರಪಿ ಇನ್‌ಸ್ಟಿಟ್ಯೂಟ್‌ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. ಕ್ಲಬ್‌ ಸದಸ್ಯರಾದ ಎ.ವಿ. ಸಂಕನೂರು, ಸುರೇಂದ್ರ ಫರಾಲ್‌, ಬಾಳಾಸಾಹೇಬ ಪಾಟೀಲ, ಪ್ರಕಾಶರಾವ ಬಾಪು ಬಿರಾದರ, ಮಂಜುನಾಥ ಹೊಂಬಳ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next