ಹುಬ್ಬಳ್ಳಿ: ಕಳಸಾ-ಬಂಡೂರಿ ಯೋಜನೆ ವಿಚಾರದಲ್ಲಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾಣೆ ಇಲಾಖೆಯಿಂದ ಒಪ್ಪಿಗೆ ದೊರೆತಿದೆ ಎಂಬ ಸಂತಸ ಮೂಡಿದ ಬೆನ್ನಲ್ಲೇ, ಅದೇ ಇಲಾಖೆಯಿಂದ ಇದೀಗ ಪರಿಶೀಲನೆಗೆ ಸಮಿತಿ ರಚನೆ ಎಂಬ ಹೇಳಿಕೆ ಮತ್ತೊಂದು ಗೊಂದಲಕ್ಕೆ ಕಾರಣವಾಗಿದ್ದು, 2002ರಲ್ಲಾದ ಸ್ಥಿತಿಯನ್ನು ನೆನಪಿಸುತ್ತಿದೆ.
Advertisement
ಮಹದಾಯಿ ನ್ಯಾಯಾಧಿಕರಣದಿಂದ ತೀರ್ಪು ಹೊರಬಿದ್ದರೂ ಕೇಂದ್ರದಿಂದ ಅಧಿಸೂಚನೆ ಹೊರಬಿದ್ದಿಲ್ಲ. ಇನ್ನೊಂದು ಕಡೆ ಗೋವಾದ ಎಡಬಿಡಂಗಿತನ ನಿಂತಿಲ್ಲ. ನ್ಯಾಯಾಧಿಕರಣ ತೀರ್ಪಿನ್ವಯ ಕಳಸಾ-ಬಂಡೂರಿ ಯೋಜನೆ ಕಾಮಾರಿಗೆ ಕರ್ನಾಟಕದ ಮನವಿಗೆ ಸ್ಪಂದಿಸಿದ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆ ಸಚಿವರು ಅನುಮತಿ ನೀಡಿದ್ದರಾದರೂ, ಇದನ್ನು ವಿರೊಧಿಸುವ ಮೂಲಕ ಗೋವಾ, ಕೇಂದ್ರದ ಅನುಮತಿಗೆ ಮತ್ತೂಮ್ಮೆ ಕಲ್ಲು ಹಾಕುವ ಕೆಲಸಕ್ಕೆ ಮುಂದಾಗಿದೆ.
Related Articles
Advertisement
ಗೋವಾದ ಆಕ್ಷೇಪಕ್ಕೆ ಸ್ಪಂದನೆ ಎಂಬಂತೆ ಕೇಂದ್ರ ಸರ್ಕಾರ ಕಳಸಾ-ಬಂಡೂರಿ ಯೋಜನೆಗೆ ನೀಡಿದ್ದ ಅನುಮತಿ ಪರಿಶೀಲನೆಗೆ ಸಮಿತಿ ರಚಿಸುವುದಾಗಿ ಹೇಳಿಕೆ ನೀಡುವ ಮೂಲಕ ಗೊಂದಲ ಸೃಷ್ಟಿಸಿದೆ.
2002ರಲ್ಲಾದ ಬರೆ ಬೀಳದಿರಲಿ: ಮಹದಾಯಿ ವಿವಾದ ಸುಮಾರು ನಾಲ್ಕು ದಶಕಗಳಿಂದ ಇದ್ದು, ಇತ್ಯರ್ಥ ಕಾಣದಾಗಿದ್ದರಿಂದ ರಾಜ್ಯ ಸರ್ಕಾರ 2000 ಇಸ್ವಿಯಲ್ಲಿ ಕಳಸಾ-ಬಂಡೂರಿ ನಾಲಾ ಯೋಜನೆ ರೂಪಿಸಿತ್ತು. ಈ ಯೋಜನೆಗೆ 2002ರಲ್ಲಿ ಅಂದಿನ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ ಡಿಎ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿತ್ತು. ಆಗಲೂ ಗೋವಾ ಸರ್ಕಾರ ಕೇಂದ್ರದ ಮೇಲೆ ತೀವ್ರ ಒತ್ತಡ ತಂದು ತಾತ್ವಿಕ ಒಪ್ಪಿಗೆ ತಡೆ ಹಿಡಿಯುವಂತೆ ಮಾಡಿ ಕರ್ನಾಟಕಕ್ಕೆ ಅನ್ಯಾಯ ಮಾಡಿತ್ತು.
ಇದಾದ ಸುಮಾರು 16 ವರ್ಷಗಳ ನಂತರ ಮಹದಾಯಿ ನ್ಯಾಯಾಧಿಕರಣ ಹಂಚಿಕೆ ಪ್ರಕಾರ ರಾಜ್ಯಕ್ಕೆ ಸಿಕ್ಕ ಸುಮಾರು 5.5 ಟಿಎಂಸಿ ಅಡಿ ಕುಡಿಯುವ ನೀರಿನ ಯೋಜನೆಯಡಿ ಕಳಸಾ-ಬಂಡೂರಿ ನಾಲಾ ಯೋಜನೆ ಕಾಮಗಾರಿಗೆ ಕೇಂದ್ರ ಪರಿಸರ ಇಲಾಖೆ ನೀಡಿದ ಅನುಮತಿಯನ್ನು ತಡೆಯುವ ಲಾಬಿಗೆ ಗೋವಾ ಮುಂದಾಗಿದೆ. ಕಳಸಾ-ಬಂಡೂರಿ ನಾಲಾ ಯೋಜನೆಗೆ ಈಗಾಗಲೇ ಸುಮಾರು 125 ಕೋಟಿ ವೆಚ್ಚ ಮಾಡಲಾಗಿದ್ದು, ಜತೆಗೆ ಅಂದಾಜು 1,600 ಕೋಟಿ ವೆಚ್ಚದ ಯೋಜನೆಯ ವಿಸ್ತೃತ ವರದಿ (ಡಿಪಿಆರ್) ಸಲ್ಲಿಸಲಾಗಿದೆ.
ಕಳಸಾ-ಬಂಡೂರಿಗೆ ತಾನೇ ನೀಡಿದ ಅನುಮತಿಯ ಪರಿಶೀಲನೆಗೆ ಸಮಿತಿರಚಿಸುವುದಾಗಿ ಕೇಂದ್ರ ಸರ್ಕಾರ ಹೇಳಿರುವುದು ನೋಡಿದರೆ, 2002ರಲ್ಲಾದ ರೀತಿ ರಾಜ್ಯಕ್ಕೆ ಮತ್ತೂಮ್ಮೆ ಬರೆ ಎಳೆಯುವ ಕೆಲಸ ಆಗಲಿದೆ ಎಂಬ ಆತಂಕ ಮೂಡುವಂತಾಗಿದೆ.