ಹುಬ್ಬಳ್ಳಿ: ತೈಲ ಬೆಲೆ ಹಚ್ಚಳ ವಿಷಯವಾಗಿ ಮುಖ್ಯಮಂತ್ರಿ ವಿರುದ್ಧ ಕೆಟ್ಟ ಪದ ಬಳಕೆ ಮಾಡಿರುವ ಶಾಸಕ ಜನಾರ್ದನ ರೆಡ್ಡಿ ಅವರೊಬ್ಬ ಅಯ್ಯೋಗ್ಯ. ಕೂಡಲೇ ರೆಡ್ಡಿ ತಾವಾಡಿದ ಮಾತಿಗೆ ಕ್ಷಮೆಯಾಚಿಸಬೇಕು ಎಂದು ವಿಧಾನಪರಿಷತ್ತು ಮುಖ್ಯ ಸಚೇತಕ ಸಲೀಂ ಅಹ್ಮದ್ ಆಗ್ರಹಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ರೆಡ್ಡಿ ಏನಿದ್ದರು, ಎಲ್ಲಿ ಇದ್ದು ಬಂದವರು ಎಂಬುದು ನಾಡಿಗಷ್ಟೇ ಅಲ್ಲ ದೇಶಕ್ಕೆ ಗೊತ್ತಿರುವ ಸಂಗತಿ. ತೈಲಬೆಲೆ ಹೆಚ್ಚಳ ಬಗ್ಗೆ ಪ್ರಜಾಸತ್ತಾತ್ಮಕ ರೀತಿ ಪ್ರತಿಭಟಿಸಲಿ ಆದರೆ ಸಿಎಂ ಬಗ್ಗೆ ರೆಡ್ಡಿ ಬಳಸಿದ ಪದ ಖಂಡನೀಯ ಎಂದರು.
ರಾಜ್ಯದಲ್ಲಿ ಶಿಗ್ಗಾಂವಿ ಸೇರಿದಂತೆ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಈಗಾಗಲೇ ತಯಾರಿಗೆ ಮುಂದಾಗಿದೆ. ಶಿಗ್ಗಾಂವಿ ಕ್ಷೇತ್ರಕ್ಕೆ ಪಕ್ಷ ಸೂಚಿಸುವವರು ಅಭ್ಯರ್ಥಿ ಆಗಲಿದ್ದಾರೆ. ಕಾಂಗ್ರೆಸ್ ಪಕ್ಷ ಉಪ ಚುನಾವಣೆ, ಸ್ಥಳೀಯ ಸಂಸ್ಥೆಗಳ ಹಾಗೂ 2028 ವಿಧಾನಸಭೆ ಚುನಾವಣೆಗೂ ಸಂಘಟನಾತ್ಮಕ ತಯಾರಿ ಕೈಗೊಂಡಿದೆ ಎಂದರು.
ತೈಲ ಬೆಲೆ ಹೆಚ್ಚಳ ಬಗ್ಗೆ ಬೀದಿಗಿಳಿದ ಬಿಜೆಪಿಯವರಿಗೆ ನಾಚಿಕೆಯಾಗಬೇಕು. ಮೋದಿ ಸರ್ಕಾರ ತೈಲ, ಅಡುಗೆ ಅನಿಲ ಬೆಲೆ ವಿಪರೀತ ಹೆಚ್ಚಳ ಮಾಡಿದ್ದು ಬಿಜೆಪಿ ಮರೆತಂತಿದೆ. ಲೋಕಸಭಾ ಚುನಾವಣೆಯಲ್ಲಿ ದೇಶದ ಜನ ಮೋದಿ ಸರ್ಕಾರ ಹಾಗೂ ಸರ್ವಾಧಿಕಾರ ವರ್ತನೆಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದರು.
ಕೇಂದ್ರದಲ್ಲಿರುವುದು ಕಿಚಡಿ ಸರ್ಕಾರ ಇದರಿಂದ ಅಭಿವೃದ್ಧಿ ಕಾರ್ಯಗಳು ಸಾಧ್ಯವಿಲ್ಲ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ ವಿನೋದ ಅಸೂಟಿ ಸೋತು ಗೆದ್ದಿದ್ದರೆ, ಬಿಜೆಪಿಯ ಪ್ರಹ್ಲಾದ ಜೋಶಿ ಗೆದ್ದು ಸೋತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನಗೊಳ್ಳಲಿದೆ ಎಂಬುದು ಬಿಜೆಪಿ ನಾಯಕರ ಹಗಲುಗನಸು ಆಗಿದೆ. ಯಾವುದೇ ಕಾರಣಕ್ಕೂ ಐದು ಗ್ಯಾರಂಟಿಗಳನ್ನು ನಿಲ್ಲಿಸುವುದಿಲ್ಲ. ಅದು ನಮ್ಮ ಬದ್ದತೆ ಎಂದರು.
ರಾಜ್ಯದಲ್ಲಿ ಡಿಸಿಎಂ ಹುದ್ದೆಗಳ ಸೃಷ್ಟಿಯ ಯಾವ ಚರ್ಚೆ ಪಕ್ಷದಲ್ಲಿ ಇಲ್ಲ ಎಂದರು.