ಹುಬ್ಬಳ್ಳಿ: ಜಲಸಂರಕ್ಷಣೆ-ಸಂವರ್ಧನೆ, ಜಲ ಸಾಕ್ಷರತೆ ಹಾಗೂ ಹಸಿರೀಕರಣ ಉದ್ದೇಶದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ‘ಜಲಾಮೃತ’ಕ್ಕೆ ಆಂದೋಲನ ರೂಪ ನೀಡಲು, ಸಂಪನ್ಮೂಲ ವ್ಯಕ್ತಿಗಳನ್ನು ತಯಾರುಗೊಳಿಸುವ ಹೊಣೆಯನ್ನು ಮೈಸೂರಿನ ಅಬ್ದುಲ್ ನಜೀರ್‌ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಧಾರವಾಡದ ವಾಲ್ಮಿಗೆ ವಹಿಸಲಾಗಿದೆ.
Advertisement
ಜಲಾಮೃತ ಯೋಜನೆ ಯಶಸ್ವಿ ನಿರ್ವಹಣೆಗೆ ರಾಜ್ಯ ಸರ್ಕಾರ ನಿವೃತ್ತ ಐಎಫ್ಎಸ್ ಅಧಿಕಾರಿಯೊಬ್ಬರನ್ನು ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದ್ದು, ಜಿಲ್ಲೆಯಿಂದ ಗ್ರಾಮಮಟ್ಟದವರೆಗೂ ಜಲ ಸಾಕ್ಷರತೆ, ಜಲ ಸಂರಕ್ಷಣೆ-ಸಂವರ್ಧನೆ ಜಾಗೃತಿ ಮೂಡಿಸಲು ಮುಂದಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಡಿಯಲ್ಲಿ ಜಲಾಮೃತ ಯೋಜನೆ ನಿರ್ವಹಣೆಗೊಳ್ಳುತ್ತಿದ್ದು, ವಿವಿಧ ಇಲಾಖೆಗಳು, ವಿಶ್ವವಿದ್ಯಾಲಯಗಳು, ಸರ್ಕಾರೇತರ ಸಂಸ್ಥೆಗಳು ಸಾಥ್ ನೀಡುತ್ತಿವೆ.
Related Articles
Advertisement
ಸಮಿತಿ ರಚನೆ: ಜಲಾಮೃತ ಯೋಜನೆಯಡಿ ಜಲಸಾಕ್ಷರತೆ ಹಾಗೂ ಯೋಜನೆ ಅನುಷ್ಠಾನ ತರಬೇತಿಗೆ ಪೂರಕವಾಗಿ ಪಠ್ಯ ಹಾಗೂ ತರಬೇತಿ ಸಾಮಗ್ರಿ ರಚನೆಗಾಗಿ ರಾಜ್ಯಮಟ್ಟದ ಎಸ್‌ಎಂಎಸ್ ಸಮಿತಿ ರಚನೆ ಮಾಡಲಾಗಿದೆ. ಈ ಸಮಿತಿ ರಾಜ್ಯ ಮತ್ತು ಜಿಲ್ಲಾ ಮಟ್ಟದ ಸಂಪನ್ಮೂಲ ವ್ಯಕ್ತಿಗಳನ್ನು ತರಬೇತಿಗೊಳಿಸುವ ಪಠ್ಯವನ್ನು ಸಿದ್ಧಪಡಿಸಲಿದೆ.
ಯೋಜನೆಯ ಪ್ರಚಾರಾಂದೋಲನಕ್ಕೆ ಬೇಕಾಗುವ ಭಿತ್ತಿಪತ್ರ, ಕರಪತ್ರ, ಗೋಡೆಬರಹ ಕೈಪಿಡಿ ಇನ್ನಿತರ ಮಾಹಿತಿಯನ್ನು ಸಿದ್ಧಪಡಿಸುವ ಜವಾಬ್ದಾರಿಯನ್ನು ಧಾರವಾಡದ ವಾಲ್ಮಿ ಸಂಸ್ಥೆಗೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಜಲ ಸಾಕ್ಷರತೆ ಅರಿವು ಶಾಲಾ-ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಲು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲು ಯೋಜಿಸಲಾಗಿದ್ದು, ಶಾಲಾ-ಕಾಲೇಜುಗಳಲ್ಲಿ ಜಲಸಾಕ್ಷರತೆ ಮಾದರಿಗಳ ಪರಿಚಯಕ್ಕೆ ಮನವಿ ಮಾಡಲಾಗುತ್ತದೆ. ಜಲಮೂಲಗಳ ಸಂರಕ್ಷಣೆ ಹಾಗೂ ಸಂವರ್ಧನೆ ಕಾಮಗಾರಿಗಳನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ(ನರೇಗಾ) ಅಡಿಯಲ್ಲಿ ಕೈಗೊಳ್ಳಲು ಯೋಜಿಸಲಾಗಿದೆ.
ಸಮುದಾಯಾಧಾರಿತ ಯೋಜನೆ ಬೇಡಿಕೆಜಲಾಮೃತ ಯೋಜನೆ ಮತ್ತೂಂದು ಸರ್ಕಾರಿ ಯೋಜನೆ ರೂಪ ಪಡೆಯದೆ, ಸಂಪೂರ್ಣವಾಗಿ ಅಧಿಕಾರಿಗಳ ಹಿಡಿತದಲ್ಲೇ ಸಾಗದೆ, ಇದೊಂದು ಸಮುದಾಯಾಧಾರಿತ, ಜನ ಸಮುದಾಯದ ಸಕ್ರಿಯ ಪಾಲ್ಗೊಳ್ಳುವಿಕೆ ಯೋಜನೆಯಾದಾಗ ಮಾತ್ರ ನಿರೀಕ್ಷಿತ ಯಶಸ್ಸು ಕಾಣಲಿದೆ. ಜನರ ಭಾವನೆ, ಚಿಂತನೆಗಳ ಅಭಿವ್ಯಕ್ತಕ್ಕೆ ಅವಕಾಶ ದೊರೆಯುವಂತಾಗಬೇಕು. ಸ್ಥಳೀಯ ಸಮಸ್ಯೆಗಳು ಭಿನ್ನವಾಗಿರುತ್ತವೆ. ಎಲ್ಲವುದಕ್ಕೂ ಒಂದೇ ಪರಿಹಾರ ಮಾದರಿ ಅಳವಡಿಸಿ ಜಾರಿಗೆ ಮುಂದಾದರೆ ಸಮಂಜಸವಾಗದ್ದರಿಂದ ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕೆ ಸ್ಥಳೀಯ ಭಾವನೆ, ಅನಿಸಿಕೆಗಳಿಗೆ ಆದ್ಯತೆ ದೊರೆತರೆ ಚೆನ್ನ ಎಂಬುದು ಅನೇಕರ ಅನಿಸಿಕೆಯಾಗಿದ್ದು, ಸರ್ಕಾರ ಇದನ್ನು ಗಮನಿಸಬೇಕಾಗಿದೆ. ಜನಸಮುದಾಯದ ಸಹಭಾಗಿತ್ವದೊಂದಿಗೆ ಯೋಜನೆ ಯಶಸ್ವಿಗೆ ಮುಂದಡಿ ಇರಿಸಬೇಕಾಗಿದೆ.