Advertisement

ಹುಬ್ಬಳ್ಳಿ: ನಮ್ಮ ಕ್ಲಿನಿಕ್‌ಗೆ ಜನರಿಂದ ಉತ್ತಮ ಸ್ಪಂದನೆ

06:07 PM Dec 20, 2022 | Team Udayavani |

ಹುಬ್ಬಳ್ಳಿ: ಬಡವರಿಗೆ ಉಚಿತ ಚಿಕಿತ್ಸೆ, ಔಷಧಿ ನೀಡುವ ಉದ್ದೇಶದೊಂದಿಗೆ ಇಲ್ಲಿನ ಬೈರಿದೇವರಕೊಪ್ಪದ ರೇಣುಕಾ ನಗರದಲ್ಲಿ ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ|ಕೆ.ಸುಧಾಕರ ಅವರು ಉದ್ಘಾಟಿಸಿದ ನಮ್ಮ ಕ್ಲಿನಿಕ್‌ಗೆ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದೆ.

Advertisement

ನಮ್ಮ ಕ್ಲಿನಿಕ್‌ನಲ್ಲಿ ಕೇವಲ ಸುತ್ತಮುತ್ತಲಿನ ಬಡಾವಣೆ ಅಷ್ಟೇ ಅಲ್ಲದೆ ಸುತ್ತಮುತ್ತಲಿನ ಗ್ರಾಮಗಳಿಂದಲೂ ಜನರು ಆಗಮಿಸಿ ಚಿಕಿತ್ಸೆ ಪಡೆಯುತ್ತಿರುವುದು ಕಂಡು ಬಂದಿದೆ. ಪ್ರತಿದಿನ ಸುಮಾರು 70ಕ್ಕೂ ಅಧಿಕ ಜನರು ಆಗಮಿಸಿ ಪ್ರಾಥಮಿಕ ಚಿಕಿತ್ಸೆ ಪಡೆದು ಹೋಗಿದ್ದಾರೆ.

ಜಿಲ್ಲೆಗೆ 6 ನಮ್ಮ ಕ್ಲಿನಿಕ್‌ ಮಂಜೂರು: ಜಿಲ್ಲೆಯಲ್ಲಿ ಒಟ್ಟು 6 ನಮ್ಮ ಕ್ಲಿನಿಕ್‌ಗಳು ಆರಂಭಗೊಂಡಿದ್ದು, ಎರಡು ಹುಬ್ಬಳ್ಳಿಯಲ್ಲಿ, ಎರಡು ಧಾರವಾಡ, ನವಲಗುಂದ ಮತ್ತು ಅಣ್ಣಿಗೇರಿಯಲ್ಲಿ ತಲಾ 1 ಕ್ಲಿನಿಕ್‌ ಆರಂಭಗೊಳ್ಳಲಿವೆ. ಈಗಾಗಲೇ ಹುಬ್ಬಳ್ಳಿಯ ಬೈರಿದೇವರಕೊಪ್ಪ ರೇಣುಕಾ ನಗರದಲ್ಲಿ ಹಾಗೂ ಎಸ್‌.ಎಂ.ಕೃಷ್ಣಾ ನಗರದಲ್ಲಿ ಎರಡು ಕ್ಲಿನಿಕ್‌ಗಳು ಆರಂಭಗೊಂಡಿದ್ದು, ಧಾರವಾಡದಲ್ಲಿ ಮದಿಹಾಳದಲ್ಲಿ ಗುರುತಿಸಲಾಗಿದ್ದು, ಇನ್ನೊಂದು ಸ್ಥಳದ ಪರಿಶೀಲನೆ ನಡೆಸಲಾಗುತ್ತಿದೆ. ಅಣ್ಣಿಗೇರಿ, ನವಲಗುಂದಲ್ಲಿ ಆರಂಭಗೊಳ್ಳಬೇಕಿದೆ.

14ಕ್ಕೂ ಹೆಚ್ಚು ತಪಾಸಣೆ: ಮಧುಮೇಹ, ರಕ್ತದೊತ್ತಡ, ಮೂತ್ರ ಪರೀಕ್ಷೆ, ಗರ್ಭಧಾರಣೆ, ಡೆಂಘೀ, ಮಲೇರಿಯಾ, ಹಿಮೋಗ್ಲೋಬಿನ್‌, ಎಚ್‌ಐವಿ, ಎಚ್‌ಬಿಎಸ್‌ಎಜಿ, ವಿಡಿಆರ್‌ಎಲ್‌, ವಾಟರ್‌ ಟೆಸ್ಟ್‌, ಕಫ ಪರೀಕ್ಷೆ, ವಿಐಎ, ಐಯೋಡಿನ್‌ ಮತ್ತು ಸಾಲ್ಟ ಪರೀಕ್ಷೆಗಳನ್ನು ನಮ್ಮ ಕ್ಲಿನಿಕ್‌ನಲ್ಲಿ ಮಾಡಲಾಗುತ್ತದೆ.

ಹೆಚ್ಚಿನ ಸಿಬ್ಬಂದಿ ಅವಶ್ಯಕತೆ: ಸದ್ಯ ನಮ್ಮ ಕ್ಲಿನಿಕ್‌ಗೆ ನಾಲ್ವರು ಸಿಬ್ಬಂದಿ ನೀಡಲಾಗಿದ್ದು, ಇನ್ನು ಹೆಚ್ಚಿನ ಸಿಬ್ಬಂದಿ ಬೇಕಾಗಲಿದೆ. ನಮ್ಮ ಕ್ಲಿನಿಕ್‌ನಲ್ಲಿ 4 ಜನ ಸಿಬ್ಬಂದಿಗೆ ನೇಮಿಸಲಾಗಿದ್ದು, ಅದರಲ್ಲಿ ಓರ್ವ ವೈದ್ಯಾಧಿಕಾರಿ, ಓರ್ವ ಲ್ಯಾಬ್‌ ಟೆಕ್ನಿಷಿಯನ್‌-ಡಾಟಾ ಆಪರೇಟರ್‌, ಓರ್ವ ಸ್ಟಾಫ್‌ ನರ್ಸ್‌ ಹಾಗೂ ಓರ್ವ ಗ್ರುಪ್‌ ಡಿ ಸಿಬ್ಬಂದಿಯನ್ನು ಸದ್ಯ ನೇಮಕ ಮಾಡಲಾಗಿದೆ. ಓರ್ವ ಸೆಕ್ಯೂರಿಟಿ ಅವಶ್ಯಕತೆ ಇದೆ ಎಂಬುದು ಜನರ ಅನಿಸಿಕೆ.

Advertisement

105ಕ್ಕೂ ಹೆಚ್ಚು ಔಷಧಿ ವಿತರಣೆ: ನಮ್ಮ ಕ್ಲಿನಿಕ್‌ನಲ್ಲಿ 105 ತರಹದ ಔಷಧಿಗಳನ್ನು ಆರೋಗ್ಯ ಇಲಾಖೆಯಿಂದ ನೀಡಲಾಗಿದೆ. ಸಾಮಾನ್ಯವಾಗಿ ಸಾರ್ವಜನಿಕರು, ಕೆಮ್ಮು, ಜ್ವರ, ಶೀತ, ಮೈಕೈ ನೋವು, ಕಣ್ಣಿನ ಸಮಸ್ಯೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ತೆಗೆದುಕೊಂಡು ಬಂದಾಗ ಅಲ್ಲಿದ್ದ ವೈದ್ಯರು ಪರಿಶೀಲನೆ ನಡೆಸಿ ಸೂಕ್ತ ಔಷಧೋಪಚಾರ ಮಾಡುತ್ತಿದ್ದಾರೆ.

ಟೆಲಿಮೆಡಿಷಿನ್‌ ವ್ಯವಸ್ಥೆ: ನಮ್ಮ ಕ್ಲಿನಿಕ್‌ಗೆ ಆಗಮಿಸುವ ಜನರಿಗೆ ಇನ್ನು ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಎನಿಸಿದರೆ, ಅಂತಹವರಿಗೆ ಟೆಲಿಮೆಡಿಷನ್‌ ವ್ಯವಸ್ಥೆ ಮೂಲಕ ತಜ್ಞ ವೈದ್ಯರೊಂದಿಗೆ ರೋಗಿ ಸಮಸ್ಯೆ ವಿವರಣೆ, ತಕ್ಕಚಿಕಿತ್ಸೆ, ಔಷಧಿ ನೀಡುವ ಕುರಿತು ಸಂವಾದ ನಡೆಯಲಿದೆ. ಒಟ್ಟಿನಲ್ಲಿ ನಮ್ಮ ಕ್ಲಿನಿಕ್‌ ಸ್ಥಳೀಯರಿಗೆ ಉತ್ತಮ ಸೌಲಭ್ಯ ನೀಡುವ ಜತೆಗೆ ಪ್ರತಿದಿನ ಬೆಳಿಗ್ಗೆ 9:00 ರಿಂದ ಸಂಜೆ 4:30ರವರೆಗೆ ಸೇವೆ ನೀಡಲಿದೆ.

ನಮ್ಮ ಕ್ಲಿನಿಕ್‌ ಆರಂಭಗೊಂಡಿದ್ದು, ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ಈಗಾಗಲೇ ಹುಬ್ಬಳ್ಳಿಯ ಎರಡು ಕ್ಲಿನಿಕ್‌ಗಳು ಆರಂಭಗೊಂಡಿದ್ದು, ಧಾರವಾಡ, ನವಲಗುಂದ, ಅಣ್ಣಿಗೇರಿ ಕ್ಲಿನಿಕ್‌ಗಳು ಆರಂಭಗೊಳ್ಳಬೇಕಿದೆ.
ಡಾ|ಶಶಿ ಪಾಟೀಲ, ಡಿಎಚ್‌ಒ.

ನಮ್ಮ ಕ್ಲಿನಿಕ್‌ಗೆ ಪ್ರತಿದಿನ ಸುಮಾರು 70ಕ್ಕೂ ಹೆಚ್ಚು ಜನರು ಚಿಕಿತ್ಸೆ ಪಡೆಯುತ್ತಿದ್ದು, ವರೂರ, ಕಲಘಟಗಿ ಸೇರಿದಂತೆ ಸುತ್ತಮುತ್ತಲಿನ ಜನರು ಆಗಮಿಸಿ ಚಿಕಿತ್ಸೆ ಪಡೆದು ಹೋಗುತ್ತಿದ್ದಾರೆ. ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದೆ.
ಡಾ|ಪ್ರವೀಣ ಗಂಗನಗೌಡರ, ವೈದ್ಯಾಧಿಕಾರಿ

ಬಸವರಾಜ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next