Advertisement

ಕಲ್ಪವೃಕ್ಷ ವಾಗಿ ಅರಳಲಿದೆ ಫ‌ಲದಾಯಕ ಗಣೇಶ

05:10 PM Sep 09, 2018 | Team Udayavani |

ಹುಬ್ಬಳ್ಳಿ: ಪರಿಸರಸ್ನೇಹಿ ಗಣೇಶಮೂರ್ತಿ ಜತೆಗೆ ವೃಕ್ಷಾರೋಹಣ ನಿಟ್ಟಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹತ್ವದ ಹೆಜ್ಜೆ ಇರಿಸಿದೆ. ತೆಂಗಿನಕಾಯಿಯಲ್ಲಿ ಗಣೇಶಮೂರ್ತಿ ರಚಿಸಲು ಸುಮಾರು 60 ಜನರಿಗೆ ತರಬೇತಿ ನೀಡಲಾಗಿದ್ದು, ತೆಂಗಿನಲ್ಲಿ ರಚಿಸಲಾದ 2,500ಕ್ಕೂ ಹೆಚ್ಚು ಗಣೇಶನನ್ನು ಮಾರಾಟ ಮಾಡಲು ಮುಂದಾಗಿದೆ.

Advertisement

ಈಗ ಪಿಒಪಿ ಗಣೇಶ ಮೂರ್ತಿಗಳ ಬದಲಾಗಿ ಮಣ್ಣಿನಲ್ಲಿ ಮಾಡಿದ, ರಾಸಾಯನಿಕ ಬಣ್ಣಗಳನ್ನು ಬಳಸದ ಗಣೇಶಮೂರ್ತಿಗಳ ಬಳಕೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಆದರೆ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಂದು ಹೆಜ್ಜೆ ಮುಂದೆ ಹೋಗಿ ಗಣೇಶಮೂರ್ತಿಯ ಜತೆಗೆ ಭವಿಷ್ಯದಲ್ಲಿ ಒಂದು ತೆಂಗಿನ ಮರ ಬೆಳೆಸುವ ಮಹತ್ವದ ಪರಿಸರ ಸ್ನೇಹಿ ಕಾರ್ಯ ಕೈಗೊಂಡಿದೆ.

ಪರಸರಸ್ನೇಹಿ ಮಣ್ಣಿನ ಗಣೇಶಮೂರ್ತಿಗಳು ನೀರಿನಲ್ಲಿ ಸುಲಭವಾಗಿ ಕರಗುತ್ತವೆ. ಅವುಗಳನ್ನು ಪ್ರತಿಷ್ಠಾಪಿಸುವ ಜನರು ನಂತರ ನೀರಿನಲ್ಲಿ ವಿಸರ್ಜಿಸುತ್ತಾರೆ. ಆದರೆ, ತೆಂಗಿನಕಾಯಿಯಲ್ಲಿ ತಯಾರಾಗುವ ಗಣೇಶಮೂರ್ತಿ ಸಂಪ್ರದಾಯದಂತೆ ವಿಸರ್ಜನೆ ನಂತರ ಅದನ್ನು ಮೊಳಕೆ ಬರುವಂತೆ ಮಾಡಿ ಹೊಲ, ದೇವಸ್ಥಾನ ಅಥವಾ ಮನೆ ಆವರಣದಲ್ಲಿ ನೆಡಬಹುದಾಗಿದೆ. ಮಟ್ಟೆಕಾಯಿಯಲ್ಲಿ ಗಣೇಶನಮೂರ್ತಿ ಕೆತ್ತನೆ ಮಾಡಲಾಗುತ್ತದೆ. ಕಾಯಿ ಮೇಲ್ಭಾಗದಲ್ಲಿ ಯಾವುದೇ ಧಕ್ಕೆಯಾಗದಂತೆ ಮೂರ್ತಿ ರಚಿಸಲಾಗುತ್ತದೆ. ಇದರಿಂದ ತೆಂಗಿನಕಾಯಿಗೆ ನೀರು ಹಾಕುತ್ತ ಇದ್ದರೆ ಅದು ಮೊಳಕೆಯೊಡೆದು ಸಸಿಯಾಗಿ, ಮುಂದೆ ಕಲ್ಪವೃಕ್ಷವಾಗಿ ತೆಂಗಿನಕಾಯಿಗಳನ್ನು ನೀಡುತ್ತದೆ. ಅಲ್ಲದೇ ಪರಿಸರಕ್ಕೂ ತನ್ನದೇ ಕೊಡುಗೆ ನೀಡಲಿದೆ.

ಧಾರವಾಡದ ಕೆಲಗೇರಿಯ ಮಲ್ಲಪ್ಪ ಬಾವಿಕಟ್ಟಿ ಎಂಬುವರು ಹವ್ಯಾಸವಾಗಿ ತೆಂಗಿನಕಾಯಿಯಲ್ಲಿ ಗಣೇಶ, ಈಶ್ವರ ಸೇರಿದಂತೆ ಇನ್ನಿತರ ದೇವರ ಮೂರ್ತಿಗಳನ್ನು ರಚಿಸಿರುವುದನ್ನು ಗಮನಿಸಿದ ಗ್ರಾಮಾಭಿವೃದ್ಧಿ ಯೋಜನೆಯವರು ತಮ್ಮ ಕೌಶಲಾಭಿವೃದ್ಧಿ ಕೇಂದ್ರದಲ್ಲಿ ಈ ಕುರಿತು ತರಬೇತಿಗೆ ನಿರ್ಧರಿಸಿದರು. ಆರಂಭದಲ್ಲಿ ಕೆಲವರನ್ನು ಮಲ್ಲಪ್ಪ ಅವರ ಬಳಿ ಕೆತ್ತನೆ ತರಬೇತಿಗೆ ಕಳುಹಿಸಿದ್ದರು. ನಂತರ ಕೌಶಲಾಭಿವೃದ್ಧಿ ಕೇಂದ್ರದಲ್ಲಿ ಕಳೆದ ವರ್ಷ ಸುಮಾರು 30 ಜನರಿಗೆ ತರಬೇತಿ ನೀಡಲಾಗಿತ್ತು. ಈ ವರ್ಷ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಯ ಸುಮಾರು 25-30 ಜನರಿಗೆ ತರಬೇತಿ ನೀಡಲಾಗಿದೆ. ಒಂದು ವಾರದ ತರಬೇತಿ ಪಡೆದ ಅನೇಕರು, ಸ್ವತಃ ಗಣೇಶಮೂರ್ತಿ ತಯಾರಿ ಕಾರ್ಯದಲ್ಲಿ ತೊಡಗಿದ್ದಾರೆ.

ಒಬ್ಬರು ದಿನಕ್ಕೆ 4-5 ತೆಂಗಿನಕಾಯಿ ಗಣೇಶಮೂರ್ತಿಗಳನ್ನು ಕೆತ್ತನೆ ಮಾಡುತ್ತಿದ್ದು, ವಿಶೇಷವೆಂದರೆ ಈಶ್ವರನ ಮುಖದಲ್ಲಿಯೇ ಗಣೇಶಮೂರ್ತಿಯನ್ನು ಕೆತ್ತನೆ ಮಾಡಲಾಗುತ್ತದೆ. ಒಂದು ಗಣೇಶಮೂರ್ತಿಯನ್ನು 400ರೂ. ಗೆ ಮಾರಾಟ ಮಾಡಲಾಗುತ್ತಿದೆ. ಕಳೆದ ವರ್ಷ ಸುಮಾರು 870 ತೆಂಗಿನಕಾಯಿ ಗಣೇಶಮೂರ್ತಿಗಳನ್ನು ಮಾರಾಟ ಮಾಡಿದ್ದರೆ, ಈ ವರ್ಷ 2,500ಕ್ಕೂ ಹೆಚ್ಚು ಗಣೇಶಮೂರ್ತಿಗಳ ಮಾರಾಟದ ಗುರಿ ಹೊಂದಲಾಗಿದೆ. ಇದಕ್ಕಾಗಿ ಶಾಂತಾ ಗಡಕರ ಸೇರಿದಂತೆ ಅನೇಕರನ್ನೊಳಗೊಂಡ ಫ‌ಲದಾಯಕ ಗಣಪತಿ ಕೆತ್ತನೆಗಾರರ ಸಮಿತಿ ರಚಿಸಲಾಗಿದ್ದು, ಸಮಿತಿ ಮೂಲಕ ಮಾರಾಟ ಮಾಡಲಾಗುತ್ತದೆ. ಮುಂದಿನ ವರ್ಷ ಇದರ ಪ್ರಮಾಣ ಮೂರ್‍ನಾಲ್ಕು ಪಟ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ. 

Advertisement

ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಪ್ರೇರಣೆಯಂತೆ ಪರಿಸರಸ್ನೇಹಿ ಆಗಿರಬೇಕು, ಗಣೇಶಮೂರ್ತಿ ಫ‌ಲದಾಯಕವೂ ಆಗಿರಬೇಕೆಂದು ಕಳೆದ ವರ್ಷದಿಂದ ತೆಂಗಿನಕಾಯಿಯಲ್ಲಿ ಗಣೇಶಮೂರ್ತಿ ಕೆತ್ತನೆ ತರಬೇತಿ-ಮಾರಾಟ ಕೈಗೊಳ್ಳಲಾಗಿದೆ. ವಿವಿಧ ಜಿಲ್ಲೆಯವರು ಈ ಬಾರಿ ತರಬೇತಿ ಪಡೆದಿದ್ದು, ಮುಂದಿನ ವರ್ಷ ಉಕದ ಅನೇಕ ಜಿಲ್ಲೆಗಳಲ್ಲಿ ತೆಂಗಿನ ಗಣೇಶಮೂರ್ತಿ ತಯಾರು ದೊಡ್ಡ ಪ್ರಮಾಣದಲ್ಲಿ ಆಗಲಿದೆ. ಇದೇ ವರ್ಷವೇ ಸುಮಾರು 1 ಸಾವಿರ ತೆಂಗಿನ ಗಣೇಶಮೂರ್ತಿಗಳು ಬೇಕು ಎಂದು ಮೈಸೂರಿನಿಂದ ಬೇಡಿಕೆ ಬಂದಿದೆ. ಈ ಬಾರಿ ನೀಡಲು ಸಾಧ್ಯವಾಗದು. ಮುಂದಿನ ವರ್ಷದಿಂದ ಧರ್ಮಸ್ಥಳದ ಸಿರಿ ಗ್ರಾಮೋದ್ಯೋಗ ಸಂಸ್ಥೆ ಮೂಲಕ ರಾಜ್ಯಾದ್ಯಂತ ಮಾರಾಟಕ್ಕೆ ಪೂಜ್ಯರ ಪ್ರೇರಣೆಯಾಗಿದೆ.
ದಿನೇಶ, ಜಿಲ್ಲಾ ನಿರ್ದೇಶಕ, ಗ್ರಾಮಾಭಿವೃದ್ಧಿ ಯೋಜನೆ 

ಅಮರೇಗೌಡ ಗೋನವಾರ 

Advertisement

Udayavani is now on Telegram. Click here to join our channel and stay updated with the latest news.

Next