Advertisement
ಮಹಾನಗರ ಪಾಲಿಕೆ, ಜಿಲ್ಲಾಮಟ್ಟದಲ್ಲಿ ಪಕ್ಷ ಇಲ್ಲವೆ ಸರಕಾರ ಮಟ್ಟದ ಆಯ್ಕೆಗಳೇ ಇರಲಿ, ಬಿಜೆಪಿ ತನ್ನದೇ ಶಿಸ್ತು ಪಾಲಿಸಿಕೊಂಡು ಬಂದಿದೆ. ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಕೆಲವೊಂದು ಹೆಸರು ಶಿಫಾರಸು ಮಾಡುವುದು, ಕೋರ್ ಕಮಿಟಿ ಸಭೆಯಲ್ಲಿ ಯಾರಿಗೆ ಅವಕಾಶ ನೀಡಬೇಕೆಂಬುದಕ್ಕೆ ಅಂತಿಮ ಮುದ್ರೆಯೊತ್ತುವ ಮೂಲಕ ಆಯ್ಕೆಗಳು ಗೊತ್ತು ಗೊತ್ತಿಲ್ಲದ ರೀತಿಯಲ್ಲಿ ಸರಳ ಹಾಗೂ ಸುಲಭವಾಗುವಂತೆ ಮಾಡುವುದು ಬಿಜೆಪಿಯ ವಿಶೇಷವಾಗಿತ್ತು. ಆದರೆ, ಇದೀಗ ಆ ಪಕ್ಷದಲ್ಲಿಯೂ ಆಯ್ಕೆ ಸರಳತೆ ಬದಲು ಗೊಂದಲ-ಸಂಕೀರ್ಣ, ಕೊನೆ ಗಳಿಗೆವರೆಗೂ ಒತ್ತಡದ ಸ್ಥಿತಿ ನಿರ್ಮಾಣವಾಗುತ್ತಿದೆ.
Related Articles
Advertisement
ಸ್ಥಾಯಿ ಸಮಿತಿಗಳಿಗೆ ಆಯ್ಕೆ ವಿಚಾರದಲ್ಲೂ ಬಿಜೆಪಿಯಲ್ಲಿನ ವಿದ್ಯಮಾನ ಹಿಂದಿಗಿಂತ ಭಿನ್ನವಾಗಿರಲಿಲ್ಲ. ಪಕ್ಷದ ಶಾಸಕರು ತಮ್ಮದೇ ಬೆಂಬಲಿ ಪಾಲಿಕೆ ಸದಸ್ಯರಿಗೆ ಪಟ್ಟ ಕಟ್ಟುವ ಪೈಪೋಟಿಗಿಳಿದಿದ್ದರು ಎನ್ನಲಾಗುತ್ತಿದೆ. ಪಾಲಿಕೆಯ 4 ಸ್ಥಾಯಿ ಸಮಿತಿಗಳಲ್ಲಿ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿಗೆ ಪೈಪೋಟಿ ಹೆಚ್ಚಿತ್ತಲ್ಲದೆ, ಕೊನೆ ಗಳಿಗೆವರೆಗೂ ಬಿಜೆಪಿ ಮುಖಂಡರು ಸಭೆ ನಡೆಸುವ, ಬೆವರಿಳಿಸುವ ಕಾರ್ಯ ಮಾಡಬೇಕಾಗಿ ಬಂದಿತು. ಅದು ಎಷ್ಟರ ಮಟ್ಟಿಗೆ ಎಂದರೆ ಸ್ಥಾಯಿ ಸಮಿತಿಗಳ ಸದಸ್ಯರ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆಗೆ ಇನ್ನು 10 ನಿಮಿಷ ಇದೆ ಎನ್ನುವಾಗಲೇ ಕೆಲ ತೀರ್ಮಾನ ಕೈಗೊಂಡು ನಾಮಪತ್ರ ಸಲ್ಲಿಕೆ ಮಾಡಿಸಬೇಕಾಗಿ ಬಂದಿತು.
ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿಗೆ ಧಾರವಾಡದ ವಿಜಯಾನಂದ ಶೆಟ್ಟಿ ಹಾಗೂ ಹುಬ್ಬಳ್ಳಿಯ ಮಲ್ಲಿಕಾರ್ಜುನ ಗುಂಡೂರ ಅವರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಧಾರವಾಡಕ್ಕೆ ಮಹಾಪೌರ ಸ್ಥಾನ ನೀಡಿದ್ದರಿಂದ, ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಹುಬ್ಬಳ್ಳಿಗೆ ನೀಡಬೇಕು ಎಂಬ ಒತ್ತಡ ಅನೇಕರದ್ದಾಗಿತ್ತು. ಮಲ್ಲಿಕಾರ್ಜುನ ಗುಂಡೂರು ಅವಕಾಶ ಪಡೆಯಲು ಸಾಕಷ್ಟು ಯತ್ನಿಸಿದ್ದರು.
ಮಹಾಪೌರ ಕಚೇರಿ-ಉಪಮಹಾಪೌರರ ಕಚೇರಿಯಲ್ಲಿ ನಡೆದ ಸಭೆಗಳಲ್ಲಿ ಬಿಜೆಪಿ ಮುಖಂಡರು, ಮಹಾಪೌರ, ಉಪ ಮಹಾಪೌರ, ಸಭಾನಾಯಕ, ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಹಾಗೂ ಮುಖಂಡರು ಆ ಕಡೆ ಒಮ್ಮೆ, ಈ ಕಡೆ ಒಮ್ಮೆ ಎಂದು ಓಡಾಡುತ್ತಿದ್ದರು. ಗುಸು ಗುಸು ಮಾತಿಗಿಳಿದಿದ್ದರು. ಅಂತಿಮವಾಗಿ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿಗೆ ಮಲ್ಲಿಕಾರ್ಜುನ ಗುಂಡೂರು ಹಾಗೂ ವಿಜಯಾನಂದ ಶೆಟ್ಟಿ ಅವರಲ್ಲಿ ವಿಜಯಾನಂದ ಶೆಟ್ಟಿ ಅವರನ್ನೇ ಅಂತಿಮಗೊಳಿಸಲಾಗಿತ್ತು.
ಮಹಾಪೌರ ಸ್ಥಾನ ಧಾರವಾಡಕ್ಕೆ ನೀಡಿದ್ದರೂ ಅವರು ಪ್ರತಿನಿಧಿಸುವ ವಾರ್ಡ್ ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುತ್ತಿದ್ದು, ಉಪ ಮಹಾಪೌರ ಸ್ಥಾನ, ಪಾಲಿಕೆ ಸಭಾನಾಯಕ ಸ್ಥಾನ ಪಡೆದ ಸದಸ್ಯರ ವಾರ್ಡ್‌ಗಳು ಹು-ಧಾ ಕೇಂದ್ರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ. ಹುಡಾ ಅಧ್ಯಕ್ಷರು ಸಹ ಇದೇ ಕ್ಷೇತ್ರ ವ್ಯಾಪ್ತಿಯವರಾಗಿದ್ದಾರೆ. ಆದರೆ, ಹು-ಧಾ ಪಶ್ಚಿಮ ಕ್ಷೇತ್ರ ಹಾಗೂ ಪೂರ್ವ ಕ್ಷೇತ್ರಗಳಿಗೆ ಆದ್ಯತೆ ದೊರೆತಿಲ್ಲ ಎಂಬ ಕೊರಗು ನೀಗಿಸುವ ನಿಟ್ಟಿನಲ್ಲಿ ಪಾಲಿಕೆಯಲ್ಲಿ ಎರಡು ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನಗಳನ್ನು ಈ ಎರಡು ಕ್ಷೇತ್ರಗಳಿಗೆ ನೀಡಲು ಬಿಜೆಪಿ ಮುಖಂಡರು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಿವು ಮೆಣಸಿನಕಾಯಿ ಅವರಿಗೆ ತೆರಿಗೆ ನಿರ್ಧರಣೆ, ಹಣಕಾಸು ಹಾಗೂ ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ದೊರೆಯುವುದು ಬಹುತೇಕ ಖಚಿತವಾಗಿದ್ದು, ತೀವ್ರ ಪೈಪೋಟಿಗೆ ಸಿಲುಕಿದ್ದ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಹು-ಧಾ ಪಶ್ಚಿಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿಜಯಾನಂದ ಶೆಟ್ಟಿ ಅವರಿಗೆ ದೊರೆಯುವುದು ಬಹುತೇಕ ಖಚಿತವಾಗಿದೆ ಎನ್ನಲಾಗುತ್ತಿದೆ.
ಕೈನಲ್ಲೂ ಪೈಪೋಟಿ ಮಹಾನಗರ ಪಾಲಿಕೆಯಲ್ಲಿ ವಿಪಕ್ಷ ಸ್ಥಾನದಲ್ಲಿರುವ ಕಾಂಗ್ರೆಸ್‌ನಲ್ಲೂ ಸ್ಥಾಯಿ ಸಮಿತಿ ಸದಸ್ಯ ಸ್ಥಾನಕ್ಕಾಗಿ ಪೈಪೋಟಿ ತೀವ್ರಗೊಂಡಿತ್ತು. ಬೆಳಗ್ಗೆ 8-9 ಗಂಟೆಯಿಂದಲೇ ಆರಂಭವಾದ ಚರ್ಚೆ ನಾಮಪತ್ರ ಸಲ್ಲಿಕೆಗೆ 10 ನಿಮಿಷ ಇದೆ ಎನ್ನುವವರೆಗೂ ಯಾರನ್ನು ಸೇರಿಸಬೇಕು ಎಂಬ ಗೊಂದಲ, ಪೈಪೋಟಿ ತೀವ್ರವಾಗಿತ್ತು. ನಾಲ್ಕು ಸ್ಥಾಯಿ ಸಮಿತಿಗಳಲ್ಲಿ ಪ್ರತಿ ಸಮಿತಿಗೆ ಕಾಂಗ್ರೆಸ್‌ನಿಂದ ಮೂವರು ಸದಸ್ಯರಿಗೆ ಅವಕಾಶ ಇತ್ತು. ಒಟ್ಟು 33 ಸದಸ್ಯ ಬಲದ ಕಾಂಗ್ರೆಸ್‌ನಲ್ಲಿ ಒಟ್ಟು 12 ಸದಸ್ಯರಿಗೆ ಅವಕಾಶ ದೊರೆತಿದ್ದು, ಅದಕ್ಕಾಗಿಯೇ ಅನೇಕರು ಪೈಪೋಟಿ, ತಮ್ಮದೇ ಒತ್ತಡಕ್ಕೆ ಮುಂದಾಗಿದ್ದರು ಎನ್ನಲಾಗಿದೆ.
-ಅಮರೇಗೌಡ ಗೋನವಾರ