Advertisement

ಹುಬ್ಬಳ್ಳಿ:ಕೆರೆಯಲ್ಲಿ ಶವ- ಉಮಚಗಿಯಲ್ಲಿ ನೀರಿಗೆ ಪರದಾಟ

05:54 PM May 19, 2023 | Team Udayavani |

ಹುಬ್ಬಳ್ಳಿ: ಎಂತಹ ಬೇಸಿಗೆಯಿದ್ದರೂ ಈ ಹಳ್ಳಿಯ ಕೆರೆಯಲ್ಲಿ ನೀರಿಗೆ ಬರ ಇರಲ್ಲ. ಆದರೆ ಈ ಕೆರೆಯಲ್ಲಿ ವ್ಯಕ್ತಿಯೊಬ್ಬರು ಬಿದ್ದು ಮೂರ್‍ನಾಲ್ಕು ದಿನಗಳ ನಂತರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ತಮ್ಮೂರಿನ ಕೆರೆ ನೀರು ಕುಡಿಯಲು ಜನರು ಹಿಂದೇಟು ಹಾಕಿದ್ದಾರೆ.

Advertisement

ಮಳೆ ಆರಂಭವಾಗುವವರೆಗೆ ತಾತ್ಕಾಲಿಕವಾಗಿ ಟ್ಯಾಂಕರ್‌ ನೀರಿನ ಬೇಡಿಕೆಯಿಟ್ಟಿದ್ದಾರೆ. ಇದೀಗ ಕುಡಿಯುವ ನೀರಿಗಾಗಿ ಅಕ್ಕಪಕ್ಕದ ಗ್ರಾಮಗಳಿಗೆ ತೆರಳುವಂತಾಗಿದೆ.

ಇದು ಹುಬ್ಬಳ್ಳಿ ತಾಲೂಕಿನ ನವಲಗುಂದ ಮತಕ್ಷೇತ್ರದ ಉಮ್ಮಚಗಿ ಗ್ರಾಮದ ಪರಿಸ್ಥಿತಿ. ಎಂತಹ ಬರ ಬಂದರೂ ಈ ಗ್ರಾಮದ
ಕೆರೆಗೆ ಬರ ಎನ್ನುವುದಿಲ್ಲ. ಈ ಬಾರಿ ಸುತ್ತಲಿನ ಗ್ರಾಮಗಳಲ್ಲಿ ಈಗಾಗಲೇ ಒಂದಿಷ್ಟು ನೀರಿನ ಸಮಸ್ಯೆ ಉಂಟಾಗಿದ್ದರೂ ಇಲ್ಲಿ ಮಾತ್ರ ಅಂತಹ ಸಮಸ್ಯೆ ಕಂಡಿರಲಿಲ್ಲ. ಆದರೆ ಇತ್ತೀಚೆಗೆ ಗ್ರಾಮದ ವ್ಯಕ್ತಿಯೊಬ್ಬ ಕೆರೆಗೆ ಬಿದ್ದು ಮೂರ್‍ನಾಲ್ಕು ದಿನಗಳ ನಂತರ ಕೊಳತೆ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಇದನ್ನು ಗ್ರಾಮದ ಜನ ಕಣ್ಣಾರೆ ನೋಡಿದ್ದಾರೆ. ಹೀಗಾಗಿ ಈ ಕೆರೆಯ ನೀರಿನ ಕುಡಿಯಲು ಸುತಾರಾಮ ಒಪ್ಪುತ್ತಿಲ್ಲ. ಹೀಗಾಗಿ ಗ್ರಾಮದಲ್ಲಿ ಕುಡಿಯುವ ನೀರಿಗೆ ಆಹಾಕಾರ ಎದ್ದಿದ್ದು, ಎರಡು ಕೊಡ ನೀರಿಗಾಗಿ ಇಡೀ ದಿನ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪಕ್ಕದ ರೊಟ್ಟಿಗವಾಡ ಗ್ರಾಮಸ್ಥರು ಇದೇ ಕೆರೆಯ ನೀರನ್ನು ಕುಡಿಯಲು ಬಳಸುತ್ತಿದ್ದರು. ಇತ್ತೀಚೆಗೆ ನಡೆದ ಘಟನೆಯಿಂದ ಎರಡೂ ಗ್ರಾಮದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಉಮ್ಮಚಗಿ-ರೊಟ್ಟಿಗವಾಡ ಗ್ರಾಮದ ನಡುವೆ
ಒಂದು ಸಣ್ಣ ಕೆರೆಯಿದ್ದು, ಈ ನೀರಿಗಾಗಿ ಇಡೀ ದಿನ ಬಡಿದಾಡುವಂತಾಗಿದೆ. ಬೇಸಿಗೆ ಪರಿಣಾಮ ಅಲ್ಲಿಯೂ ನೀರು ಸಂಪೂರ್ಣ ಬತ್ತಿದ್ದು, ಗಂಟೆಗೆ ಎರಡು ಕೊಡ ನೀರು ದೊರೆಯುವುದೇ ದುಸ್ತರವಾಗಿರುವಾಗ ನೀರಿಗಾಗಿ ಇಡೀ ದಿನ ಕಾಯುವಂತಾಗಿದೆ. ಇನ್ನು ಸೈಕಲ್‌, ದ್ವಿಚಕ್ರ ಮೂಲಕ ಐದು ಕಿಮೀ ದೂರದ ನಲವಡಿ, ಆರು ಕಿಲೋಮೀಟರ್‌ ದೂರದ ಕೊಡ್ಲಿವಾಡಕ್ಕೆ ಹೋಗಿ ನೀರು ತರಬೇಕು. ಹೀಗಾಗಿ ಗ್ರಾಮದ ಮಹಿಳೆಯರು ಎರಡು ಕೊಡ ಕುಡಿಯುವ ನೀರಿಗಾಗಿ ಬೇಸತ್ತು ಹೋಗಿದ್ದಾರೆ.

ಟ್ಯಾಂಕರ್‌ ನೀರಿಗೆ ಬೇಡಿಕೆ: ಘಟನೆ ನಂತರ ಗ್ರಾಮಸ್ಥರು ಯಾವುದೇ ಕಾರಣಕ್ಕೂ ಕೆರೆ ನೀರು ಕುಡಿಯಲ್ಲ ಎಂದು ಹಿಂದೇಟು ಹಾಕಿದ್ದಾರೆ. ಹೀಗಾಗಿ ಫಿಲ್ಟರ್‌ ನೀರು ಕುಡಿಯಲು ಬಳಸಿ ಎಂದು 2 ರೂ. 20 ಲೀಟರ್‌ ನೀರು ದೊರೆಯುವಂತೆ ವ್ಯವಸ್ಥೆ ಮಾಡಿದ್ದಾರೆ. ಈ ಫಿಲ್ಟರ್‌ಗೆ ಬರುವುದು ಇದೇ ಕೆರೆಯ ನೀರಾಗಿರುವುದರಿಂದ ಏನಾದರೂ ಹೆಚ್ಚು ಕಡಿಮೆಯಾದರೆ ಏನು ಮಾಡೋದು ಎಂಬುದು ಗ್ರಾಮಸ್ಥರ ಭೀತಿಯಾಗಿದೆ. ಇದರ ಬದಲಾಗಿ ಈ ಹಿಂದೆ ನೀಡುತ್ತಿದ್ದಂತೆ ತಾತ್ಕಾಲಿಕವಾಗಿ ಟ್ಯಾಂಕರ್‌ ಮೂಲಕ ನೀರು ಪೂರೈಸುವಂತೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೆ ಗ್ರಾಪಂ ವತಿಯಿಂದ ತಾಪಂ, ತಹಶೀಲ್ದಾರ್‌, ಜಿಪಂ ಸಿಇಒ ಅವರಿಗೆ ಟ್ಯಾಂಕರ್‌ ನೀರಿಗೆ ಮಾಡಿದ ಮನವಿ ಪ್ರಯೋಜನವಾಗಿಲ್ಲ.

Advertisement

ಕೆರೆ ನೀರು ಹೊರಕ್ಕೆ ಪಟ್ಟು: ಮೂರ್‍ನಾಲ್ಕು ದಿನಗಳ ಕಾಲ ದೇಹ ಕೆರೆಯಲಿದ್ದು, ಮೀನು ಇತರೆ ಕೀಟಗಳು ದೇಹವನ್ನು ಸಂಪೂರ್ಣ ಕಚ್ಚಿದ್ದವು. ಹೀಗಾಗಿ ಇಂತಹ ನೀರನ್ನು ಕುಡಿಯಲು ಸಾಧ್ಯವಿಲ್ಲ. ಹೀಗಾಗಿ ಕೆರೆಯ ನೀರನ್ನು ಹೊರಕ್ಕೆ ಹರಿಸುವಂತೆ ಗ್ರಾಮಸ್ಥರ ಪಟ್ಟಾಗಿದೆ. ಆದರೆ ಮುಂದೆ ಮಳೆ ಸಮಸ್ಯೆಯಾದರೆ ಇರುವ ಇತರೆ ಬಳಕೆ, ಜಾನುವಾರುಗಳಿಗೆ ನೀರಿನ ಸಮಸ್ಯೆ ಎದುರಾದರೆ ಮತ್ತೂಂದು ಸಂಕಷ್ಟ ಅನುಭವಿಸಬೇಕಾಗುತ್ತದೆ ಎಂಬುದು ಅಧಿಕಾರಿಗಳ ಮುನ್ನಾಲೋಚನೆಯಾಗಿದೆ. ಮುಂದೆ ಚೆನ್ನಾಗಿ ಮಳೆಯಾಗುತ್ತದೆ ಈ ನೀರನ್ನು ಹೊರ ಹಾಕದು ಹೊರತು ಕುಡಿಯಲು ಬಳಸಲ್ಲ. ಅಲ್ಲಿಯವರೆಗೆ ಟ್ಯಾಂಕರ್‌ ನೀರು ಪೂರೈಸಿ ಎಂಬುದು ಒತ್ತಡವಾಗಿದೆ.

ನೀರಿನಲ್ಲಿ ಯಾವುದೇ ದೋಷವಿಲ್ಲ: ಕೆರೆಯಲ್ಲಿ ಮೃತದೇಹ ದೊರೆತ ಮಾರನೇ ದಿನವೇ ನೀರಿನ ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಆದರೆ ನೀರಿನಲ್ಲಿ ಯಾವುದೇ ಹಾನಿಕಾರಕ ಅಂಶ ಅಥವಾ ಕುಡಿಯಲು ಯೋಗ್ಯವಲ್ಲದ ಬ್ಯಾಕ್ಟಿರಿಯಾಗಳು ಇಲ್ಲ ಎಂದು ಪ್ರಯೋಗಾಲಯ ವರದಿ ಬಂದಿದೆ. ಪುನಃ ಮತ್ತೊಮ್ಮೆ ನೀರು ಪರೀಕ್ಷೆ ಮಾಡಿಸಿದಾಗಲೂ ಅದೇ ಫಲಿತಾಂಶ
ಬಂದಿದೆ. ಅಲ್ಲದೆ ವೈಜ್ಞಾನಿಕವಾಗಿ ವೈದ್ಯರು ಹಾಗೂ ತಂತ್ರಜ್ಞರ ಸಮಕ್ಷಮದಲ್ಲಿ ಔಷಧಿ ಸಿಂಪರಣೆ ನಿರ್ವಹಿಸಲಾಗಿದೆ. ಅಲ್ಲದೆ ಅಧಿಕಾರಿಗಳು ಆ ನೀರನ್ನು ಕುಡಿದು ಧೈರ್ಯ ಹೇಳಿದರೂ ಗ್ರಾಮಸ್ಥರು ಮಾತ್ರ ಬಳಕೆಗೆ ಹಿಂದೇಟು ಹಾಕಿದ್ದಾರೆ. ಅವರ ಆಯ್ಕೆ
ಟ್ಯಾಂಕರ್‌ ನೀರು ಎಂಬುದಾಗಿದೆ.

ಕಣ್ಣಾರೆ ಕಂಡ ನಂತರ ಅಂತಹ ನೀರು ಕುಡಿಯಲು ಹೇಗೆ ಸಾಧ್ಯ. ಎರಡು ಕೊಡ ನೀರಿಗಾಗಿ ಇಡೀ ದಿನ ಕಾಯುವ ಪರಿಸ್ಥಿತಿ
ಎದುರಾಗಿದೆ. ಬಿಸಿಲಲ್ಲಿ ದೂರದ ಗ್ರಾಮಗಳಿಗೆ ಹೋಗಿ ನೀರು ತರಬೇಕು. ಗ್ರಾಮಸ್ಥರ ನೀರಿನ ಸಮಸ್ಯೆಬಗ್ಗೆ ಅಧಿಕಾರಿಗಳಿಗೆ ಯಾಕೆ ಇಷ್ಟೊಂದು ನಿರ್ಲಕ್ಷé ಎಂಬುದು ಅರ್ಥವಾಗುತ್ತಿಲ್ಲ. ಈ ಹಿಂದೆ ಗ್ರಾಮಕ್ಕೆ ಪೂರೈಸುತ್ತಿದ್ದಂತೆ ತಾತ್ಕಾಲಿಕವಾಗಿ ಟ್ಯಾಂಕರ್‌ ನೀರು ನೀಡಬೇಕು.
ಶಿವನಗೌಡ ಪಾಟೀಲ, ಗ್ರಾಮಸ್ಥರು

ಕೆರೆಯ ನೀರನ್ನು ಎರಡು ಬಾರಿ ವೈಜ್ಞಾನಿಕವಾಗಿ ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗಿದೆ. ಯಾವುದೇ ಹಾನಿಕಾರಕ ಅಂಶಗಳು ಪತ್ತೆಯಾಗಿಲ್ಲ ಎನ್ನುವ ವರದಿ ಬಂದಿದೆ. ಆದರೂ ಹಿಂದೇಟು ಹಾಕಿದ ಪರಿಣಾಮ ಅತ್ಯಂತ ಕಡಿಮೆ ದರದಲ್ಲಿ ಫಿಲ್ಟರ್‌ ನೀರು ಕೊಡುತ್ತಿದ್ದರೂ ಬಳಸುತ್ತಿಲ್ಲ. ಹಿರಿಯ ಅಧಿಕಾರಿಗಳು ಗ್ರಾಮಕ್ಕೆ ಬಂದು ಪರಿಶೀಲಿಸಿದ್ದಾರೆ. ಆದರೆ ಟ್ಯಾಂಕರ್‌ ನೀರಿಗೆ ಗ್ರಾಮಸ್ಥರ ಬೇಡಿಕೆಯಾಗಿದೆ. ಲಲಿತಾ ವಡ್ಡರ, ಗ್ರಾಪಂ ಅಭಿವೃದ್ಧಿ ಅಧಿಕಾರಿ.

ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next