Advertisement
ನೌಕರರ ರಾಜ್ಯ ವಿಮಾ ನಿಗಮದ ವತಿಯಿಂದ ಹುಬ್ಬಳ್ಳಿ ಹಾಗೂ ದಾವಣಗೆರೆಯ ಅತ್ಯಾಧುನಿಕ 50 ಹಾಸಿಗೆಗಳ ಆಸ್ಪತ್ರೆಗಳನ್ನು ಲೋಕಾರ್ಪಣೆ ಮಾಡಿ ಸಚಿವರು ಮಾತನಾಡಿದರು. ಕಾರ್ಮಿಕರ ಸಂಖ್ಯೆ ಹೆಚ್ಚುತ್ತಿರುವುದನ್ನು ಪರಿಗಣಿಸಿ ಆಸ್ಪತ್ರೆಗಳಲ್ಲಿ ಬೆಡ್‌ಗಳ ಸಂಖ್ಯೆ ಹೆಚ್ಚಿಸುವುದು ಅಗತ್ಯವಿದೆ.
Related Articles
Advertisement
ಹುಬ್ಬಳ್ಳಿಯಲ್ಲಿ ವಲಯ ಕಚೇರಿ: ಹುಬ್ಬಳ್ಳಿಯಲ್ಲಿ ಇಎಸ್‌ಐ ವಲಯ ಕಚೇರಿ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಇಲ್ಲಿ ಉಪ ವಲಯ ಕಚೇರಿಯಿದ್ದು, ಇಲ್ಲಿನ ಕಾರ್ಮಿಕರು ವಲಯ ಕಚೇರಿಗಾಗಿ 400 ಕಿ.ಮೀ. ದೂರದ ಗುಲ್ಬರ್ಗಕ್ಕೆ ಹೋಗಬೇಕಿದೆ. ಈ ಭಾಗದಲ್ಲಿ 6,000 ಕಾರ್ಖಾನೆಗಳಿದ್ದು, 6 ಲಕ್ಷ ಕಾರ್ಮಿಕರಿದ್ದಾರೆ.
ಉಪ ವಲಯ ಕಚೇರಿ 5 ಜಿಲ್ಲೆಗಳ ವ್ಯಾಪ್ತಿ ಹೊಂದಿದ್ದು, ನೌಕರರಿಗೆ ಅನುಕೂಲತೆ ಕಲ್ಪಿಸಲು ಪೂರಕ ಕ್ರಮ ತೆಗೆದುಕೊಳ್ಳಲಾಗುವುದು ಎಂದರು. ರಾಜ್ಯದಲ್ಲಿ 81,285 ಕೈಗಾರಿಕಾ ಘಟಕಗಳಿದ್ದು, ಇಎಸ್‌ಐ ಸೌಲಭ್ಯ ಪಡೆಯುವ 23 ಲಕ್ಷ ಕಾರ್ಮಿಕರಿದ್ದಾರೆ. ದೇಶದಲ್ಲಿ ಸುಮಾರು 35 ಕೋಟಿ ಅಸಂಘಟಿತ ಕಾರ್ಮಿಕರಿದ್ದು, ಕೇಂದ್ರ ಸರ್ಕಾರ ಅಸಂಘಟಿತ ಕಾರ್ಮಿಕರ ಒಳಿತಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ.
ಕಟ್ಟಡ ಕಾರ್ಮಿಕರಿಗೆ ಇಎಸ್‌ಐ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆ ನೀಡಲಾಗುತ್ತಿದೆ. ಆಶಾ – ಅಂಗನವಾಡಿ ಕಾರ್ಯಕರ್ತೆಯರು, ಮಧ್ಯಾಹ್ನ ಬಿಸಿಯೂಟ ಕಾರ್ಯಕರ್ತೆಯರನ್ನು ಇಎಸ್‌ಐ ವ್ಯಾಪ್ತಿಗೆ ತರಲು ಪ್ರಯತ್ನಿಸಲಾಗುವುದು. ನೂತನ ಕಾರ್ಮಿಕರ ನೋಂದಣಿ ಕಾರ್ಯ ನಡೆದಿದೆ ಎಂದು ಹೇಳಿದರು.
ಬೀಡಿ ಕಾರ್ಮಿಕರಿಗೆ ಮನೆ: ಬೀಡಿ ಕಾರ್ಮಿಕರಿಗೆ ಮನೆ ನಿರ್ಮಾಣಕ್ಕೆ 40 ಸಾವಿರ ರೂ. ನೆರವು ನೀಡಲಾಗುತ್ತಿತ್ತು, ಈಗ ಈ ಪ್ರಮಾಣವನ್ನು 1.50 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಅವಳಿ ನಗರದಲ್ಲಿ ಸಾಕಷ್ಟು ಬೀಡಿ ಕಾರ್ಮಿಕರು ವಸತಿ ರಹಿತರಿದ್ದು, ಸೂರು ಕಲ್ಪಿಸುವಂತೆ ಮನವಿ ಮಾಡಲಾಗಿದೆ.
2000 ಜನರ ಪಟ್ಟಿ ನೀಡಿದರೆ ಅವರಿಗೆ ಮನೆ ನಿರ್ಮಿಸಲು ಅಗತ್ಯ ಅನುದಾನ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದರು. ಸ್ವತ್ಛ ಭಾರತ ಅಭಿಯಾನದ ದಿಸೆಯಲ್ಲಿ ಎಲ್ಲ ಇಎಸ್‌ಐ ಆಸ್ಪತ್ರೆಗಳಲ್ಲಿ ಸ್ವತ್ಛತೆಗೆ ಆದ್ಯತೆ ನೀಡುವಂತೆ ಸೂಚಿಸಲಾಗಿದೆ. ಪ್ರತಿ ದಿನ ಹಾಸಿಗೆಗಳ ಬೆಡ್ ಶೀಟ್ ಬದಲಿಸುವಂತೆ ಆದೇಶಿಸಿದ್ದು, ಸ್ವತ್ಛತೆಗೆ ಆದ್ಯತೆ ನೀಡದ ಆಸ್ಪತ್ರೆ ಕುರಿತು ಸಾಮಾಜಿಕ ಜಾಲತಾಣದ ಮೂಲಕ ನನ್ನ ಗಮನಕ್ಕೆ ತಂದರೆ ಕೂಡಲೇ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು.
ಸಚಿವ ವಿನಯ ಕುಲಕರ್ಣಿ, ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ, ಸಂಸದ ಪ್ರಹ್ಲಾದ ಜೋಶಿ, ಶಾಸಕ ಪ್ರಸಾದ ಅಬ್ಬಯ್ಯ, ಮಹಾಪೌರ ಡಿ.ಕೆ.ಚವ್ಹಾಣ, ಉಪಮಹಾಪೌರ ಲಕ್ಷ್ಮಿ ಬಿಜವಾಡ, ಎ.ಕೆ.ಸಿನ್ಹಾ, ಅರುಣಕುಮಾರ ಗುಪ್ತಾ, ಜೆ.ಎಚ್. ನಾಯಕ ಮೊದಲಾದವರಿದ್ದರು.