ಹುಬ್ಬಳ್ಳಿ: ಮಹಾನಗರ ಪಾಲಿಕೆ ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆ ಚುನಾವಣೆ ವೇಳೆ ಮಹಾಪೌರ ಹಾಗೂ ಉಪ ಮಹಾಪೌರರನ್ನು ಸದಸ್ಯರ ಸ್ಥಾನದಲ್ಲಿ ಕುಳಿತುಕೊಳ್ಳುವಂತೆ ಸೂಚಿಸಿದ ಪ್ರಾದೇಶಿಕ ಆಯುಕ್ತ, ಚುನಾವಣಾಧಿಕಾರಿ ಆದಿತ್ಯ ಆಮ್ಲಾನ್ ಬಿಸ್ವಾಸ್ ಹಾಗೂ ಆಯುಕ್ತ ಡಾ| ಬಿ.ಗೋಪಾಲಕೃಷ್ಣ ಅವರನ್ನು ಸಭಾನಾಯಕ ತಿಪ್ಪಣ್ಣ ಮಜ್ಜಗಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡರಲ್ಲದೆ, ಸದನದೊಳಗೆ ಸಮವಸ್ತ್ರಧಾರಿ ಪೊಲೀಸರ ಆಗಮನಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗಳಿಗೆ ಸದಸ್ಯರ ಆಯ್ಕೆಗೆ ಸೋಮವಾರ ಚುನಾವಣೆ ನಡೆಯಿತು. ಇಲ್ಲಿನ ಪಾಲಿಕೆ ಸಭಾಭವನದಲ್ಲಿ ಸದಸ್ಯರ ಚುನಾವಣೆ ಹಾಗೂ ಆಯ್ಕೆ ಘೋಷಣೆ ಸಂದರ್ಭದಲ್ಲಿ ಚುನಾವಣಾಧಿಕಾರಿಯಾದ ಬಿಸ್ವಾಸ್ ಅವರು ಮಹಾಪೌರ ಈರೇಶ ಅಂಚಟಗೇರಿ ಹಾಗೂ ಉಪ ಮಹಾಪೌರ ಉಮಾ ಮುಕುಂದ ಅವರನ್ನು ಸದಸ್ಯರ ಆಸನಗಳಲ್ಲಿ ಕುಳಿತುಕೊಳ್ಳುವಂತೆ ಸೂಚಿಸಿದರು.
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಭಾನಾಯಕ ತಿಪ್ಪಣ್ಣ ಮಜ್ಜಗಿ, ಮಹಾಪೌರ-ಉಪ ಮಹಾಪೌರರಿಗೆ ಅವಮಾನ ಮಾಡುತ್ತೀರಿ ಎಂದರು. ಚುನಾವಣೆ ಪ್ರಕ್ರಿಯೆಯಲ್ಲಿ ಅವರು ವೇದಿಕೆಯಲ್ಲಿ ಕುಳಿತುಕೊಳ್ಳುವಂತಿಲ್ಲ ಎಂದು ಪ್ರಾದೇಶಿಕ ಆಯುಕ್ತರು ಹೇಳುತ್ತಿದ್ದಂತೆಯೇ ಮತ್ತಷ್ಟು ಆಕ್ರೋಶಗೊಂಡ ಸಭಾನಾಯಕರು ಮಹಾಪೌರ-ಉಪ ಮಹಾಪೌರರು ಆಯ್ಕೆಯಾದ ನಂತರದಲ್ಲಿ ಅವರದ್ದೇ ಘನತೆ ಹೊಂದಿರುತ್ತಾರೆ. ಅವರನ್ನು ಸದಸ್ಯರ ಸಾಲಿನಲ್ಲಿ ಕುಳಿತುಕೊಳ್ಳುವಂತೆ ಸೂಚಿಸುವ ನಿಯಮ ಯಾವುದು ಹೇಳಿ ಎಂದು ಪಟ್ಟು ಹಿಡಿದರು. ಹಿರಿಯ ಐಎಎಸ್ ಅಧಿಕಾರಿಯಾಗಿದ್ದುಕೊಂದು ಮಹಾಪೌರರ ಘನತೆಗೆ ಈ ರೀತಿ ಧಕ್ಕೆಯುಂಟು ಮಾಡುವ ರೀತಿಯಲ್ಲಿ ವರ್ತಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದಾಗ ಇಬ್ಬರ ನಡುವೆ ವಾಗ್ವಾದ ನಡೆಯಿತು.
ಒಳಗಡೆ ಏರುಧ್ವನಿಯ ಮಾತುಗಳು ಕೇಳಿಬಂದಿದ್ದರಿಂದ ಪೊಲೀಸ್ ಅಧಿಕಾರಿಯೊಬ್ಬರು ಸಮವಸ್ತ್ರಧಾರಿಯಾಗಿ ಸದನದ ಒಳಗೆ ಪ್ರವೇಶಿಸಿದರು. ಇದರಿಂದ ಇನ್ನಷ್ಟು ಆಕ್ರೋಶಗೊಂಡ ಸಭಾನಾಯಕರು ಸಮವಸ್ತ್ರಧಾರಿ ಪೊಲೀಸರು ಸದನದ ಒಳಗೆ ಹೇಗೆ ಬಂದರು? ಅವರಿಗೆ ಈ ಅಧಿಕಾರ ನೀಡಿದ್ದು ಯಾರು? ಎಂದು ಪ್ರಶ್ನಿಸಿದರು. ಸದನದ ಒಳಗೆ ಇಂತಹ ಸಂದರ್ಭದಲ್ಲಿ ಮಾರ್ಷಲ್ಸ್ ಬರಬೇಕೆ ವಿನಃ ಪೊಲೀಸರು ಬರುವಂತಿಲ್ಲ ಎಂಬ ಸಾಮಾನ್ಯ ಜ್ಞಾನವೂ ಇಲ್ಲವೆಂದರೆ ಹೇಗೆ? ಸಭೆಯ ಘನತೆ-ಗೌರವ ಬೇಡವೆ? ಎಂದು ಪ್ರಶ್ನಿಸಿದರು.
ಪೊಲೀಸರ ಪ್ರವೇಶ ಕುರಿತಾಗಿ ಕ್ಷಮೆಯಾಚಿಸಿದ ಪಾಲಿಕೆ ಆಯುಕ್ತರು ಅಸಮಾಧಾನಗೊಂಡ ಸದಸ್ಯರನ್ನು ಸಮಾಧಾನ ಪಡಿಸಿದರು. ಕೊನೆಗೆ ಮಹಾಪೌರ-ಉಪಮಹಾಪೌರರನ್ನು ವೇದಿಕೆಯಲ್ಲಿಯೇ ಆಸೀನರಾಗಲು ಅವಕಾಶ ನೀಡಿ, ಪ್ರಾದೇಶಿಕ ಆಯುಕ್ತರು ನಾಲ್ಕು ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆ ಘೋಷಣೆ ಮಾಡಿದರು.